ಪಲ್ಸ್ ಪೋಲಿಯೋ ಚಾಲನಾ ಸಮಿತಿ ಕಾರ್ಯಪಡೆಯ ಪೂರ್ವಭಾವಿ ಸಭೆ
ಸಕಲೇಶಪುರ: ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನವನ್ನು ಜೂ.28ರಂದು ಹಮ್ಮಿಕೊಂಡಿದ್ದು, ಇದರ ಯಶಸ್ವಿಗೆ ತಾಲೂಕಿನ ಎಲ್ಲ ಸಂಘ-ಸಂಸ್ಥೆಗಳು ಚುನಾಯಿತ ಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಸಹಕರಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ಮಹೇಶ್ ಮನವಿ ಮಾಡಿದರು.
ಮಂಗಳವಾರ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಚಾಲನಾ ಸಮಿತಿ ಕಾರ್ಯಪಡೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಒಟ್ಟು 1,30,738 ಜನಸಂಖ್ಯೆ ಇದ್ದು, 5 ವರ್ಷ ಒಳಪಟ್ಟ 6,951 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಇದೆ. ತಾಲೂಕಿನಲ್ಲಿ 73 ಪೋಲಿಯೋ ಬೂತ್‌ಗಳನ್ನು ತೆರೆಯುತ್ತಿದೆ. ಲಸಿಕೆ ನೀಡಲು 300 ಸಿಬ್ಬಂದಿ ಹಾಗೂ 18 ಜನ ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳಲ್ಲಿ ಲಸಿಕೆ ಹಾಕಲಾಗುವುದು. ಪಟ್ಟಣ ಪ್ರದೇಶಗಳಲ್ಲಿ ಬಸ್ ನಿಲ್ದಾಣಗಳಲ್ಲಿ ಪಲ್ಸ್ ಪೋಲಿಯೋ ಬೂತ್‌ಗಳನ್ನು ತೆರೆಯಲಾಗುತ್ತಿದ್ದು, ಜೂ.28 ರಂದು ಬೆಳಗ್ಗೆ 8ಕ್ಕ ಪಲ್ಸ್ ಪೋಲಿಯೋ ಅಭಿಯಾನ ಪ್ರಾರಂಭವಾಗುತ್ತದೆ ಎಂದರು.
ಗ್ರಾಮೀಣ ಪ್ರದೇಶದಲ್ಲಿ ಮೂರು ದಿನಗಳ ಕಾಲ ಜೂ.28, 29 ಹಾಗೂ 30ರಂದು ಪಲ್ಸ್ ಪೋಲಿಯೋ ಅಭಿಯಾನ ಇರಲಿದೆ ಎಂದರು.
ಕಂದಾಯ ಇಲಾಖೆಯ ಶಿರಸ್ತೇದಾರ್ ರವಿಕುಮಾರ್, ಚುನಾವಣಾ ಶಿರಸ್ತೇದಾರ್ ಜನಾರ್ದನ್, ಶ್ವೇತಾ, ಅರಣ್ಯ ಇಲಾಖೆಯ, ವಲಯ ಅರಣ್ಯ ಅಧಿಕಾರಿ ಹೇಮಂತ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.