ಹೊಳೆನರಸೀಪುರದ ತಾಲೂಕು ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದರು. 
ಹಾಸನ

ಪಲ್ಸ್ ಪೋಲಿಯೋ ಯಶಸ್ಸಿಗೆ ಸಹಕರಿಸಿ

ಹೊಳೆನರಸೀಪುರ : ರಾಷ್ಟ್ರಮಟ್ಟದ ಪಲ್ಸ್ ಪೋಲಿಯೋ ಕಾರ್ಯಕ್ರಮ ಜೂ.28ರಂದು ನಿಗದಿಯಾಗಿದ್ದು, ಯಶಸ್ವಿಗೊಳಿಸಲು ಅಧಿಕಾರಿಗಳು ಸಜ್ಜಾಗಬೇಕು ಎಂದು ತಹಸೀಲ್ದಾರ್ ವೈ.ಎಂ.ರೇಣುಕುಮಾರ್ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಐದು ವರ್ಷದೊಳಗಿನ ಮತ್ತು ಲಸಿಕೆ ಹಾಕಿಸಿಕೊಳ್ಳುವ ಮಕ್ಕಳ ಸಂಖ್ಯೆ 11,188 ಇದೆ. ಹಾಗಾಗಿ ಈ ಬಗ್ಗೆ ಜಾಗೃತರಾಗಿ ಲಸಿಕೆ ಹಾಕಲು ಕ್ರಮ ವಹಿಸಬೇಕು. ಮೊದಲ ಹಂತದಲ್ಲಿ ಲಸಿಕೆ ಹಾಕಿಸಿಕೊಳ್ಳುವ ಮಕ್ಕಳು ಅಂದಿನ ದಿನ ವಂಚಿತರಾದರೆ ಉಳಿದೆರಡು ದಿನಗಳಲ್ಲಿ ಲಸಿಕೆ ಹಾಕಬೇಕು. ಮೊದಲ ದಿನ 90 ಬೂತ್ ಸ್ಥಾಪಿಸಲಾಗಿದ್ದು, ಪಾಲಕರು ನಿಗದಿಪಡಿಸಿರುವ ಬೂತ್‌ಗಳಿಗೆ ಸರಿಯಾದ ಸಮಯಕ್ಕೆ ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗಿ ಲಸಿಕೆ ಹಾಕಿಸಬೇಕೆಂದು ಕರೆ ನೀಡಿದರು. \
ಅಂದು ಲಸಿಕೆ ಹಾಕಿಸಿಕೊಳ್ಳುವ ಐದು ವರ್ಷದೊಳಗಿನ ಮಕ್ಕಳು ತಪ್ಪಿಸಿಕೊಂಡರೆ ಅಂತಹ ಮಕ್ಕಳ ಮನೆಗೆ ತೆರಳಿ ಲಸಿಕೆ ಹಾಕಲಾಗುತ್ತದೆ. ಬೂತ್‌ಮಟ್ಟದಲ್ಲಿ ಶಿಕ್ಷಕರು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರನ್ನು ನೇಮಿಸಲಾಗಿದೆ. ಗ್ರಾಮಾಂತರ ಪ್ರದೇಶದಲ್ಲಿ 8,340 ಮಕ್ಕಳು ಮತ್ತು ನಗರ ಪ್ರದೇಶದಲ್ಲಿ 2,848 ಮಕ್ಕಳಿದ್ದು, ನಿಗದಿತ ದಿನದಂದೇ ಶೇ.90ಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ಹಾಕುವ ಕಾರ್ಯ ಮಾಡಬೇಕು ಎಂದು ಸೂಚನೆ ನೀಡಿದರು.
ಒಂದು ಬೂತ್‌ಗೆ ನಾಲ್ಕು ಸಿಬ್ಬಂದಿಯಂತೆ, ಒಂದು ಮೊಬೈಲ್ ತಂಡ ಸೇರಿದಂತೆ ಒಟ್ಟು 360 ಕಾರ್ಯಕರ್ತರನ್ನು ನೇಮಿಸಲಾಗಿದೆ. ಬೆಳಗ್ಗೆ 8 ರಿಂದ ಸಂಜೆ 5 ರವರೆಗೆ ಈ ಕಾರ್ಯಕ್ರಮ ನಡೆಯಲಿದ್ದು, ಪ್ರತಿಯೊಬ್ಬರೂ ಸಹಕರಿಸಬೇಕೆಂದು ಮನವಿ ಮಾಡಿದರು.
ಪ್ರತಿ ಶಾಲೆ, ಸಾರ್ವಜನಿಕ ಸ್ಥಳ, ರೈಲ್ವೆ ನಿಲ್ದಾಣ, ಕೆಎಸ್‌ಆರ್‌ಟಿಸಿ ನಿಲ್ದಾಣ, ಪ್ರಾಥಮಿಕ ಹಾಗೂ ಆರೋಗ್ಯ ಸಮುದಾಯ ಕೇಂದ್ರಗಳಲ್ಲಿ ಲಸಿಕೆ ಹಾಕಲು ವ್ಯವಸ್ಥೆ ಮಾಡಲಾಗಿದೆ. 90 ಬೂತ್‌ಗಳಲ್ಲಿ ಸಿಬ್ಬಂದಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸಲು ಕಾರ್ಯಪ್ರವೃತ್ತರಾಗಬೇಕೆಂದು ಹೇಳಿದರು.
ಮೇಲುಸ್ತುವಾರಿಯಾಗಿ 17 ತಾಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಅಂದಿನ ಕಾರ್ಯಕ್ರಮಕ್ಕೆ ತಾಲೂಕು ಮಟ್ಟದ ಅಧಿಕಾರಿಗಳ ವಾಹನಗಳನ್ನು ಬಳಸಿಕೊಳ್ಳಲಾಗುವುದು. ಸಬೂಬು ಹೇಳದೆ ಅಂದು ಮುಂಜಾನೆ ಎಲ್ಲ ವಾಹನಗಳನ್ನು ತಾಲೂಕು ಕಚೇರಿ ಮುಂದೆ ನಿಲ್ಲಿಸಬೇಕು. ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿ, ಅಧಿಕಾರಿಗಳು ಸಮವಸ್ತ್ರ ಹಾಗೂ ಪರಿಕರಗಳೊಂದಿಗೆ ನಿಗದಿಪಡಿಸಿರುವ ಸಮಯಕ್ಕೆ ಸರಿಯಾಗಿ ಹಾಜರಾಗಬೇಕೆಂದು ಸಲಹೆ ನೀಡಿದರು.
ಇಲಾಖೆ ಪ್ರಮುಖರ ಗೈರಿಗೆ ಗರಂ : ತಾಲೂಕುಮಟ್ಟದ ಅಧಿಕಾರಿಗಳು ಲೋಪ ಎಸೆಗಿದರೆ ಮುಲಾಜಿಲ್ಲದೆ ಶಿಸ್ತುಕ್ರಮ ಜರುಗಿಸಲಾಗುವುದು. ಅಲ್ಲದೆ ಪೂರ್ವಭಾವಿ ಸಭೆಗೆ ಬಾರದಿರುವ ಇಲಾಖೆಗಳ ಮುಖ್ಯಸ್ಥರಿಗೆ ನೋಟಿಸ್‌ಜಾರಿಗೊಳಿಸಿ ಶಿಸ್ತು ಕ್ರಮ ಜರುಗಿಸಲಾಗುವುದು. ಇಲಾಖೆಗಳ ಮುಖ್ಯಸ್ಥರ ಬದಲು ಸಿಬ್ಬಂದಿ ಬಂದಿರುವುದು ಸರಿಯಲ್ಲ ಎಂದು ಕಿಡಿಕಾರಿದ ತಹಸೀಲ್ದಾರ್, ಅಂತಹ ಸಿಬ್ಬಂದಿಯನ್ನು ಸಭಾಂಗಣದಿಂದ ಹೊರ ಹಾಕಿದರು.
ಕೆಲ ಸಿಬ್ಬಂದಿ ಮೇಲಧಿಕಾರಿ ರಜೆ ಹಾಕಿದ್ದಾರೆ ಎಂದು ಹೇಳಿದರೆ, ಮತ್ತೆ ಕೆಲವರು ಮೀಟಿಂಗ್‌ಗೆ ಹೋಗಿದ್ದಾರೆ ಎಂದು ಹೇಳಿದರು. ಇನ್ನು ರಜೆ ಮೇಲೆ ಹೋಗಿರುವವರು ರಜೆ ಚೀಟಿಯನ್ನು ಈಗಲೇ ಕೊಡಬೇಕೆಂದು ತಹಸೀಲ್ದಾರ್ ಪಟ್ಟು ಹಿಡಿದಾಗ, ಪ್ರತಿ ಕೊಡಲಾಗದ ಸಿಬ್ಬಂದಿ ತಲೆಬಗ್ಗಿಸಿಕೊಂಡು ಕೈಕಟ್ಟಿ ನಿಂತಿದ್ದರು.
ಡೆಂೆ ನಿಯಂತ್ರಣಕ್ಕೆ ಸಹಕರಿಸಿ: ತಾಲೂಕು ಆರೋಗ್ಯ ಆಡಳಿತ ವೈದ್ಯಧಿಕಾರಿ ಡಾ.ರಾಜೇಶ್ ಮಾತನಾಡಿ, ಡೆಂೆ ನಿಯಂತ್ರಣ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ತಾಲೂಕು ಮಟ್ಟದಲ್ಲಿಯೂ ಸಹ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಗ್ರ ಕಣ್ಗಾವಲು ಸಮಿತಿ ರಚಿಸಲಾಗಿದೆ. ಈಗಾಗಲೇ ರಾಜ್ಯ ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದ್ದು ಪ್ರತಿಯೊಬ್ಬರೂ ಸಹಕರಿಸಬೇಕು. ಡೆಂೆ ನಿಯಂತ್ರಣದಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.
ತಾಲೂಕಿನಲ್ಲಿ 2025-26 ನೇ ಸಾಲಿನಲ್ಲಿ ಯಾವುದೇ ಡೆಂೆ ಪ್ರಕರಣ ಕಂಡುಬಂದಿಲ್ಲ. ಯಾರು ಯಾವ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡಲಿದೆ. ಗ್ರಾಮೀಣ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳಿಂದ ಹಿಡಿದು ಎಲ್ಲ ನಾಗರೀರ ಸಹಕಾರ ಪಡೆಯಲಾಗುವುದು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಕೃಷ್ಣಕುಮಾರ್, ಬಿಸಿಎಂ ಇಲಾಖೆಯ ಅಧಿಕಾರಿ ಹರೀಶ್, ತಾಲೂಕು ಕಾರ್ಯಕ್ರಮದ ವ್ಯವಸ್ಥಾಪಕ ಗಿರೀಶ್, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಪಿ.ಸುಜಾತಾ, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಮಮ್ತಾಜ್ ಉನ್ನೀಸ್, ಆಶಾ ಸುಗಮಕಾರರಾದ ರಾಣಿ, ವಿಮಲಾ, ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಟಿ.ಸ್ವಾಮಿ ಮತ್ತಿತರರಿದ್ದರು.