ಚನ್ನರಾಯಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿಗೆ ಶಾಸಕ ಸಿ.ಎನ್.ಬಾಲಕೃಷ್ಣ ಭೂಮಿಪೂಜೆ ನೆರವೇರಿಸಿದರು. ಜ್ಞಾನೇಶ್, ಮಲ್ಲೇಶ್, ಜಗದೀಶ್ ಇತರರಿದ್ದರು. 
ಹಾಸನ

ಪ್ರಯಾಣಿಕರ ಸುಕ್ಷತೆಗಾಗಿ ಬಸ್ ತಂಗುದಾಣ ನಿರ್ಮಾಣ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಸಿ.ಎನ್.ಬಾಲಕೃಷ್ಣ
  • ಬಸ್ ನಿಲ್ದಾಣದಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಬಸ್ ತಂಗುದಾಣ ನಿರ್ಮಾಣ
ಚನ್ನರಾಯಪಟ್ಟಣ: ಪ್ರಯಾಣಿಕರು ಬಿಸಿಲು ಹಾಗೂ ಮಳೆಗಾಲದಲ್ಲಿ ಸುರಕ್ಷಿತವಾಗಿ ಆಶ್ರಯ ಪಡೆಯಲು ಬಸ್ ತಂಗುದಾಣ ನಿರ್ಮಿಸಲಾಗುತ್ತಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಲ್ಲಿ 17 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ಬಸ್ ತಂಗುದಾಣ ನಿರ್ಮಾಣಕ್ಕೆ ಶನಿವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಹಾಸನ ಚಿಕ್ಕಮಗಳೂರು, ಮಂಗಳೂರು ಮತ್ತು ಗ್ರಾಮಾಂತರ ಭಾಗಕ್ಕೆ ನಿತ್ಯ ತೆರಳುವ ಸಾವಿರಾರು ಪ್ರಯಾಣಿಕರು ಇಲ್ಲಿ ತಂಗುದಾಣವಿಲ್ಲದೆ ಮಳೆ, ಬಿಸಿಲಿನಲ್ಲಿ ನಿಲ್ಲಬೇಕಾಗಿದೆ. ಬೇಸಿಗೆ ಹಾಗೂ ಮಳೆಗಾಲದಲ್ಲಿ ಪ್ರಯಾಣಿಕರು ಹಗಲು ವೇಳೆ ಬಿಸಿಲಿನ ಬೇಗೆ ತಾಳಲಾರದೆ ಸಮೀಪದ ಮರಗಳ ಬಳಿ ನಿಲ್ಲುವಂತಾಗಿದೆ. ಮಳೆ ಬಂದರೂ ಇದೇ ಸಮೀಪದ ಪೊಲಿಸ್‌ಚೌಕಿಯ ಬಳಿ ನಿಲ್ಲುವ ಸ್ಥಿತಿ ಇತ್ತು. ಈಗಾಗಲೇ ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು ಬಸ್‌ಗಾಗಿ ಇಲ್ಲಿ ಕಾದು ನಿಲ್ಲುವುದು ಅಸಾಧ್ಯ. ಹಾಗಾಗಿ ಪ್ರಯಾಣಿಕರು ನೆರಳಿನಲ್ಲಿ ಆಶ್ರಯ ಪಡೆಯಬೇಕಿದ್ದು, ಸಾರ್ವಜನಿಕರು ಹಲವಾರು ಬಾರಿ ಮನವಿ ಮಾಡಿದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಸುಸಜ್ಜಿತವಾದ ಬಸ್ ತಂಗುದಾಣ ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.
ತಾಲೂಕಿನ ದಿಡಗ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗೆ 20 ಲಕ್ಷ ರೂ. ಅನುದಾನ ನೀಡಿದ್ದು, ಚನ್ನರಾಯಪಟ್ಟಣ ಘಟಕ ಅಭಿವೃದ್ಧಿ ಕಾಮಗಾರಿಗೆ ಒಂದು ಕೋಟಿ ರೂ ಅನುದಾನ ನೀಡುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವಿ ಸಲ್ಲಿಸಿದ್ದು, ಪ್ರಸಕ್ತ ವರ್ಷದಲ್ಲಿ ಅನುದಾನ ಲಭ್ಯತೆ ಆಧಾರದ ಮೇಲೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುವುದೆಂದು ತಿಳಿಸಿದರು.
ಚನ್ನರಾಯಪಟ್ಟಣ ಬಸ್ ನಿಲ್ದಾಣ ಎಲ್ಲ ಜಿಲ್ಲೆಗಳಿಗೂ ಸಂಪರ್ಕ ಬಿಂದುವಾಗಿದ್ದು, ನಿತ್ಯ 2,000 ಕ್ಕಿಂತಲೂ ಅಧಿಕ ಬಸ್‌ಗಳು ನಿಲ್ದಾಣಕ್ಕೆ ಆಗಮಿಸಲಿವೆ. ಪ್ರಯಾಣಿಕರ ಅನುಕೂಲಕ್ಕಾಗಿ ಸಿಸಿಟಿವಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಹೈಮಾಸ್ಟ್ ಅಳವಡಿಸಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ಬೇಕಾಗಿರುವ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಲಾಗಿದ್ದು ಸಂಸ್ಥೆಯವರು ಸೂಕ್ತ ನಿರ್ವಹಣೆ ಮಾಡಬೇಕೆಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಭೂಸೇನೆ ನಿರ್ಮಿತಿ ಕೇಂದ್ರ ಹಾಸನದ ಸಹಾಯಕ ಇಂಜಿನಿಯರ್ ಎಚ್.ಇ.ಸಿದ್ದೇಗೌಡ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚನ್ನರಾಯಪಟ್ಟಣ ಘಟಕದ ವ್ಯವಸ್ಥಾಪಕ ಜ್ಞಾನೇಶ್, ಸಹಾಯಕ ಸಂಚಾರಿ ನಿರೀಕ್ಷಕ ಮಲ್ಲೇಶ್, ಸಂಚಾರಿ ನಿಯಂತ್ರಕ ಜಗದೀಶ್ ಇತರರಿದ್ದರು.