ಹಾಸನ ನಗರದ ಚನ್ನಪಟ್ಟಣ ಕೆರೆ ಆವರಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಹೊಸ ಫುಡ್ ಕೋರ್ಟ್ ನಿರ್ಮಾಣ ಕಾಮಗಾರಿಗೆ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.
- ಜನರಿಗೆ ಉತ್ತಮ ಆಹಾರ ಸಿಗಲು ಫುಡ್‌ಕೋರ್ಟ್ ನಿರ್ಮಾಣ
- ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಹೇಳಿಕೆ
- ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಭೂಮಿಪೂಜೆ
ಹಾಸನ: ನಗರದ ಚನ್ನಪಟ್ಟಣ ಕೆರೆ ಆವರಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಎದುರು ಹೊಸ ಫುಡ್‌ಕೋರ್ಟ್ ನಿರ್ಮಾಣ ಕಾಮಗಾರಿಗೆ ಸ್ಥಳೀಯ ಶಾಸಕ ಎಚ್.ಪಿ.ಸ್ವರೂಪ್ ಪ್ರಕಾಶ್ ಇತ್ತೀಚೆಗೆ ಭೂಮಿಪೂಜೆ ನೆರವೇರಿಸಿದರು.
ರಸ್ತೆ ಬದಿ ವ್ಯಾಪಾರಸ್ಥರ ಹಲವು ದಿನಗಳ ಬೇಡಿಕೆ ಆಧರಿಸಿ ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅನುದಾನದಲ್ಲಿ ಸುಮಾರು 35 ಲಕ್ಷ ರೂ., ಸಿಎಂಐಡಿಪಿ ಅನುದಾನದಲ್ಲಿ ಸುಮಾರು 29 ಲಕ್ಷ ರೂ. ಹಾಗೂ ಶಾಸಕರ ಸ್ಥಳೀಯಾಭಿವೃದ್ಧಿ ಅನುದಾನದಲ್ಲಿ ಸುಮಾರು 5 ಲಕ್ಷ ರೂ. ಒಟ್ಟು 69 ಲಕ್ಷ ರೂ. ವೆಚ್ಚದಲ್ಲಿ ಫುಡ್‌ಕೋರ್ಟ್ ನಿರ್ಮಾಣವಾಗಲಿದೆ. ಇದರಿಂದ ನಗರದ ಜನರಿಗೆ ಇನ್ನಷ್ಟು ಒಳ್ಳೆಯ ಆಹಾರ ಪದಾರ್ಥಗಳು ದೊರೆಯಲಿವೆ ಎಂದು ಹೇಳಿದರು.
ಅಂಗಡಿಗಳ ಅನುಕೂಲ ಇಲ್ಲದೆ ಸಣ್ಣ, ಪುಟ್ಟ ಅಂಗಡಿಗಳನ್ನು ಇಟ್ಟುಕೊಂಡು ಅಹಾರ ಪದಾರ್ಥ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಸ್ಥರಿಗೆ ಸುಸಜ್ಜಿತ ಫುಡ್‌ಕೋರ್ಟ್ ನಿರ್ಮಾಣ ಆಗಲಿದೆ. ಆದಷ್ಟು ಬೇಗ ಗುಣಮಟ್ಟದ ಕಾಮಗಾರಿ ಮುಗಿಸಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸಬೇಕೆಂದು ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿದರು.