ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ರಾಜ್ಯ ಗುತ್ತಿಗೆದಾರರು ಹಮ್ಮಿಕೊಂಡಿದ್ದ ಮುಷ್ಕರಕ್ಕೆ ಪಾಲ್ಗೊಳ್ಳಲು ಪಟ್ಟಣದಿಂದ ನೂರಾರು ಜನ ಗುತ್ತಿಗೆದಾರರು ಚನ್ನರಾಯಪಟ್ಟಣದಿಂದ ತೆರಳಿದರು. 
ಹಾಸನ

ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಗುತ್ತಿಗೆದಾರರು

ಲಲಾಟಾಕ್ಷ ಎಸ್
ಚನ್ನರಾಯಪಟ್ಟಣ: ರಾಜ್ಯ ಸರ್ಕಾರ ಗುತ್ತಿಗೆದಾರರ ಬಿಲ್ ಹಣವನ್ನು ಎರಡು ವರ್ಷದಿಂದ ಬಾಕಿ ಉಳಿಸಿಕೊಂಡಿದ್ದು ಗುತ್ತಿಗೆದಾರರು ಬೀದಿಗೆ ಬರುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ನಿರ್ದೇಶಕ ಎಸ್.ಬಿ.ಜಗದೀಶ್ ಅಸಮಾಧಾನ ಹೊರ ಹಾಕಿದರು.
ಶುಕ್ರವಾರ ಪಟ್ಟಣದಿಂದ ಬೆಂಗಳೂರಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕವೂ ಹಿಂದಿನ ಅವಧಿಯ ಬಾಕಿ ಬಿಲ್‌ಗಳನ್ನು ಬಿಡುಗಡೆ ಮಾಡಿಲ್ಲ. ರಾಜ್ಯಾದ್ಯಂತ ಗುತ್ತಿಗೆದಾರರಿಗೆ 37 ಸಾವಿರ ಕೋಟಿ ರೂ.ಬಿಲ್ ಬಾಕಿ ಇದೆ ಎಂದರು.
ಹಾಸನ ಜಿಲ್ಲೆಯಲ್ಲಿ ಲೋಕೋಪಯೋಗಿ ಇಲಾಖೆ 293 ಕೋಟಿ ರೂ., ಕಾವೇರಿ ನೀರಾವರಿ ನಿಗಮದಿಂದ 400 ಕೋಟಿ ಕೋಟಿ ರೂ., ಸಣ್ಣ ನೀರಾವರಿ ಇಲಾಖೆಯಿಂದ 131 ಕೋಟಿ ಕೋಟಿ ರೂ., ಜಲ ಜೀವನ್ ಮಿಷನ್ ಯೋಜನೆಯಡಿ 160 ಕೋಟಿ ಕೋಟಿ ರೂ.ಸೇರಿದಂತೆ ಒಟ್ಟು 1,200 ಕೋಟಿ ಕೋಟಿ ರೂ.ಹಣ ನೀಡಬೇಕಿದೆ ಎಂದು ಹೇಳಿದರು.
ಮೂರು ವರ್ಷಗಳಿಂದ ಹಣ ಬಿಡುಗಡೆಯಾಗದೆ ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೈಸಾಲ, ಆಸ್ತಿಗಳ ಅಡಮಾನಕ್ಕೆ ಮುಂದಾಗಿದ್ದಾರೆ. ಕೆಲವರು ಬಡ್ಡಿ ಹಣ ಕಟ್ಟಲಾಗದ ಪರಿಸ್ಥಿತಿಯಿಂದ ಆತ್ಮಹತ್ಯೆಗೂ ಶರಣಾಗಿದ್ದಾರೆ. ಇದು ಸರ್ಕಾರದ ಗಮನಕ್ಕೆ ಬಂದರೂ ಹಣ ಬಿಡುಗಡೆ ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದರು. ತಾಲೂಕು ಅಧ್ಯಕ್ಷ ಕೆ.ಎನ್.ತೋಪೇಗೌಡ ಮಾತನಾಡಿ, ರಾಜ್ಯ ಸರ್ಕಾರ ಪ್ಯಾಕೇಜ್ ಗುತ್ತಿಗೆ ನೀಡುತ್ತಿದೆ. ಇದರಿಂದ ಚನ್ನರಾಯಪಟ್ಟಣ ತಾಲೂಕಿನಲ್ಲಿ ಸಾಕಷ್ಟು ಗುತ್ತಿಗೆದಾರರು ಕೆಲಸ ಇಲ್ಲದೆ ಜೀವನ ನಡೆಸಲು ತೊಂದರೆ ಅನುಭವಿಸುತ್ತಿದ್ದಾರೆ. ಪ್ಯಾಕೇಜ್ ಗುತ್ತಿಗೆ ರದ್ದು ಮಾಡಿ ತುಂಡು ಗುತ್ತಿಗೆ ನೀಡಬೇಕು ಎಂದು ಆಗ್ರಹಿಸಿದರು.
ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನಲ್ಲಿ ಕೆಲಸ ಮಾಡಿರುವ 65 ಕೋಟಿ ರೂ.ಹಣ ಬಾಕಿ ಇದೆ. ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ಕಚೇರಿ ಹಾಗೂ ಜಲ ಜೀವನ್ ಮಿಷನ್ ಕಾಮಗಾರಿ ಮಾಡಿರುವ 40 ಕೋಟಿ ರೂ.ಗೂ ಅಧಿಕ ಹಣ ಬಾಕಿ ಇದೆ. ಇದನ್ನು ಕೂಡಲೇ ಬಿಡುಗಡೆ ಮಾಡಬೇಕು. ಜ್ಯೇಷ್ಠತೆ ಆಧಾರದ ಮೇಲೆ ಬಿಲ್ ಪಾವತಿ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದರೂ ಹಣ ಬಿಡುಗಡೆ ಆಗಿಲ್ಲ ಎಂದು ತಿಳಿಸಿದರು.
ಕಂಟ್ರಾೃಕ್ಟರ್ ಅಸೋಸಿಯೇಷನ್ ಆ್ಯಂಡ್ ಕ್ಲಬ್‌ನ ಗೌರವಾಧ್ಯಕ್ಷ ಪ್ರವೀಣ್, ಉಪಾಧ್ಯಕ್ಷರಾದ ರಂಗಸ್ವಾಮಿ, ಯೋಗಣ್ಣ, ಕಾರ್ಯದರ್ಶಿ ರಮೇಶ್, ಸಹ ಕಾರ್ಯದರ್ಶಿ ರಾಮಕೃಷ್ಣೇಗೌಡ, ಖಜಾಂಚಿ ಪಾಂಡು, ನಿರ್ದೇಶಕರಾದ ಧರಣೇಶ್, ಗಂಗಾಧರ್, ನಂಜಪ್ಪ, ರಾಜು, ಶಂಕರ್, ವೆಂಕಟೇಶ್, ಸದಸ್ಯರು, ಗುತ್ತಿಗೆದಾರರು ಉಪಸ್ಥಿತರಿದ್ದರು.