ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಭುವನೇಶ್ವರಿ ಎಪಿಎಂಸಿ ತರಕಾರಿ ವರ್ತಕರ ಸಂಘದ ನೂತನ ಕಟ್ಟಡವನ್ನು ಶಾಸಕ ಬಾಲಕೃಷ್ಣ ಉದ್ಘಾಟಿಸಿದರು. ಅನಿಲ್ ಮರಗೂರು, ವಿ.ಎನ್.ಧನಂಜಯ್, ಕಲ್ಕೆರೆ ಸ್ವಾಮಿ, ಸಿ.ಆರ್.ದಿವಾಕರ್, ಖಜಾಂಚಿ ಮುಜಾಯಿದ್ ಪಾಷಾ ಸೇರಿದಂತೆ ಇತರರು ಇದ್ದರು.
ಚನ್ನರಾಯಪಟ್ಟಣ: ನುಗ್ಗೇಹಳ್ಳಿ ಹಾಗೂ ದಿಡಗ ಎಪಿಎಂಸಿ ಉಪಮಾರುಕಟ್ಟೆಯಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಮಳಿಗೆಗಳ ನಿರ್ಮಾಣ ಮಾಡಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ ನೀಡಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಭುವನೇಶ್ವರಿ ಎಪಿಎಂಸಿ ತರಕಾರಿ ವರ್ತಕರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿ, ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ನಿತ್ಯ ತರಕಾರಿ ಮಾರಾಟ ಮಾಡುವ ವರ್ತಕರಿಗೆ ಅನುಕೂಲ ಕಲ್ಪಿಸಲು ಪ್ರಾಂಗಣ ಮಾಡಲಾಗಿದೆ. ಸಂಘದ ಸದಸ್ಯರ ಅನುಕೂಲಕ್ಕಾಗಿ ಎಪಿಎಂಸಿಯಿಂದ ಕೊಠಡಿಯನ್ನು ನೀಡಲಾಗಿದೆ ಎಂದು ಹೇಳಿದರು.
ತಾಲೂಕಿನ ಹಿರೀಸಾವೆ ಹೋಬಳಿ ಬೂಕನಬೆಟ್ಟದ ತಪ್ಪಲಿನಲ್ಲಿ ಪ್ರತಿ ವರ್ಷವೂ ಸಾವಿರಾರ ರಾಸುಗಳ ವ್ಯಾಪಾರ ನಡೆಸಲಾಗುತ್ತದೆ. ಇಲ್ಲಿ ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಅನುದಾನ ಬಿಡುಗಡೆ ಆದ ನಂತರ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು ಎಂದು ತಿಳಿಸಿದರು.
ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಜಂಟಿ ನಿರ್ದೇಶಕಿ ಡಾ.ವಿಯಲಕ್ಷ್ಮೀ ಮಾತನಾಡಿ, ಎಪಿಎಂಸಿ ವರ್ತಕರು ಸಹಕಾರ ಸಂಘಗಳನ್ನು ಮಾಡಿಕೊಂಡು ವ್ಯಾಪಾರ ವಹಿವಾಟು ಮಾಡುವುದರಿಂದ ಸಂಘದ ಏಳಿಗೆ ಜತೆಯಲ್ಲಿ ವಯಕ್ತಿಕವಾಗಿಯೂ ಅಭಿವೃದ್ಧಿ ಹೊಂದುತ್ತಿದ್ದಾರೆ. ಇದೇ ಹಾದಿಯಲ್ಲಿ ಪಟ್ಟಣದ ಭುವನೇಶ್ವರಿ ಸಂಘವೂ ಸಾಗಲಿ ಎಂದು ಶುಭ ಹಾರೈಸಿದರು.
ರೈತರಿಗೆ ಎಂದಿಗೂ ಮೋಸ ಆಗದಂತೆ ನೋಡಿಕೊಳ್ಳಿ. ವರ್ತಕರು ಹಣದ ಆಸೆಗೆ ರೈತರಿಗೆ ತೊಂದರೆ ಮಾಡಬಾರದು ಎಂದು ಕಿವಿಮಾತು ಹೇಳಿದರು.
ಟಿಎಪಿಸಿಎಂಎಸ್ ನಿರ್ದೇಶಕ ಅನಿಲ್, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಸೋಮಶೇಖರ್, ಭುವನೇಶ್ವರಿ ಎಪಿಎಂಸಿ ತರಕಾರಿ ವರ್ತಕರ ಸಂಘದ ಅಧ್ಯಕ್ಷ ವಿ.ಎನ್.ಧನಂಜಯ್, ಕಲ್ಕೆರೆ ಸ್ವಾಮಿ, ಕಾರ್ಯದರ್ಶಿ ಸಿ.ಆರ್.ದಿವಾಕರ್, ಖಜಾಂಚಿ ಮುಜಾಯಿದ್ ಪಾಷಾ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.