ಹಾಸನ ನಗರದ ಅರಣ್ಯ ಭವನದಲ್ಲಿ ಸಚಿವ ಕೃಷ್ಣ ಬೈರೇಗೌಡ ಜಿಲ್ಲಾ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಆನೆ ಟ್ರಾೃಕಿಂಗ್ ಮತ್ತು ಮಾನಿಟರಿಂಗ್ ವ್ಯವಸ್ಥೆಯ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಕೆ.ಸುರೇಶ್, ಏಳುಕೊಂಡಲು, ಲತಾ ಕುಮಾರಿ ಇದ್ದರು. 
ಹಾಸನ

ಅಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ರಚಿಸಿ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್‌ಫೋರ್ಸ್ ರಚಿಸಿ
  • ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಸೂಚನೆ
  • ಆನೆ ಟ್ರಾೃಕಿಂಗ್, ಮಾನಿಟರಿಂಗ್ ವ್ಯವಸ್ಥೆ ಪರಿಶೀಲನೆ
ಹಾಸನ: ತಂತ್ರಜ್ಞಾನ ಬಳಸಿಕೊಂಡು ಆನೆಗಳ ಚಲನೆಯನ್ನು ಪತ್ತೆ ಮಾಡುವ ನಿಟ್ಟಿನಲ್ಲಿ ನ್ಯೂನತೆಗಳನ್ನು ಸರಿಪಡಿಸಿಕೊಂಡು ಟ್ರಾೃಕಿಂಗ್ ಮಾಡಿ ನಿಖರವಾಗಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಕ್ರಮಕೈಗೊಳ್ಳುವಂತೆ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಆನೆ-ಮಾನವ ಸಂಘರ್ಷ ತಡೆಯುವ ನಿಟ್ಟಿನಲ್ಲಿ ಹಾಸನ ಜಿಲ್ಲಾ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿರುವ ಆನೆ ಟ್ರಾೃಕಿಂಗ್ ಮತ್ತು ಮಾನಿಟರಿಂಗ್ ವ್ಯವಸ್ಥೆಯ ಬಗ್ಗೆ ಮಂಗಳವಾರ ನಗರದ ಅರಣ್ಯ ಭವನದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದ ಅವರು, ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ ಹಾಗೂ ಅರಕಲಗೂಡು ಭಾಗದಲ್ಲಿ ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ನಡೆದಿದೆ. ಅದರಲ್ಲಿ ಆನೆ ಮತ್ತು ಮಾನವ ಸಂಘರ್ಷ ಹೆಚ್ಚಾಗಿದೆ ಎಂದು ಹೇಳಿದರು.
ಹಿಂದಿನ ಎರಡು ವರ್ಷದಲ್ಲಿ ಜಿಲ್ಲೆಯಲ್ಲಿ 6 ಪ್ರಕರಣ ತೀವ್ರ ಸ್ವರೂಪದಾಗಿದ್ದು 6 ಜನ ಮೃತಪಟ್ಟಿದ್ದಾರೆ. ಕಳೆದ ವರ್ಷ ಸಾವಿನ ಸಂಖ್ಯೆ 3ಕ್ಕೆ ಇಳಿದಿದೆ. ಈ ವರ್ಷ ಒಂದು ಸಾವು ಸಂಭವಿಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮಕೈಗೊಳ್ಳಲು ನಿರಂತರವಾಗಿ ಸಭೆ ನಡೆಸಿ ಪ್ರಯತ್ನಿಸುತ್ತಿದ್ದೇವೆ. ಇದಕ್ಕೆ ಸಾರ್ವಜನಿಕರ ಸಹಕಾರ ಬಹುಮುಖ್ಯ ಎಂದು ತಿಳಿಸಿದರು.
ಕಾಡಾನೆಗಳು ವಸತಿ ಪ್ರದೇಶದಿಂದ 5 ಕಿಮೀ ದೂರದಲ್ಲಿರುವುದನ್ನು ಜನರಿಗೆ ಮಾಹಿತಿ ನೀಡಬೇಕು. ಕಾಡಾನೆ ಹಾವಳಿ ಇರುವ ಪ್ರದೇಶದಲ್ಲಿರುವ ಕಾಫಿ ತೋಟದ ಮಾಲೀಕರು ಕಾರ್ಮಿಕರಿಗೆ ಮಾಹಿತಿ ನೀಡಬೇಕು. ಆನೆ ದಾಳಿ ಮಾಡಬಹುದಾದ ಅಪಾಯವಿರುವ ಗ್ರಾಮಗಳಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಸಹಾಯಕರು, ಬಿಲ್ ಕಲೆಕ್ಟರ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತರು ಹಾಗೂ ಪೊಲೀಸರು ಸೇರಿದಂತೆ ಅಗತ್ಯವಿರುವ ಇಲಾಖೆ ಅಧಿಕಾರಿಗಳನ್ನೊಳಗೊಂಡ ಟಾಸ್ಕ್‌ಫೋರ್ಸ್ ರಚಿಸಿ ಪರಿಣಾಮಕಾರಿಯಾಗಿ ತಳಮಟ್ಟದಲ್ಲಿ ಅನುಷ್ಠಾನಕ್ಕೆ ತರುವು ಮೂಲಕ ಜನರಿಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರಕೃತಿ ನಮ್ಮ ಹತೋಟಿಯಲ್ಲಿ ಇಲ್ಲ. ಮಾನವ ಮತ್ತು ವನ್ಯಜೀವಿಗಳ ಸಂಘರ್ಷದಿಂದಾಗುವ ಸಾವು-ನೋವುಗಳನ್ನು ತಪ್ಪಿಸಲು ಸರ್ಕಾರದ ಪ್ರಯತ್ನದ ಜತೆಗೆ ಜನರ ಸಹಕಾರ ಬಹುಮುಖ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದರು.
ಹಿಂದಿನ ದಿನವೇ ಮಾಹಿತಿ ನೀಡಿ
ಈ ಹಿಂದಿನ ಸಾವು-ನೋವುಗಳನ್ನು ಅವಲೊಕಿಸಿದರೆ ಬೆಳಗ್ಗೆ 5ರಿಂದ 7 ಗಂಟೆ ಹಾಗೂ ಸಂಜೆ 6 ರಿಂದ 7 ಗಂಟೆಯೊಳಗೆ ಸಂಭವಿಸಿರುವುದು ಕಂಡುಬರುತ್ತದೆ. ಜನರು ಈ ವೇಳೆ ಹೆಚ್ಚಾಗಿ ಓಡಾಡುವುದನ್ನು ನಿಲ್ಲಿಸಿ ಅನಾಹುತ ತಡೆಗಟ್ಟಲು ಸಹಕರಿಸಬೇಕು ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಈ ಅವಧಿಯಲ್ಲಿ ಮುನ್ಸೂಚನೆ ಕೊಟ್ಟರೂ ಜನರಿಗೆ ಸರಿಯಾಗಿ ತಲುಪದೆ ಇರಬಹುದು. ಆ ಕಾರಣಕ್ಕಾಗಿ ಹಿಂದಿನ ದಿನವೇ ಆನೆಗಳ ಚಲನೆ ಕುರಿತು ನಿರ್ದಿಷ್ಟ ಸ್ಥಳದ ಬಗ್ಗೆ ನಿಖರವಾಗಿ ಜನರಿಗೆ ಮಾಹಿತಿ ನೀಡಬೇಕು. ಮುನ್ಸೂಚನೆ ಉಲ್ಲಂಘನೆ ಮಾಡುವುದನ್ನು ಗಂಭೀರವಾಗಿ ಪರಿಗಣಿಸಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲು ಸೂಚಿಸಿದರು.
ಅಂತಿಮ ಹಂತದಲ್ಲಿ ಸಾಫ್ಟ್ ರಿಲೀಫ್ ಸೆಂಟರ್
ಕಾಡಾನೆಗಳ ಸ್ಥಳಾಂತರ ಮಾಡಿ ಎಂಬ ಜನರ ಬೇಡಿಕೆ ಇದೆ. ಈ ನಿಟ್ಟಿನಲ್ಲಿ ಒಂದು ಪ್ರದೇಶವನ್ನು ಗುರುತಿಸಿ ಸಾಫ್ಟ್ ರಿಲೀಫ್ ಸೆಂಟರ್ ಮಾಡಲು ತೀರ್ಮಾನ ಅಂತಿಮ ಹಂತದಲ್ಲಿದ್ದು ಅನುದಾನ ಲಭ್ಯವಿದೆ. ಇದರೊಂದಿಗೆ ಹೈಕೋರ್ಟ್ ಕೆಲವು ಮಾರ್ಗಸೂಚಿಗಳನ್ನು ನೀಡಿದ್ದು 6 ತಿಂಗಳಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತಂದು ಭಾಗಶಃ ಕಾಡಾನೆಗಳನ್ನು ಸಾಫ್ಟ್ ರಿಲೀಫ್ ಸೆಂಟರ್‌ಗೆ ಸ್ಥಳಾಂತರ ಮಾಡಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಕುಮಾರ್ ಮಾತನಾಡಿ, ಆನೆ ಹಾವಳಿ ತಡೆಯಲು ಕೈಗೊಂಡಿರುವ ಕ್ರಮಗಳು ಹಾಗೂ ಚಿರತೆ ಮತ್ತು ಕಾಡುಕೋಣಗಳ ದಾಳಿಯಿಂದ ಮೃತಪಟ್ಟಿರುವ ಮಾಹಿತಿ ನೀಡಿದರು.
ಸಂಸದ ಶ್ರೇಯಸ್ ಎಂ.ಪಟೇಲ್, ಶಾಸಕ ಎಚ್.ಕೆ.ಸುರೇಶ್, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲು, ಜಿಲ್ಲಾಧಿಕಾರಿ ಲತಾಕುಮಾರಿ ಇದ್ದರು.
ಸಭೆಯ ನಂತರ ಸಚಿವರು ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ಬಿಕ್ಕೋಡು ಗ್ರಾಮದಲ್ಲಿ ಆನೆಗಳ ಟ್ರಾೃಕಿಂಗ್ ವ್ಯವಸ್ಥೆಯನ್ನು ಪರಿಶೀಲಿಸಿದರು. ನಂತರ ಇಟಿಎಫ್ ಸಿಬ್ಬಂದಿಯಿಂದ ಮಾಹಿತಿ ಪಡೆದರು. ನಂತರ ಚಿಕ್ಕಮಗಳೂರು-ಬೇಲೂರು ರೈಲ್ವೆ ಕಾಮಗಾರಿ ವೀಕ್ಷಣೆ ಮಾಡಿ ಕಾಮಗಾರಿ ಪರಿಶೀಲಿಸಿದರು. ಬಳಿಕ ಬೇಲೂರಿನ ಚೆನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿದರು.