ಹೊಳೆನರಸೀಪುರ ತಾಲೂಕಿನ ಎಲೆಚಾಗಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ 2026 ರ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಸನ್ಮಾನಿಸಲಾಯಿತು. ವಿಶ್ವನಾಥ್, ಕುಮಾರ್, ಸವಿತಾ, ಪಯಾಜ್ ಪಾಷ, ಜಯರಾಮ್ ಇತರರು ಇದ್ದರು.
- ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಅಭಿಪ್ರಾಯ
ಹೊಳೆನರಸೀಪುರ: ನೀವೆಷ್ಟು ಪ್ರೀತಿಯಿಂದ ಶಿಕ್ಷಣ ಕಲಿಯುತ್ತೀರಾ ಅದಷ್ಟೇ ಪ್ರಮುಖವಾಗುತ್ತದೆ ಹೊರತು, ಸರ್ಕಾರಿ ಕಾಲೇಜು ಅಥವಾ ಖಾಸಗಿ ಕಾಲೇಜು ಯಾವ ಪರಿಣಾಮ ಉಂಟು ಮಾಡುವುದಿಲ್ಲ ಎಂದು ಪಡುವಲಹಿಪ್ಪೆ ಶ್ರೀ ಎಚ್. ಡಿ. ದೇವೇಗೌಡ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ನುಡಿದರು.
ತಾಲೂಕಿನ ಎಲೆಚಾಗಳ್ಳಿ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ 2026ರ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಮತ್ತು ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದರು.
ಈ ಕಾಲೇಜಿನಲ್ಲಿ ಒಳ್ಳೆಯ ಶೈಕ್ಷಣಿಕ ಪರಿಸರ ಇದೆ ಉತ್ತಮ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಇದ್ದಾರೆ. ವಿದ್ಯಾರ್ಥಿಗಳು ಇಂತಹ ಕಾಲೇಜಿನ್ನು ಆಯ್ಕೆ ಮಾಡಿಕೊಳ್ಳದೆ ನಗರಗಳಿಗೆ ಹೋಗುತ್ತಾರೆ ಎಂದು ಬೇಸರ ವ್ಯಕ್ತ ಪಡಿಸಿದರು.
ವಿದ್ಯಾರ್ಥಿಗಳು ಪ್ರೀತಿಯಿಂದ ಶಿಕ್ಷಣ ಕಲಿತಾಗ ಮಾತ್ರ ಅದು ಹೃದಯಕ್ಕೆ ಇಳಿದು ಉತ್ತಮ ಫಲಿತಾಂಶ ನೀಡುತ್ತದೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದು ಹೇಳಿದರು.
ಕೆರೆಗೋಡು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಕುಮಾರ್ ಅವರು ವಿದ್ಯಾರ್ಥಿಗಳು ಉತ್ತಮ ನಡೆ-ನುಡಿಯನ್ನು ರೂಪಿಸಿಕೊಂಡು ತಮ್ಮ ಬದುಕನ್ನ ಉನ್ನತ ಮಟ್ಟದಲ್ಲಿ ಕಟ್ಟಿಕೊಳ್ಳುವಂತೆ ಕಿವಿಮಾತು ಹೇಳಿದರು.
ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಸವಿತಾ ಮಾತನಾಡಿ, ಇಲ್ಲಿನ ಪ್ರಾಂಶುಪಾಲರು ಗ್ರಾಮೀಣ ವಿದ್ಯಾರ್ಥಿಗಳಿಗೆ ಅತ್ಯುನ್ನತ ಮೂಲ ಸೌಕರ್ಯಗಳನ್ನು ಕಲ್ಪಿಸಿ ಕೊಟ್ಟು ಗುಣಮಟ್ಟದ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡಲು ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಹಳ್ಳಿ ಮೈಸೂರಿನ ಕನ್ನಡ ಉಪನ್ಯಾಸಕ ಜಯರಾಮ್ ಮಾತನಾಡಿದರು.
ವಿದ್ಯಾರ್ಥಿಗಳಾದ ಬಿ.ಎಸ್.ಸ್ಫೂರ್ತಿ, ಬಿ.ಎಸ್.ಸಹನಾ, ಓ.ಸಿ. ತೇಜಸ್ವಿನಿ ಅಭಿನಂದನೆ ಸ್ವೀಕರಿಸಿದರು. ಕಾಲೇಜಿನ ಪ್ರಾಂಶುಪಾಲ ಫಯಾಜ್ ಪಾಷ, ಉಪನ್ಯಾಸಕರಾದ ರಾಗಿಣಿ, ನಾಗತ್ನ್ನಾ, ಕೃಷ್ಣ, ಮೋಹನ್ ರಾಜ್, ವಿಜಯ್ ಕುಮಾರ್, ಕುಮಾರಿ ವಿದ್ಯಾರ್ಥಿಗಳು ಸ್ಥಳೀಯರಾದ ನಂಜುಂಡಪ್ಪ ಭಾಗವಹಿಸಿದ್ದರು.