ಶ್ರವಣಬೆಳಗೊಳ ಹೋಬಳಿ ಹಡೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ನಿರ್ದೇಶಕರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿದರು. ವೆಂಕಟೇಶ್, ಕುಂಬಾರಳ್ಳಿ ರಮೇಶ್, ಮಂಜಣ್ಣ, ಲತಾ ತಮ್ಮಯ್ಯ, ಜಯರಾಮ್, ಗೇಣಿದಾರ್ ಇದ್ದರು.
- ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯ
ಶ್ರವಣಬೆಳಗೊಳ: ಗ್ರಾಮೀಣ ಪ್ರದೇಶದಲ್ಲಿ ರೈತರು ಸ್ವಾವಲಂಬಿಗಳಾಗಲು ಹೈನುಗಾರಿಕೆ ಅಭಿವೃದ್ಧಿ ಬಹುಮುಖ್ಯ ಪಾತ್ರ ವಹಿಸಿದ್ದು, ಈ ಕ್ಷೇತ್ರಕ್ಕೆ ಆದ್ಯತೆ ನೀಡುವುದು ನಮ್ಮ ಕರ್ತವ್ಯ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಹೋಬಳಿಯಲ್ಲಿ ಇತ್ತೀಚೆಗೆ ನಡೆದ ಹಡೇನಹಳ್ಳಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ನಿರ್ದೇಶಕರ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೈನುಗಾರಿಕೆಯ ಉತ್ತೇಜನದಿಂದ ರೈತರ ಆರ್ಥಿಕ ಬದುಕು ಸುಧಾರಿಸಿದ್ದು, ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮನೆಗಳಲ್ಲಿ ಹಸುಗಳನ್ನು ಸಾಕಿ ಸ್ವಯಂಉದ್ಯೋಗದಿಂದ ಸ್ವಾವಲಂಬಿಗಳಾಗಿ ಬದುಕು ಸಾಗಿಸಲು ಸಹಕಾರಿಯಾಗಿದೆ. ನಾನು ತಾಲೂಕು ಪಂಚಾಯಿತಿ ಅಧ್ಯಕ್ಷನಾಗಿದ್ದ ಅವಧಿಯಿಂದಲೂ ಶಿಕ್ಷಣ, ಆರೋಗ್ಯ, ಕೃಷಿ, ಹೈನುಗಾರಿಕೆ, ಸಹಕಾರ ಕ್ಷೇತ್ರ, ಕ್ರೀಡೆ ಹಾಗೂ ಸಾಹಿತ್ಯ ಕ್ಷೇತ್ರ ಸೇರಿದಂತೆ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಶ್ರಮ ವಹಿಸಿದ್ದೇವೆ. ಆಯಾ ಕಾಲಘಟ್ಟದಲ್ಲಿ ಯಾವುದೇ ಸರ್ಕಾರಗಳು ಇದ್ದರೂ ಶಾಸನ ಬದ್ಧವಾಗಿ ಕೊಟ್ಟ ಅಧಿಕಾರವನ್ನು ಸದ್ಬಳಕೆ ಮಾಡಿಕೊಂಡು ಕ್ಷೇತ್ರದ ಜನತೆಯ ಪರವಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಡೇರಿ ಕಟ್ಟಡ ನಿರ್ಮಾಣಕ್ಕೆ ಸಹಾಯಧನ, ಮಹಾತ್ಮಗಾಂಧಿ ನರೇಗಾ ಯೋಜನೆ ಅಡಿಯಲ್ಲಿ ಗ್ರಾಮಗಳ ಅಭಿವೃದ್ಧಿಗೆ ಸಹಕಾರ ನೀಡಲಾಗಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಮಾಜಿ ಅಧ್ಯಕ್ಷ ರಮೇಶ್ ಕುಂಬಾರಳ್ಳಿ, ಎಪಿಎಂಸಿ ಅಧ್ಯಕ್ಷ ವೆಂಕಟೇಶ್, ವಳಗೆರಳ್ಳಿ ಮಂಜಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಲತಾ ತಮ್ಮಯ್ಯ, ಜಯರಾಮ್, ಮುಖಂಡರಾದ ಪ್ರವೀಣ್ ಚಿಕ್ಕಬಿಳ್ತಿ, ಸಿಂಹಾದ್ರಿ ಮಂಜಣ್ಣ, ಗೇಣಿದಾರ್, ಕಾಳೇಗೌಡ, ರವಿ, ದೊರೆಸ್ವಾಮಿ, ಎಚ್.ಎನ್.ಮಂಜೇಗೌಡ, ಗೋವಿಂದೇಗೌಡ ಮುಂತಾದವರಿದ್ದರು.