ತಾಲೂಕಿನ ಹೆಬ್ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ನಿರ್ದೇಶಕರು ಮತ್ತು ಮುಖಂಡರನ್ನು ಸನ್ಮಾನಿಸಲಾಯಿತು
- ಶಾಸಕ ಎಚ್.ಕೆ.ಸುರೇಶ್ ಹೇಳಿಕೆ
- ಹೆಬ್ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡ ಉದ್ಘಾಟನೆ
ಬೇಲೂರು: ಅತಿವೃಷ್ಟಿ ಅಥವಾ ಅನಾವೃಷ್ಟಿಯಿಂದ ರೈತರು ತತ್ತರಿಸಿದ ಸಂದರ್ಭದಲ್ಲೂ ಸ್ವಾವಲಂಬಿಯಾಗಿ ಬದುಕಲು ಮತ್ತು ಆರ್ಥಿಕವಾಗಿ ಸದೃಢರಾಗಲು ಹೈನುಗಾರಿಕೆ ಸಹಾಯಕವಾಗಿದೆ ಎಂದು ಶಾಸಕ ಎಚ್.ಕೆ.ಸುರೇಶ್ ಹೇಳಿದರು.
ತಾಲೂಕಿನ ಹೆಬ್ಬಾಳು ಹಾಲು ಉತ್ಪಾದಕರ ಸಹಕಾರ ಸಂಘದಿಂದ ನಿರ್ಮಿಸಿರುವ ನೂತನ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತನ ಬದುಕು ಹೀನಾಯ ಸ್ಥಿತಿಗೆ ತಲುಪಿದೆ. ಇಂತಹ ಸಂದರ್ಭಗಳಲ್ಲಿ ರೈತರಿಗೆ ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಮುಂದೆ ಬರಲು ಹಾಲಿನ ಡೇರಿಗಳು ಕಾರಣವಾಗಿವೆ. ಅಲ್ಲದೆ ಹಾಸನ ಜಿಲ್ಲೆಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಸ್ಥಾಪಿಸಿ ರೈತರಿಗೆ ಅನುಕೂಲ ಕಲ್ಪಿಸಿ ಕೊಡುವಲ್ಲಿ ಶಾಸಕ ಎಚ್.ಡಿ.ರೇವಣ್ಣ ಅವರ ಪರಿಶ್ರಮ ಎಂದಿಗೂ ಮರೆಯುವಂತಿಲ್ಲ. ಈ ಸಂಘಗಳ ಮೂಲಕ ಹಾಲನ್ನು ಹಾಕಿ ಉತ್ತಮ ಜೀವನ ನಡೆಸಲು ಗ್ರಾಮೀಣ ಭಾಗದ ರೈತರಿಗೆ ಹಾಲು ಉತ್ಪಾದಕರ ಸಂಘ ಸಹಕಾರಿಯಾಗಿದ್ದು, ಸಂಘಕ್ಕೆ ಸ್ವಂತವಾಗಿ ಹೊಸ ಕಟ್ಟಡ ನಿರ್ಮಿಸಿರುವುದು ಶ್ಲಾಘನೀಯವಾಗಿದೆ. ಈ ಸಂಘದಿಂದ ರೈತರಿಗೆ ಮತ್ತಷ್ಟು ಅನುಕೂಲವಾಗಲಿ ಎಂದರು.
ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಜಿಲ್ಲೆಯಲ್ಲಿ ಹೈನುಗಾರಿಕೆಗೆ ಉತ್ತೇಜನ ನೀಡಿ ಜಿಲ್ಲೆಯಲ್ಲಿ ರೈತರು ತಮ್ಮ ಬದುಕಿನಲ್ಲಿ ಉತ್ತಮ ಜೀವನ ನಡೆಸುವುದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮತ್ತು ಎಚ್.ಡಿ.ರೇವಣ್ಣ ಅವರ ಮುಂದಾಲೋಚನೆಯೇ ಕಾರಣ. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರೈತರ ನೆರವಿಗಾಗಿ ಸಾಲಮನ್ನಾ ಮಾಡಿ ಸಹಕಾರ ನೀಡಿದ್ದಾರೆ. ಸಹಕಾರಿ ಕ್ಷೇತ್ರ ಜಿಲ್ಲೆಯಲ್ಲಿ ದೊಡ್ಡ ಮಟ್ಟದಿಂದ ಬೆಳೆದಿದೆ, ನಾನು ಶಾಸಕನಾಗಿದ್ದಾಗ ಈ ಭಾಗದ ಬಹುತೇಕ ಕಾಮಗಾರಿಗೆ ಹೆಚ್ಚಿನ ಅನುದಾನ ನೀಡಿ ಕೆಲಸ ಮಾಡಿಸಿದ್ದೆ. ಈ ಭಾಗದ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಅನುಕೂಲವಾಗುವ ಹೆಬ್ಬಾಳು ಏತ ನೀರಾವರಿಗೆ ಈಗಿನ ಶಾಸಕರು ಅನುಮೋದನೆ ಮಾಡಿಸಬೇಕು ಎಂದರು.
ಹೆಬ್ಬಾಳು ಹಾಲು ಉತ್ಪಾದಕರ ಸಹಕಾರ ಸಂಘದ ಜಿಲ್ಲಾ ನಿರ್ದೇಶಕ ರಾಮಚಂದ್ರೇಗೌಡ, ಅಧ್ಯಕ್ಷ ರೇಣುಕಯ್ಯ, ಗ್ರಾಪಂ ಅಧ್ಯಕ್ಷೆ ಧ್ರುವಕುಮಾರಿ, ಸಂಘದ ವಿಸ್ತರಣಾಧಿಕಾರಿ ಪುಟ್ಟರಾಮು, ಸಹಾಯಕ ವ್ಯವಸ್ಥಾಪಕ ದಿನೇಶ್, ಸುರೇಶ್, ಕಾರ್ಯದರ್ಶಿ ಶಂಕರೇಗೌಡ, ಮಾಜಿ ಅಧ್ಯಕ್ಷ ಶಾಂತಮೂರ್ತಿ, ಮುಖಂಡರಾದ ಬಿ.ಎಂ.ದೊಡ್ಡವೀರೇಗೌಡ, ಮಲ್ಲೇಗೌಡ, ಚಂದ್ರಶೇಖರಯ್ಯ, ಭುವನೇಶ್, ವಿಘ್ನೇಶಯ್ಯ, ಜಗದೀಶ್, ತೀರ್ಥಾನಂದ್, ಮೋಹನ್, ಉಮೇಶ್, ಜಗದೀಶ್, ವೇದಮೂರ್ತಿ, ನಂಜೇಶ, ದಾನಮ್ಮ ಸೇರಿದಂತೆ ಇತರರಿದ್ದರು.