ಸಿಪಿಐಎಂ ಕಚೇರಿಯಲ್ಲಿ ಜನಾಂದೋಲನದ ಕಿರುಪುಸ್ತಕ ಬಿಡುಗಡೆ ಮಾಡಲಾಯಿತು. ಎಸ್.ವರಲಕ್ಷ್ಮೀ, ಎಚ್.ಆರ್.ನವೀನ್‌ಕುಮಾರ್, ಜಿಲ್ಲಾ ಸಮಿತಿ ಸದಸ್ಯರಾದ ಧರ್ಮೇಶ್, ಎಂ.ಜಿ.ಪೃಥ್ವಿ, ಎಚ್.ಎಸ್.ಮಂಜುನಾಥ್, ಜಿ.ಪಿ.ಸತ್ಯನಾರಾಯಣ, ಸೌಮ್ಯಾ, ಅರವಿಂದ ಇದ್ದರು. 
ಹಾಸನ

ಸಿಪಿಐಎಂ ಮನೆ ಮನೆ ಪ್ರಚಾರಾಂದೋಲನ

ಪ್ರಮುಖ ಮುಖ್ಯಾಂಶಗಳು

  • ಸಿಪಿಐಎಂ ಮನೆ ಮನೆ ಪ್ರಚಾರಾಂದೋಲನ
  • ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಎಸ್.ವರಲಕ್ಷ್ಮೀ ಮಾಹಿತಿ
ಹಾಸನ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಾರ್ಪೊರೇಟ್ ಪರ ನೀತಿಗಳಿಂದಾಗಿ ರಾಜ್ಯದ ಜನಸಾಮಾನ್ಯರ ಮೇಲೆ ಆಗುತ್ತಿರುವ ಪರಿಣಾಮಗಳು ಮತ್ತು ಅವರ ಬದುಕಿನ ಪ್ರಶ್ನೆಗಳನ್ನು ಆಧರಿಸಿ ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ಜನಪರ ಪರ್ಯಾಯ ನೀತಿಗಳಿಗಾಗಿ ರಾಜ್ಯಾದ್ಯಂತ ಮನೆಮನೆ ಪ್ರಚಾರಾಂದೋಲನ ನಡೆಸುತ್ತಿದೆ.
ಇದರ ಸಮಾರೋಪವಾಗಿ ಡಿ.21ಕ್ಕೆ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಬಹಿರಂಗ ಸಭೆ ನಡೆಸಲಾಗುತ್ತಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯೆ ಎಸ್.ವರಲಕ್ಷ್ಮೀ ಹೇಳಿದರು.
ನಗರದ ಸಿಪಿಐಎಂ ಕಚೇರಿಯಲ್ಲಿ ಸೋಮವಾರ ಜನಾಂದೋಲನದ ಕಿರುಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ದಿನದಿಂದ ದಿನಕ್ಕೆ ರಾಜ್ಯದ ರೈತರು, ಕಾರ್ಮಿಕರು, ಕೂಲಿಕಾರರು, ಮಹಿಳೆಯರು, ಬಡವರು, ದಲಿತರು ಮತ್ತು ಅಲ್ಪಸಂಖ್ಯಾತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ರೈತರು ಬೆಳೆದ ಬೆಳೆಗಳಿಗೆ ನ್ಯಾಯಯುತ ಬೆಲೆಯಿಲ್ಲ. ಕಾರ್ಮಿಕರ ದುಡಿಮೆಗೆ ತಕ್ಕಂತ ಸಂಬಳವಿಲ್ಲ, ವಿಪರೀತ ಬೆಲೆ ಏರಿಕೆಯಿಂದಾಗಿ ಜನಸಾಮಾನ್ಯರು ಜೀವನ ಸಾಗಿಸುವುದೇ ಅತ್ಯಂತ ದುಸ್ತರವಾಗಿದೆ. ಇದೆಲ್ಲದಕ್ಕೂ ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೆಸ್ ಸರ್ಕಾರಗಳ ಜನವಿರೋಧಿ ನೀತಿಗಳೇ ಕಾರಣವಾಗಿದ್ದು, ಈ ನೀತಿಗಳನ್ನು ಹಿಮ್ಮೆಟ್ಟಿಸಿ ಪರ್ಯಾಯ ಜನಪರ ನೀತಿಗಳಿಗಾಗಿ ಸಿಪಿಐಎಂ ರಾಜ್ಯಾದ್ಯಂತ ಜನಾಂದೋಲನ ಸಂಘಟಿಸಲಾಗಿದೆ. ಇದಕ್ಕೆ ಜನಸಾಮಾನ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.
ಜನಾಂದೋಲನ ಮತ್ತು ಪ್ರತಿಭಟನಾ ಬಹಿರಂಗ ಸಭೆಯಲ್ಲಿ ಕೃಷಿ ಬಿಕ್ಕಟ್ಟು, ಭೂಮಿ ಪ್ರಶ್ನೆ, ಕಾರ್ಮಿಕರ ಹಕ್ಕುಗಳು, ನಿರುದ್ಯೋಗ, ಭ್ರಷ್ಟಾಚಾರ, ಶಿಕ್ಷಣ, ಆರೋಗ್ಯ, ರೇಷನ್ ವ್ಯವಸ್ಥೆ, ವಸತಿ-ನಿವೇಶನ, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು, ಕೋಮುವಾದ-ಜಾತೀವಾದ, ಸೇವೆಗಳ ಖಾಸಗೀಕರಣ, ಹೆಚ್ಚುತ್ತಿರುವ ಬಡವ-ಶ್ರೀಮಂತ ಅಸಮಾನತೆ, ಬಯಲು ಸೀಮೆಯ ನೀರಾವರಿ ಪ್ರಶ್ನೆ, ಒಕ್ಕೂಟ ವ್ಯವಸ್ಥೆ ಮೇಲೆ ದಾಳಿ, ಪ್ರಜಾಪ್ರಭುತ್ವ ವಿರೋಧಿ ಕಾನೂನುಗಳು, ಧರ್ಮಸ್ಥಳದಲ್ಲಿನ ಎಲ್ಲ ಅಸಹಜ ಸಾವುಗಳು, ಭೂಕಬಳಿಕೆ, ಮೈಕ್ರೋಫೈನಾನ್ಸ್ ಕುರಿತು ಸಮಗ್ರ ತನಿಖೆ ನಡೆಯಬೇಕು ಎಂದು ಒತ್ತಾಯಿಸಲಾಗುವುದು ಎಂದರು.
ಸಂದರ್ಭದಲ್ಲಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಎಚ್.ಆರ್.ನವೀನ್‌ಕುಮಾರ್, ಜಿಲ್ಲಾ ಸಮಿತಿ ಸದಸ್ಯರಾದ ಧರ್ಮೇಶ್, ಎಂ.ಜಿ.ಪೃಥ್ವಿ, ಎಚ್.ಎಸ್.ಮಂಜುನಾಥ್, ಜಿ.ಪಿ.ಸತ್ಯನಾರಾಯಣ, ಸೌಮ್ಯಾ, ಅರವಿಂದ ಇದ್ದರು.