ಚನ್ನರಾಯಪಟ್ಟಣದ ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರೃ ದಿನಾಚರಣೆಯಲ್ಲಿ ಡಾ.ಕೆ.ನಾಗೇಶ್, ಡಾ.ಭಾರತಿ ನಾಗೇಶ್, ಪ್ರಾಂಶುಪಾಲ ಪರಮೇಶ್ ಇತರರು ಗೌರವ ವಂದನೆ ಸ್ವೀಕರಿಸಿದರು.
ಚನ್ನರಾಯಪಟ್ಟಣ :
ಭಾರತದ ಸ್ವಾತಂತ್ರ್ಯ ಹೋರಾಟವು ಜಗತ್ತಿನ ಇತಿಹಾಸದಲ್ಲೇ ವಿಶೇಷ ಮಹತ್ವ ಪಡೆದಿದೆ ಎಂದು ನಾಗೇಶ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಕೆ. ನಾಗೇಶ್ ಹೇಳಿದರು.
ಪಟ್ಟಣದ ಜ್ಞಾನಸಾಗರ ಪಬ್ಲಿಕ್ ಶಾಲೆಯಲ್ಲಿ ಶನಿವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಸಾವಿರಾರು ಹೋರಾಟಗಾರರ ತ್ಯಾಗ ಮತ್ತು ನಿಸ್ವಾರ್ಥ ಸೇವೆಯ ಫಲವಾಗಿ ನಮಗೆ ಸ್ವರಾಜ್ಯ ಲಭಿಸಿದೆ. ಅದಕ್ಕೆ ಗೌರವಿಸಿ ಪ್ರಗತಿಯ ಹಾದಿಯಲ್ಲಿ ಸಾಗಬೇಕು ಎಂದರು.
ಮಹಾತ್ಮ ಗಾಂಧೀಜಿ ಅವರ ಅಹಿಂಸೆ, ಸತ್ಯಾಗ್ರಹ, ಅಸಹಕಾರ ಚಳವಳಿ, ದಂಡಿ ಯಾತ್ರೆ, ಭಾರತ ಬಿಟ್ಟು ತೊಲಗಿ ಚಳವಳಿಗಳು ಹೋರಾಟಕ್ಕೆ ಹೊಸ ದಿಕ್ಕು ತೋರಿದವು.
ಸುಭಾಷ್ ಚಂದ್ರ ಬೋಸ್ ಅವರ ಆಜಾದ್ ಹಿಂದ್ ಫೌಜ್, ಲೋಕಮಾನ್ಯ ಬಾಲ ಗಂಗಾಧರ ತಿಲಕರ
‘ ಸ್ವರಾಜ್ಯ ನನ್ನ ಜನ್ಮಸಿದ್ಧ ಹಕ್ಕು’ ಘೋಷಣೆಗಳು ಹೋರಾಟವನ್ನು ತೀವ್ರಗೊಳಿಸಿದವು.
ದೇಶವು ಬ್ರಿಟಿಷರ ದಾಸ್ಯದಿಂದ ಮುಕ್ತಿ ಪಡೆಯಿತು. ವಿಶಾಲ ಭಾರತವನ್ನು ಒಗ್ಗೂಡಿಸಿ ಹಲವು ಭಾಷೆ, ಧರ್ಮ, ಸಂಸ್ಕೃತಿಗಳಲ್ಲಿ ಏಕತೆ ಕಾಣುವ ಪ್ರಜಾ ಪ್ರಭುತ್ವ ವ್ಯವಸ್ಥೆ ನಮ್ಮ ದೇಶದಲ್ಲಿ ಇರುವುದೂ ಒಂದು ವಿಶೇಷತೆ ಎಂದರು.
ಸದೃಢ ದೇಶ ಕಟ್ಟಲು ಹಿರಿಯರು ಮಾಡಿದ ತ್ಯಾಗ ಸಾರ್ಥಕವಾಗಿದ್ದು, ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದರು.
ನಾಗೇಶ್ ಸಮೂಹ ವಿದ್ಯಾ ಸಂಸ್ಥೆಗಳ ಸಿಇಒ ಡಾ. ಭಾರತಿ ನಾಗೇಶ್ ಮಾತನಾಡಿದರು.ವಿದ್ಯಾರ್ಥಿಗಳು ಪಥಸಂಚಲನದ ಮೂಲಕ ಗಣ್ಯರಿಗೆ ವಂದನೆ ಸಲ್ಲಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು.
ಸಂಸ್ಥೆ ನಿರ್ದೇಶಕರಾದ ನಾರಾಯಣ್, ನಂಜೇಗೌಡ, ಸರೋಜಮ್ಮ, ಡಾ. ಸುಜಾ ಫಿಲಿಪ್, ಪ್ರಾಂಶುಪಾಲ ಪರಮೇಶ್ ಹಾಜರಿದ್ದರು.