ಬೇಲೂರು ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ವ್ಯಕ್ತಿಯನ್ನು ಬಲಿ ಪಡೆದ ಕಾಡಾನೆ ಸೆರೆ ಕಾರ್ಯಾಚರಣೆ ಸಂದರ್ಭ ಕಾಡಾನೆ ತೋಟದೊಳಗಿರುವುದು.  
ಹಾಸನ

ಮುಂದುವರಿದ ಸೆರೆ ಹಿಡಿಯುವ ಕಾರ್ಯಾಚರಣೆ

ಮಾದೇಶ್ ತಿ.ನರಸೀಪುರ

ಪ್ರಮುಖ ಮುಖ್ಯಾಂಶಗಳು

  • ಶನಿವಾರಕ್ಕೆ ಮುಂದೂಡಿಕೆ
  • ಚೀಕನಹಳ್ಳಿ ಬಳಿ ಪರಾರಿಯಾದ ಕಾಡಾನೆ
ಬೇಲೂರು: ತಾಲೂಕಿನ ಕಣಗುಪ್ಪೆ ಗ್ರಾಮದಲ್ಲಿ ಕಳೆದ ವಾರ ವ್ಯಕ್ತಿಯನ್ನು ಬಲಿ ಪಡೆದಿದ್ದ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಎರಡನೇ ದಿನವಾದ ಶುಕ್ರವಾರವೂ ಮುಂದುವರಿಯಿತು. ಆದರೆ, ಚೀಕನಹಳ್ಳಿ ಸಮೀಪ ಕಾಡಾನೆ ತಪ್ಪಿಸಿಕೊಂಡಿತು. ಕಾರ್ಯಾಚರಣೆ ವಿಫಲವಾದ ಹಿನ್ನೆಲೆಯಲ್ಲಿ ಶನಿವಾರಕ್ಕೆ ಮುಂದೂಡಿ ಸಾಕಾನೆಗಳನ್ನು ಬಿಕ್ಕೋಡು ಕ್ಯಾಂಪಿಗೆ ಕರೆ ತರಲಾಯಿತು.
ತಾಲೂಕಿನ ಅರೇಹಳ್ಳಿ ಕಿತ್ತಾವರ ಗ್ರಾಮದ ಬಳಿ ಮೊದಲ ದಿನದ ಕಾರ್ಯಾಚರಣೆಯಲ್ಲಿ ತಪ್ಪಿಸಿಕೊಂಡಿದ್ದ ಕಾಡಾನೆ ಚೀಕನಹಳ್ಳಿ ಸಮೀಪ ಇರುವ ಬಗ್ಗೆ ಇಟಿಎಫ್ ಸಿಬ್ಬಂದಿ ಶುಕ್ರವಾರ ಪತ್ತೆ ಹಚ್ಚಿದರು. ಕುಮ್ಕಿ ಸಾಕಾನೆಗಳಾದ ಭೀಮ, ಶ್ರೀಕಂಠ, ಧನಂಜಯ, ಅಯ್ಯಪ್ಪ, ಶ್ರೀರಾಮ, ಹರ್ಷ ಆನೆಗಳೊಂದಿಗೆ ಕಾರ್ಯಾಚರಣೆಗಿಳಿದ ಸಿಬ್ಬಂದಿ ಕಾಡಾನೆಗೆ ಅರಿವಳಿಕೆ ಚುಚ್ಚುಮದ್ದು ನೀಡಲು ವೈದ್ಯರು ಮುಂದಾಗುತ್ತಿದ್ದಂತೆಯೇ ಕಾಡಾನೆ ಸ್ಥಳದಿಂದ ಕಾಲ್ಕಿತಿತು.
ಆದರೂ ಇಟಿಎಫ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ಕಾಡಾನೆ ಸೆರೆಗೆ ಮುಂದಾಗುತ್ತಿದ್ದರೂ ಕಾಡಾನೆ ಮಾತ್ರ ವೇಗವಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಓಡಾಡುತ್ತಲೇ ಮುಂದೆ ಸಾಗಿತು. ಸತತ 6 ಗಂಟೆ ಕಾರ್ಯಾಚರಣೆ ನಡೆಸಿದರೂ ಅಧಿಕಾರಿ ಮತ್ತು ಸಿಬ್ಬಂದಿಗೆ ಸಿಗಲಿಲ್ಲ. ಈ ಸಂದರ್ಭದಲ್ಲಿ ಒಂದು ಬಾರಿ ವೈದ್ಯರು ಅರಿವಳಿಕೆ ಚುಚ್ಚುಮದ್ದು ನೀಡಿದರೂ ತಪ್ಪಿಸಿಕೊಂಡು ಬೇಲೂರು ತಾಲೂಕಿನಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಸ್ಕೆಬೈಲು, ಗೋಣಿಬೀಡು ಭಾಗದ ತೋಟಗಳತ್ತ ಸಾಗಿತು. ಆದರೂ ಅಧಿಕಾರಿಗಳು ಸಾಕಾನೆಗಳ ಮೂಲಕ ವಾಪಸ್ ಕಾಡಾನೆಯನ್ನು ಬೇಲೂರು ತಾಲೂಕಿನತ್ತ ಓಡಿಸಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಲೇ ಇದ್ದರು.
ಅಂತಿಮವಾಗಿ ಕಾಡಾನೆ ತಾಲೂಕಿನ ಕಾನಹಳ್ಳಿ ಅರಣ್ಯದತ್ತ ತೆರಳಿತು. ಅಷ್ಟರಲ್ಲಾಗಲೇ ಕತ್ತಲಾಗಿದ್ದರಿಂದ ಕಾರ್ಯಾಚರಣೆಯನ್ನು ಶನಿವಾರಕ್ಕೆ ಮುಂದೂಡಿದ ಅಧಿಕಾರಿಗಳು ಸಾಕಾನೆಗಳನ್ನು ಲಾರಿಗಳ ಮೂಲಕ ವಾಪಸ್ ಬಿಕ್ಕೋಡು ಆನೆ ಕ್ಯಾಂಪಿಗೆ ಕರೆತಂದರು.
ಕಾಡಾನೆ ಸೆರೆ ಕಾರ್ಯಾಚರಣೆ ಮುಂದುವರಿದಿದ್ದು, ಒಂದು ಜಾಗದಲ್ಲಿ ನಿಲ್ಲದೆ ಸಾಕಾನೆಗಳನ್ನು ಕಂಡೊಡನೆ ಓಡಿ ಹೋಗುತ್ತಿದೆ. ಹೀಗಾಗಿ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಒಂದು ಬಾರಿ ಕಾಡಾನೆಗೆ ವೈದ್ಯರು ಅರಿವಳಿಕೆ ಚುಚ್ಚುಮದ್ದು ನೀಡಿದರೂ ತಪ್ಪಿಸಿಕೊಂಡಿತು. ಜತೆಗೆ ಮತ್ತಿಗೋಡಿನಿಂದ ಸಾಕಾನೆಗಳು ಬರುವುದು ತಡವಾದ್ದರಿಂದ ಕಾರ್ಯಾಚರಣೆಯಲ್ಲೂ ತಡವಾಯಿತು. ಶುಕ್ರವಾರದ ಕಾರ್ಯಾಚರಣೆ ಸ್ಥಗಿತಗೊಳಿಸಿ ಶನಿವಾರ ಮತ್ತೆ ಕಾರ್ಯಾಚರಣೆ ಪ್ರಾರಂಭಿಸಲಿದ್ದೇವೆ.
ಸೌರಭ್ ಕುಮಾರ್ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹಾಸನ