ಚನ್ನರಾಯಪಟ್ಟಣದ ಅಕ್ಷರ ಶಾಲೆಯಲ್ಲಿ ಆಯೋಜಿಸಿದ್ದ ಶ್ರೀಲಂಕಾದ ಫ್ಯೂಚರ್ ಲೀಡರ್ ಸಂಸ್ಥೆಯ ಸಹಯೋಗದೊಂದಿಗೆ ವಸುಧೈವ ಕುಟುಂಬಕಂ ಭಾರತ- ಶ್ರೀಲಂಕಾ ದೇಶಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಶ್ರೀಲಂಕಾದ ಕಲಾತಂಡದಿಂದ ಸಾಂಸ್ಕೃತಿ ಕಾರ್ಯಕ್ರಮ ನಡೆಸಿಕೊಟ್ಟರು. 
ಹಾಸನ

ಉತ್ತಮ ಬಾಂಧವ್ಯಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ ಅಭಿಮತ
  • ವಸುದೈವ ಕುಟುಂಬಕಂ ಕಾರ್ಯಕ್ರಮ
ಚನ್ನರಾಯಪಟ್ಟಣ: ಸಾಂಸ್ಕೃತಿಕ ಕಾರ್ಯಕ್ರಮಗಳು ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯ ಉಂಟು ಮಾಡುತ್ತದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಹೇಳಿದರು.
ಪಟ್ಟಣದ ಅಕ್ಷರ ಶಾಲೆಯಲ್ಲಿ ಶ್ರೀಲಂಕಾದ ಫ್ಯೂಚರ್ ಲೀಡರ್ ಸಂಸ್ಥೆಯ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ವಸುದೈವ ಕುಟುಂಬಕಂ ಭಾರತ- ಶ್ರೀಲಂಕಾ ದೇಶಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಿಧತೆಯಲ್ಲಿ ಏಕತೆ ಮೂಡಿಸುವ ಸಾಂಸ್ಕೃತಿಕ ವೈಭವ ಭಾರತದ್ದಾಗಿದೆ. ದೇಶಗಳ ನಡುವಿನ ಶ್ರೀಮಂತ ಸಂಸ್ಕೃತಿ, ಪರಂಪರೆ ತಿಳಿಸಿಕೊಡುತ್ತದೆ. ವಿಭಿನ್ನ ಸಂಸ್ಕೃತಿಯ ಪರಿಚಯವಾಗುತ್ತದೆ. ಇದು ದೇಶದ ಭವಿಷ್ಯಕ್ಕೆ ಭದ್ರಬುನಾದಿ ಹಾಕುತ್ತದೆ ಎಂದರು.
ಶ್ರೀಲಂಕಾ ದೇಶದ ಕಲಾವಿದರು ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಗ್ರಾಮೀಣ ಪ್ರದೇಶದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅನಾವರಣಗೊಳಿಸಿದ್ದಾರೆ. ಭಾರತ ಮತ್ತು ಸಿಂಹಳಿಯರ ಸಾಂಸ್ಕೃತಿಕ ವೈಭವದ ಸಮಾಗಮ ಎನ್ನಿಸಿದೆ. ಶ್ರೀಲಂಕಾದ ಕಲಾವಿದರು ಮತ್ತು ಅಕ್ಷರ ಶಾಲೆಯ ವಿದ್ಯಾರ್ಥಿಗಳು ಭರತನಾಟ್ಯ, ಯಕ್ಷಗಾನ ಹಾಗೂ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳ ಮೂಲಕ ಭಾರತ-ಶ್ರೀಲಂಕಾ ನಡುವಿನ ಸ್ನೇಹ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಬಿಂಬಿಸಿದ್ದಾರೆ ಎಂದು ತಿಳಿಸಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಎಚ್.ಬಿ.ಮದನಗೌಡ ಮಾತನಾಡಿ, ಬೆಂಗಳೂರಿನಲ್ಲಿ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಮಾಡುವ ನಿರೀಕ್ಷೆ ಇತ್ತು. ಅಕ್ಷರ ಶಾಲೆಯ ಆಡಳಿತ ಮಂಡಳಿಯ ಸಹಕಾರದಿಂದ ಚನ್ನರಾಯಪಟ್ಟಣದಲ್ಲಿ ಭಾರತ-ಶ್ರೀಲಂಕಾ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಸ್ಥಳೀಯ ಕಲಾವಿದರಿಗೆ ಶ್ರೀಲಂಕಾ ದೇಶದಲ್ಲಿ ಕಾರ್ಯಕ್ರಮ ನೀಡುವ ಅವಕಾಶ ಸಿಗಲಿದೆ ಎಂದರು.
ಅಕ್ಷರಶಾಲೆಯ ಅಧ್ಯಕ್ಷೆ ಪಿ.ಸರೋಜಾ ದೇವಿ, ಶ್ರೀಲಂಕಾ ದೇಶದ ಸಾಂಸ್ಕೃತಿಕ ಸಲಹೆಗಾರ ಉಪುಲ್ ಜನಕ ಜಯಸಿಂಘೆ ಮಾತನಾಡಿದರು. ಶ್ರೀಲಂಕಾದ ಫ್ಯೂಚರ್ ಲೀಡರ್ ಸಂಸ್ಥೆಯ ಅಧ್ಯಕ್ಷೆ ಪ್ರಿಯಾಂಗ ಬನರನಾಯಕ್, ಜೆ.ಆರ್.ಕೆಂಚೇಗೌಡ, ಅಕ್ಷರ ಶಾಲೆಯ ಕಾರ್ಯದರ್ಶಿ ಎಂ.ಆರ್.ಅನಿಲ್ ಕುಮಾರ್, ಖಜಾಂಚಿ ಸಿ.ಸಿ.ಚೇತನ್, ನಿರ್ದೇಶಕ ತಿರುಮಲ ಪ್ರಸಾದ್, ಪ್ರಾಂಶುಪಾಲ ಸುನಿಲ್ ಪ್ಯಾಟ್ರಿಕ್ ಇದ್ದರು.
ನಂತರ ಎರಡು ಗಂಟೆ ಕಾಲ ಶ್ರೀಲಂಕಾ ತಂಡದ 17 ಕಲಾವಿದರು ಹಾಗೂ ಅಕ್ಷರಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.