ಬೂವನಹಳ್ಳಿ ಸಹಿಪ್ರಾ ಪಾಠಶಾಲೆ ಆವರಣದಲ್ಲಿ ನಡೆದ ಬೂವನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಬಿ.ಎ. ಸ್ವಾಮಿಗೌಡ, ಹನುಮೇಗೌಡ, ಬಿದರಿಕೆರೆ ಜಯರಾಂ, ಬಿ.ಆರ್. ಬೊಮ್ಮೇಗೌಡ ಇತರರಿದ್ದರು. 
ಹಾಸನ

ಸಹಕಾರವೆಂದರೆ ನಂಬಿಕೆ, ಐಕ್ಯತೆಯ ಸಂಕೇತ

ಕೆಂಡಗಣ್ಣ ಎನ್

ಪ್ರಮುಖ ಮುಖ್ಯಾಂಶಗಳು

  • cooperation
ಹಾಸನ: ಸಹಕಾರ ಸಂಘಗಳ ಯಶಸ್ಸಿನ ಹಿಂದೆ ಅನೇಕ ಜನರ ಪರಿಶ್ರಮ, ದೂರದೃಷ್ಟಿ ಮತ್ತು ತ್ಯಾಗ ಅಡಗಿದ್ದು, ಇದನ್ನು ಅರ್ಥೈಸಿಕೊಂಡು ಮುನ್ನಡೆದರೆ ಸಂಘಗಳ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರೆಯಲಿದೆ ಎಂದು ಜಿಪಂ ಮಾಜಿ ಉಪಾಧ್ಯಕ್ಷ ಬಿ.ಎ. ಸ್ವಾಮಿಗೌಡ ಅಭಿಪ್ರಾಯಪಟ್ಟರು.
ಬೂವನಹಳ್ಳಿ ಸಹಿಪ್ರಾ ಪಾಠಶಾಲೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಬೂವನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಹಕಾರವೆಂದರೆ ಕೇವಲ ಹಣಕಾಸಿನ ವ್ಯವಹಾರವಲ್ಲ. ಅದು ನಂಬಿಕೆ, ಐಕ್ಯತೆ ಮತ್ತು ಪರಸ್ಪರ ಸಹಾಯದ ಸಂಕೇತ. ಈ ಮೌಲ್ಯಗಳನ್ನು ಸಂಘವು ಕಳೆದ ಐವತ್ತು ವರ್ಷಗಳಿಂದ ಯಶಸ್ವಿಯಾಗಿ ಕಾಪಾಡಿಕೊಂಡು ಬಂದಿದೆ ಎಂದು ಹೇಳಿದರು.
ಬೂವನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘವು ಐದು ದಶಕಗಳಲ್ಲಿ ಹಲವು ಏಳುಬೀಳು ಕಂಡಿದ್ದು, ಒಂದು ಸಂದರ್ಭದಲ್ಲಿ ಮುಚ್ಚುವ ಹಂತಕ್ಕೆ ತಲುಪಿತ್ತು. ನಂತರ ಆರ್ಥಿಕ ಚೇತರಿಕೆ ಕಂಡು ಈಗ ಹತ್ತಾರು ಕೋಟಿ ರೂ. ವಹಿವಾಟು ನಡೆಸುವ ಮಟ್ಟಕ್ಕೆ ಬೆಳೆದಿರುವುದು ಶ್ಲಾಘನೀಯ ಎಂದರು.
ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಹಾಗೂ ಜಿಪಂ ಮಾಜಿ ಸದಸ್ಯ ಹನುಮೇಗೌಡ ಮಾತನಾಡಿ, ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿಯಂತಿದ್ದು, ಬಿತ್ತನೆ ಬೀಜ, ಗೊಬ್ಬರ ಸೇರಿದಂತೆ ಹಲವು ಅಗತ್ಯ ಸೇವೆಗಳು ಸಹಕಾರ ಸಂಘಗಳ ಮೂಲಕ ರೈತರಿಗೆ ಲಭ್ಯವಾಗುತ್ತಿವೆ. ಎಲ್ಲರೂ ಒಗ್ಗೂಡಿ ಸಂಘಗಳನ್ನು ಬೆಳೆಸುವ ಮೂಲಕ ಸಹಕಾರ ತತ್ವ ಬಲಪಡಿಸಬೇಕು ಎಂದರು.
ಎಚ್‌ಡಿಸಿಸಿ ಬ್ಯಾಂಕಿನ ನಿರ್ದೇಶಕ ಬಿದರಿಕೆರೆ ಜಯರಾಂ ಮಾತನಾಡಿ, ಸಹಕಾರ ಸಂಘಗಳು ಈ ದೇಶದ ಅಮೂಲ್ಯ ಆಸ್ತಿಯಾಗಿವೆ. ಗ್ರಾಮೀಣ ಭಾಗಗಳಲ್ಲಿ ಸಾವಿರಾರು ಕೋಟಿ ರೂ. ವಹಿವಾಟು ಸಹಕಾರ ಸಂಘಗಳ ಮೂಲಕ ನಡೆಯುತ್ತಿದ್ದು, ದೇಶದ ಆರ್ಥಿಕ ವ್ಯವಸ್ಥೆಗೆ ಮಹತ್ವದ ಕೊಡುಗೆ ನೀಡುತ್ತಿವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಬಿ.ಆರ್. ಬೊಮ್ಮೇಗೌಡ ಮಾತನಾಡಿ, ಬೂವನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘ 50 ವರ್ಷ ಪೂರೈಸಿರುವುದು ಹೆಮ್ಮೆಯ ವಿಷಯ. ಸಂಘವು ಇಂದು ಕೋಟ್ಯಂತರ ರೂ. ವಹಿವಾಟು ನಡೆಸುತ್ತಾ ಸದಸ್ಯರು ಹಾಗೂ ಗ್ರಾಹಕರ ವಿಶ್ವಾಸ ಗಳಿಸಿದೆ ಎಂದರು.
ಈ ವೇಳೆ ಸಂಘದ ಹಿಂದಿನ ಅಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಜತೆಗೆ 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿ ಪರೀಕ್ಷೆಗಳಲ್ಲಿ ಶೇ.75ಕ್ಕೂ ಹೆಚ್ಚು ಅಂಕಗಳಿಸಿದ ಸಂಘದ ವ್ಯಾಪ್ತಿಯ ಗ್ರಾಮಗಳ 50ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ವೇಳೆ ತಾಪಂ ಮಾಜಿ ಸದಸ್ಯ ದಿನೇಶ್, ಜಯರಾಂ, ಎಪಿಎಂಸಿ ಸದಸ್ಯೆ ಕಮಲಾ ನೀಲಪ್ಪ, ಸಂಘದ ಉಪಾಧ್ಯಕ್ಷೆ ವಿಜಯಲಕ್ಷ್ಮೀ, ಮುಖಂಡರಾದ ಹರೀಶ್, ಲಕ್ಷ್ಮಣ್, ಎಚ್‌ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಕುಮಾರ್ ಗಿರೀಶ್, ಮಾಜಿ ಅಧ್ಯಕ್ಷ ಬಿ.ಡಿ.ಕರಿಯಯ್ಯ, ಮಲ್ಲೇಶ್, ನಂಜಪ್ಪ, ಪುಟ್ಟಸ್ವಾಮಿ, ರಂಗೇಗೌಡ, ವೀರಣ್ಣಗೌಡ, ಚರಣ್, ದುರ್ಗಾ ಪ್ರಸಾದ್, ರವಿಕುಮಾರ್ ಇತರರಿದ್ದರು.