ಕಾರಿನೊಳಗೆ ಕುಳಿತ ಸ್ಥಿತಿಯಲ್ಲಿ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು, ಗ್ರಾಮಸ್ಥರು ಕೊಲೆ ಪ್ರಕರಣ ಎಂದು ಆರೋಪಿಸಿ ಶವ ಪತ್ತೆಯಾದ ಹಾಸನ-ಹಳೇಬೀಡು ರಸ್ತೆಯ ಬಾರ್ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.
ಹಾಸನ: ಕಾರಿನೊಳಗೆ ವ್ಯಕ್ತಿಯ ಮೃತ ದೇಹ ಪತ್ತೆಯಾಗಿದ್ದು, ಗ್ರಾಮಸ್ಥರು ಕೊಲೆ ಎಂದು ಆರೋಪಿಸಿ ಶವ ಪತ್ತೆಯಾದ ಹಾಸನ-ಹಳೇಬೀಡು ರಸ್ತೆಯ ರಾಯಪುರ ಗ್ರಾಮದ ಸಮೀಪದಲ್ಲಿರುವ ಬಾರ್ ಎದುರು ಶವ ಇಟ್ಟು ಶುಕ್ರವಾರ ಪ್ರತಿಭಟನೆ ನಡೆಸಿದರು.
ತಾಲೂಕಿನ ಸಾಲಗಾಮೆ ಹೋಬಳಿ ಸೀಗೆ ವೀರಾಪುರ ಗ್ರಾಮದ ದೊರೆಸ್ವಾಮಿ (42) ಮೃತ. ಬಾರ್ ಎದುರು ನಿಲ್ಲಿಸಿದ್ದ ಕಾರಿನೊಳಗೆ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ವೀರಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಆಕ್ರೋಶ ವ್ಯಕ್ತಪಡಿಸಿದರು. ದೊರೆಸ್ವಾಮಿ ಅವರನ್ನು ಮೊದಲು ಕೊಲೆ ಮಾಡಿ ನಂತರ ಕಾರಿನೊಳಗೆ ಹಾಕಲಾಗಿದೆ ಎಂದು ಆರೋಪಿಸಿದ ಗ್ರಾಮಸ್ಥರು, ಮೃತ ದೇಹವನ್ನು ಬಾರ್ ಮುಂಭಾಗದಲ್ಲೇ ಇಟ್ಟು ರಸ್ತೆ ಮಧ್ಯೆ ಮರದ ಕೊಂಬೆಗಳನ್ನು ಹಾಕಿ ಪ್ರತಿಭಟನೆ ನಡೆಸಿದರು. ಇದರಿಂದ ಹಾಸನ-ಹಳೇಬೀಡು ರಸ್ತೆಯಲ್ಲಿ ಕೆಲಕಾಲ ವಾಹನ ಸಂಚಾರ ವ್ಯತ್ಯಯವಾಯಿತು.
ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಬಾರ್ ಆವರಣದಲ್ಲಿ ಅಳವಡಿಸಿರುವ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ನ್ಯಾಯ ಸಿಗುವವರೆಗೆ ಸ್ಥಳವನ್ನು ಬಿಡುವುದಿಲ್ಲ ಎಂದು ಬಾರ್ ಮುಂಭಾಗದಲ್ಲಿ ಶಾಮಿಯಾನ ಹಾಗೂ ಕುರ್ಚಿಗಳನ್ನು ಹಾಕಿ ಪ್ರತಿಭಟನೆ ನಡೆಸಲು ಮುಂದಾದರು. ಈ ಸಂದರ್ಭದಲ್ಲಿ ಪೊಲೀಸ್ ಹಾಗೂ ಗ್ರಾಮಸ್ಥರ ನಡುವೆ ವಾಗ್ವಾದ ನಡೆಯಿತು. ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.