ಬೇಲೂರು ತಾಲೂಕು ಶೆಟ್ಟಿಗೆರೆ ಗ್ರಾಮಕ್ಕೆ ಶಾಸಕ ಎಚ್.ಕೆ.ಸುರೇಶ್ ಶುಕ್ರವಾರ ತೆರಳಿ ಮೃತರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.  
ಹಾಸನ

ಮಂತ್ರಾಲಯ ಬಳಿ ಅಪಘಾತದ ಸಾವಿನ ಸಂಖ್ಯೆ 9ಕ್ಕೆ ಏರಿಕೆ

ಪ್ರಮುಖ ಮುಖ್ಯಾಂಶಗಳು

  • ತೀವ್ರ ಗಾಯಗೊಂಡಿದ್ದ ಆಸ್ಪತ್ರೆಯಲ್ಲಿ ಬಾಲಕಿ ಸಾವು
  • ಒಂದೇ ಕುಟುಂಬದ 7 ಜನರ ದುರ್ಮರಣ
  • ಬೇಲೂರು ಶೆಟ್ಟಿಗೆರೆ ಗ್ರಾಮದಲ್ಲಿ ನೀರವ ಮೌನ
ಹಾಸನ/ಬೇಲೂರು: ಗುರುರಾಯರ ದರ್ಶನಕ್ಕೆ ತೆರಳುತ್ತಿದ್ದಾಗ ಮಂತ್ರಾಲಯ ಸಮೀಪ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಗುರುವಾರ 8 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. ತೀವ್ರ ಗಾಯಗೊಂಡಿದ್ದ ಬೇಲೂರು ತಾಲೂಕಿನ ಶೆಟ್ಟಿಗೆರೆ ಗ್ರಾಮದ ತೇಜಸ್ವಿನಿ(16) ಶುಕ್ರವಾರ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಅಪಘಾತದಲ್ಲಿ ಸಾವಿಗೀಡಾದವರ ಮೃತದೇಹವನ್ನು ಶುಕ್ರವಾರ ಬೆಳಗಿನ ಜಾವಾ 3 ಗಂಟೆ ಸುಮಾರಿಗೆ ಬೇಲೂರು ತಾಲೂಕಿನ ಶೆಟ್ಟಿಹಳ್ಳಿಗೆ ತರಲಾಯಿತು. ಈ ಸಂದರ್ಭ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು. ತನ್ನವರನ್ನು ಕಳೆದುಕೊಂಡ ಕುಟುಂಬದವರು, ಗ್ರಾಮಸ್ಥರು ಗೋಳಾಡಿದರು.
ಮೃತ 6 ಜನರ ಅಂತ್ಯಕ್ರಿಯೆ ಶುಕ್ರವಾರ ಬೇಲೂರು ಮತ್ತು ಶೆಟ್ಟಿಗೆರೆ ಗ್ರಾಮದಲ್ಲಿ ನಡೆಯಿತು. ತೇಜಸ್ವಿನಿ ಮೃತದೇಹ ಗ್ರಾಮಕ್ಕೆ ತರಬೇಕಿದೆ.
ಬೇಲೂರು ತಾಲೂಕು ಶೆಟ್ಟಿಗೆರೆ ಗ್ರಾಮದ ಕುಮಾರ್(40), ಸುನೀಲ್(27), ಲೋಲಾಕ್ಷಿ(38), ಜಯಮ್ಮ(60), ವೀಣಾ(24), ಬೆಳ್ಳಿ ಅ.ನಿಶ್ಚಿತಾ(3), ತೇಜಸ್ವಿನಿ(16) ಮೃತಪಟ್ಟವರು. ಕುಟುಂಬಕ್ಕೆ ಆಧಾರವಾಗಿದ್ದವರು, ಮುಂದೆ ಬಾಳಿ ಬದುಕಬೇಕಾದವರು ಯಾವುದೇ ಮುನ್ಸೂಚನೆ ಇಲ್ಲದೆ ಚಿರನಿದ್ರೆಗೆ ಜಾರಿದ್ದರಿಂದ ಮೃತರ ಅವಲಂಬಿತರನ್ನು ಗಾಢ ಮೌನಕ್ಕೆ ದೂಡಿದೆ.
ಹೆಂಡತಿ, ಮಗಳು ಸೇರಿ ಕುಟುಂಬ 7 ಸದಸ್ಯರನ್ನು ಕಳೆದುಕೊಂಡು ಪುಟ್ಟರಾಜು ಅವರು ಮೃತದೇಹಗಳ ಎದುರು ಬಿಕ್ಕಿ ಬಿಕ್ಕಿ ಅತ್ತರು. ತನ್ನವರನ್ನು ಅಪ್ಪಿಕೊಂಡು ಗೋಳಾಡಿದರು. ‘ಸಹೋದರ ಕುಮಾರನ ಜತೆ ಪತ್ನಿ ಲೋಲಾಕ್ಷಿ, ಮಗಳು ತೇಜಸ್ವಿನಿ ಮಂತ್ರಾಲಯಕ್ಕೆ ಹೋಗಿದ್ದರು. ಬರುವಾಗ ಹೆಣವಾಗಿ ಬಂದಿದ್ದಾರೆ. ನನ್ನವರನ್ನೆಲ್ಲ ಕಳೆದುಕೊಂಡು ನಾನು ಹೇಗೆ ಬದುಕಲಿ’ ಎಂದು ಪುಟ್ಟರಾಜು ಗೋಳಾಡಿದರು. ಅಪಘಾತದಲ್ಲಿ ಮೃತಪಟ್ಟವರನ್ನು ನೆನೆದು ಸಂಬಂಧಿ ವೃದ್ಧೆ ಜಯಮ್ಮ ರೋದಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಬೇಲೂರು ಪಟ್ಟಣದ ಹಿಂದೂ ರುದ್ರಭೂಮಿಯಲ್ಲಿ ಗಾರೆ ಕುಮಾರ್ ಮಗಳು ವೀಣಾ ಮತ್ತು ಮೊಮ್ಮಗಳು ಬೆಳ್ಳಿ ಅ.ನಿಶ್ಚಿತಾರ ಅಂತ್ಯಕ್ರಿಯೆ ಶುಕ್ರವಾರ ನಡೆಯಿತು. ಶೆಟ್ಟಿಗೆರೆ ಗ್ರಾಮದಲ್ಲಿರುವ ಮೃತ ಕುಮಾರ್ ಜಮೀನಿನಲ್ಲಿ ಗಾರೆ ಕುಮಾರ್, ಮಗ ಸುನೀಲ್ ಅಂತ್ಯಕ್ರಿಯೆ ನಡೆಯಿತು. ನಂತರ ಮೃತ ಕುಮಾರ್ ಸಹೋದರನ ಜಮೀನಿನಲ್ಲಿ ಸಹೋದರನ ಹೆಂಡತಿ ಲೋಲಾಕ್ಷಿ ಅಂತ್ಯಕ್ರಿಯೆ ನಡೆಯಿತು. ಸಮೀಪದ ಹಳೇ ಶೆಟ್ಟಿಗೆರೆ ಗ್ರಾಮದಲ್ಲಿ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಕುಮಾರ್ ಅತ್ತೆ ಜಯಮ್ಮ ಅಂತ್ಯಕ್ರಿಯೆ ನಡೆಯಿತು.
ಶೆಟ್ಟಿಗೆರೆ ಗ್ರಾಮದ ಕುಮಾರ್ ಕುಟುಂಬದ ಸದಸ್ಯರು ಮಂತ್ರಾಲಯಕ್ಕೆ ತೆರಳುವ ಸಂದರ್ಭ ಅಪಘಾತದಲ್ಲಿ 9 ಜನರು ಮೃತಪಟ್ಟು, 9 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆಂಧ್ರಪ್ರದೇಶದ ಕರ್ನೂಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಕರೆತಂದು ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕ್ರಮವಹಿಸಲಾಗುವುದು. ದುಃಖದಲ್ಲಿರುವ ಕುಟುಂಬ ಸದಸ್ಯರೊಂದಿಗೆ ಇದ್ದು, ನೆರವು ನೀಡಲಾಗುವುದು.
ಎಚ್.ಕೆ.ಸುರೇಶ್ ಬೇಲೂರು ಶಾಸಕ