ಕೆಂಚಟ್ಟಹಳ್ಳಿ ಬಳಿಯ ನಿವೃತ್ತ ಯೋಧರ ಭವನದಲ್ಲಿ ಸಿಐಎಸ್‌ಎಫ್ 57ನೇ ವರ್ಷದ ಸಂಸ್ಥಾಪನಾ ದಿನ ಆಯೋಜಿಸಲಾಗಿತ್ತು. ಆಶೀಸ್ ದಾಲಿಯನ್, ಹನುಮಂತಪ್ಪ, ಶೇಖ್ ನವಾಬ್ ಖಾನ್, ನಾಗೇಶ್, ಶಿವಲಿಂಗಪ್ಪ ಸಂಪಗಾವಿ, ಮುಕುಂದಸ್ವಾಮಿ, ನಿಂಗೇಗೌಡ ಇತರರಿದ್ದರು.
- ದೇಶಕ್ಕೆ ಸಿಐಎಸ್‌ಎಫ್ ಸಿಬ್ಬಂದಿ ಕೊಡುಗೆ ಅಪಾರ
- ಡೆಪ್ಯುಟಿ ಕಮಾಂಡೆಂಟ್ ಎಂ.ಸಿ.ಎಫ್. ಅಧಿಕಾರಿ ಆಶೀಸ್ ದಾಲಿಯನ್ ಹೇಳಿಕೆ
ಹಾಸನ: ದೇಶದ ಪ್ರಮುಖ ಕೈಗಾರಿಕಾ ಸಂಸ್ಥೆಗಳು, ವಿಮಾನ ನಿಲ್ದಾಣಗಳು, ಬಂದರುಗಳು ಹಾಗೂ ರಾಷ್ಟ್ರೀಯ ಮಹತ್ವದ ಸ್ಥಳಗಳ ಭದ್ರತೆಯಲ್ಲಿ ಕೇಂದ್ರೀಯ ಔದ್ಯೋಗಿಕ ಸುರಕ್ಷಾ ಪಡೆ (ಸಿಐಎಸ್‌ಎಫ್) ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಡೆಪ್ಯುಟಿ ಕಮಾಂಡೆಂಟ್ ಎಂ.ಸಿ.ಎಫ್. ಅಧಿಕಾರಿ ಆಶೀಸ್ ದಾಲಿಯನ್ ಹೇಳಿದರು.
ನಗರದ ಹೊರವಲಯದಲ್ಲಿನ ಬೆಂಗಳೂರು ರಸ್ತೆಯಲ್ಲಿರುವ ಕೆಂಚಟ್ಟಹಳ್ಳಿ ಬಳಿಯಿರುವ ನಿವೃತ್ತ ಯೋಧರ ಭವನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಸಿಐಎಸ್‌ಎಫ್ 57ನೇ ವರ್ಷದ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿ, ದೇಶದ ಆಂತರಿಕ ಭದ್ರತೆ ಕಾಪಾಡುವಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ದೇಶದಾದ್ಯಂತ ಇರುವ ವಿಮಾನ ನಿಲ್ದಾಣಗಳು, ಸಮುದ್ರ ಬಂದರುಗಳು, ಮಹತ್ವದ ಕೈಗಾರಿಕಾ ಘಟಕಗಳು, ಸಂಸತ್ ಭವನ ಸೇರಿದಂತೆ ಹಲವು ವಿಐಪಿ ಭದ್ರತಾ ವ್ಯವಸ್ಥೆಗಳಲ್ಲಿ ಈ ಪಡೆ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.
ಸಿಐಎಸ್‌ಎಫ್ ಅನ್ನು 1969ರಲ್ಲಿ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿ ಸ್ಥಾಪಿಸಿದರು. ಆರಂಭದಲ್ಲಿ ಕೈಗಾರಿಕಾ ಸಂಸ್ಥೆಗಳ ಭದ್ರತೆ ಉದ್ದೇಶದಿಂದ ಸ್ಥಾಪನೆಯಾದ ಈ ಪಡೆ, ನಂತರ ದೇಶದ ವಿವಿಧ ಪ್ರಮುಖ ಕ್ಷೇತ್ರಗಳ ಭದ್ರತೆಯನ್ನು ಹೊತ್ತುಕೊಂಡು ಇಂದು ರಾಷ್ಟ್ರದ ಪ್ರಮುಖ ಸುರಕ್ಷಾ ಪಡೆಯಾಗಿ ಬೆಳೆದಿದೆ. ಇತ್ತೀಚಿನ ವರ್ಷಗಳಲ್ಲಿ ದೇಶದ ಭದ್ರತಾ ವ್ಯವಸ್ಥೆಯಲ್ಲಿ ಸಿ.ಐ.ಎಸ್.ಎಫ್. ಮಹತ್ವ ಹೆಚ್ಚುತ್ತಲೇ ಬಂದಿದೆ. ವಿಮಾನ ನಿಲ್ದಾಣಗಳ ಭದ್ರತೆ, ಬಂದರುಗಳ ಸುರಕ್ಷತೆ, ಪ್ರಮುಖ ವಿದ್ಯುತ್ ಉತ್ಪಾದನಾ ಘಟಕಗಳು, ಅಣುಶಕ್ತಿ ಕೇಂದ್ರಗಳು ಸೇರಿದಂತೆ ಹಲವಾರು ಸೂಕ್ಷ್ಮ ಪ್ರದೇಶಗಳಲ್ಲಿ ಈ ಪಡೆ ತನ್ನ ಸೇವೆಯನ್ನು ನೀಡುತ್ತಿದೆ. ಸಾರ್ವಜನಿಕ ಸುರಕ್ಷತೆ ಮತ್ತು ರಾಷ್ಟ್ರೀಯ ಆಸ್ತಿ ರಕ್ಷಣೆ ಎಂಬ ಎರಡು ಪ್ರಮುಖ ಗುರಿಗಳನ್ನು ಹೊಂದಿಕೊಂಡು ಸಿಐಎಸ್‌ಎಫ್ ನಿರಂತರವಾಗಿ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿಯೂ ಮುಂಚೂಣಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸುನಾಮಿ ಸೇರಿದಂತೆ ಅನೇಕ ವಿಪತ್ತುಗಳ ಸಮಯದಲ್ಲಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಪಾಲ್ಗೊಂಡು ಜನರ ಜೀವ ರಕ್ಷಣೆಗಾಗಿ ಮಹತ್ವದ ಕೊಡುಗೆ ನೀಡಲಾಗಿದೆ. ಸಂಕಷ್ಟದ ಸಂದರ್ಭಗಳಲ್ಲಿ ಜನರಿಗೆ ನೆರವಾಗುವುದು ಪ್ರಮುಖ ಕರ್ತವ್ಯಗಳಲ್ಲಿ ಒಂದಾಗಿದೆ. ಮಿಲಿಟರಿ ಪಡೆಗಳು ಯುದ್ಧ ಸಮಯದಲ್ಲಿ ದೇಶವನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸಿದರೆ, ಸಿ.ಐ.ಎಸ್.ಎಫ್. ಸೇರಿದಂತೆ ಭದ್ರತಾ ಪಡೆಗಳು ಶಾಂತಿ ಕಾಲದಲ್ಲಿಯೂ ದೇಶದ ಆಂತರಿಕ ಭದ್ರತೆಯನ್ನು ಕಾಪಾಡುವ ಮಹತ್ವದ ಜವಾಬ್ದಾರಿಯನ್ನು ಹೊತ್ತಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿ.ಐ.ಎಸ್.ಎಫ್. 57ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷ ಹನುಮಂತಪ್ಪ, ಗೌರವಾಧ್ಯಕ್ಷ ಶೇಖ್ ನವಾಬ್ ಖಾನ್, ಸಿ.ಎಫ್.ಎಸ್. ಅಧ್ಯಕ್ಷ ನಾಗೇಶ್, ಬೆಂಗಳೂರು ರಾಜ್ಯ ಸಮಿತಿ ಕಾರ್ಯದರ್ಶಿ ಶಿವಲಿಂಗಪ್ಪ ಸಂಪಗಾವಿ, ಮುಕುಂದಸ್ವಾಮಿ, ಖಜಾಂಚಿ ನಿಂಗೇಗೌಡ ಇತರರಿದ್ದರು.