ಹಾಸನ ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಸಂಸ ಸ್ವಾಭಿಮಾನಿ ಪ್ರೊ.ಬಿ. ಕೃಷ್ಣಪ್ಪ ಬಣ ರಾಜ್ಯ ಸಮಿತಿ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರಸಂಕಿರಣವನ್ನು ಗಣ್ಯರು ಉದ್ಘಾಟಿಸಿದರು. ಕೆ.ಎಂ.ಶಿವಲಿಂಗೇಗೌಡ, ರಾಜ್ಯ ಸಂಚಾಲಕ ಎಂ.ಸೋಮಶೇಖರ್, ಅಂದಾನಿ ಸೋಮನಹಳ್ಳಿ, ಹೆಗ್ಗೆರೆ ರಂಗಪ್ಪ, ವಳಲಹಳ್ಳಿ ವೀರೇಶ್, ಎಂ.ದೇವದಾಸ್, ಟಿ.ಆರ್.ವಿಜಯ್ ಕುಮಾರ್ ಇತರರಿದ್ದರು. 
ಹಾಸನ

ಸಮೃದ್ಧ ಭಾರತ ನಿರ್ಮಾಣಕ್ಕೆ ಸಂವಿಧಾನ ಅವಶ್ಯ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಸಮೃದ್ಧ ಭಾರತ ನಿರ್ಮಾಣಕ್ಕೆ ಸಂವಿಧಾನ ಅವಶ್ಯ
  • ಶಾಸಕ ಕೆ.ಎಂ.ಶಿವಲಿಂಗೇಗೌಡ ಅಭಿಪ್ರಾಯ
  • ರಾಜ್ಯಮಟ್ಟದ ವಿಚಾರಸಂಕಿರಣ
ಹಾಸನ: ಸಂವಿಧಾನದ ಮೌಲ್ಯಗಳನ್ನು ಅರ್ಥಮಾಡಿಕೊಂಡರೆ ಭಾರತ ವಿಶ್ವಕ್ಕೆ ದಾರಿ ತೋರಿಸುತ್ತದೆ. ಆದರೆ ಸಂವಿಧಾನದ ಭಾವನಾತ್ಮಕ ಅರ್ಥ ಅಳವಡಿಸಿಕೊಳ್ಳುವಲ್ಲಿ ರಾಜಕಾರಣಿಗಳು ಪ್ರಾಮಾಣಿಕ ಪ್ರಯತ್ನ ಮಾಡುತ್ತಿಲ್ಲ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ದಸಂಸ ಸ್ವಾಭಿಮಾನಿ ಪ್ರೊ.ಬಿ.ಕೃಷ್ಣಪ್ಪ ಬಣ ರಾಜ್ಯ ಸಮಿತಿ ಇತ್ತೀಚೆಗೆ ಆಯೋಜಿಸಿದ್ದ ರಾಜ್ಯಮಟ್ಟದ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ನಾಗಮೋಹನ್ ದಾಸ್ ಅವರು ಶೋಷಿತ ವರ್ಗಗಳ ಪರವಾಗಿ ಹೋರಾಟ ನಡೆಸುವ ಮೂಲಕ ಇತಿಹಾಸದ ಹೊಸ ಅಧ್ಯಾಯ ರಚಿಸುತ್ತಿದ್ದಾರೆ ಎಂದು ಶ್ಲಾಸಿದರು.
ಶತ ಶತಮಾನಗಳಿಂದ ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿಯೂ ಮುಂದುವರಿದಿರುವುದು ಅತ್ಯಂತ ದುಃಖಕರ ಸಂಗತಿ. ಸಮಾಜ ಅಭಿವೃದ್ಧಿ ಶಿಖರ ತಲುಪುತ್ತಿದ್ದರೂ ನಾವಿನ್ನೂ ಶೋಷಿತರಾಗಿದ್ದೇವೆ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡುತ್ತಿರುವುದು ಗಂಭೀರ ಚಿಂತನೆಯಾಗಿದೆ ಎಂದರು.
ಇದು ದಲಿತ ಸಮುದಾಯಕ್ಕೆ ಮಾತ್ರ ಸೀಮಿತವಾಗಿಲ್ಲ. ಜಾತಿ ವ್ಯವಸ್ಥೆಯೊಳಗೆ ಇರುವ ಹಲವಾರು ವರ್ಗಗಳು ಒಂದಿಲ್ಲೊಂದು ರೀತಿಯಲ್ಲಿ ಅನ್ಯಾಯ ಮತ್ತು ಸಂಕಷ್ಟ ಅನುಭವಿಸುತ್ತಿವೆ. ಇಂತಹ ಅಸಮಾನತೆ ನಿವಾರಿಸಲು ಬಸವಣ್ಣ ಅವರು ತಮ್ಮ ಕಾಲದಲ್ಲೇ ಸಾಮಾಜಿಕ ಕ್ರಾಂತಿಯ ಬೀಜ ಬಿತ್ತಿದ್ದರು.
ಶೋಷಿತ ಸಮುದಾಯಗಳಿಗೆ ನಿಜವಾದ ಸಮಾನತೆ ದೊರಕಿಸುವಲ್ಲಿ ತೇಪೆ ಹಾಕುವ ರಾಜಕಾರಣ ನಡೆಯುತ್ತಿದೆ. ಮಾನವ ಸಂಪತ್ತನ್ನು ಹೇಗೆ ಸದ್ಬಳಕೆ ಮಾಡಬೇಕು ಎಂಬುದರ ಬಗ್ಗೆ ಸರ್ಕಾರಗಳು ಗಂಭೀರವಾಗಿ ಯೋಚಿಸಬೇಕಾಗಿದೆ. ಶೋಷಿತ ವರ್ಗಗಳನ್ನು ಮೇಲೆತ್ತುವ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ ಸಮಾಜದ ಸಮಗ್ರ ಸುಧಾರಣೆ ಸಾಧ್ಯ ಎಂದು ಸಲಹೆ ನೀಡಿದರು.
ಅಂಬೇಡ್ಕರ್ ಬರೆದ ಸಂವಿಧಾನದ ತಿರುಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಭಾರತ ಇಡೀ ವಿಶ್ವದಲ್ಲಿ ಎದೆತಟ್ಟಿ ಮಾತನಾಡುವ ಸ್ಥಿತಿಗೆ ಬರಬಹುದು. ಅಂಥ ಸುಭದ್ರ ಮತ್ತು ಸಮೃದ್ಧ ಭಾರತ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಒಳಮೀಸಲಾತಿ ಜಾರಿಗೆ ತಂದಿರುವುದು ಸ್ವಾಗತ. ಅಲೆಮಾರಿ ಸಮುದಾಯಗಳ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಅವರಿಗೆ ಕೂಡ ಸಮಾನ ಅವಕಾಶ ಕಲ್ಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಖಾಸಗಿ ಕ್ಷೇತ್ರದಲ್ಲಿಯೂ ಮೀಸಲಾತಿ ಮತ್ತು ಸಮಾನ ಅನುಷ್ಠಾನದ ಪ್ರಶ್ನೆ ದೊಡ್ಡ ಚರ್ಚೆ ವಿಷಯವಾಗಿದೆ. ಅನೇಕ ದೊಡ್ಡ ಖಾಸಗಿ ಕಂಪನಿಗಳಲ್ಲಿ ನಿರ್ದಿಷ್ಟ ಜಾತಿಯವರೇ ಹೆಚ್ಚಾಗಿ ನೇಮಕವಾಗುತ್ತಿರುವುದು ಸಮಾನತೆಗೆ ವಿರುದ್ಧವಾಗಿದೆ. ಸರ್ಕಾರದಿಂದ ಎಲ್ಲ ಸೌಲಭ್ಯ ಪಡೆಯುವ ಖಾಸಗಿ ವಲಯಕ್ಕೂ ಸಂವಿಧಾನದ ಮೌಲ್ಯ ಪಾಲಿಸುವ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮನ್ವಯದಿಂದ ಕೆಲಸ ಮಾಡಬೇಕೆಂದು ಸಲಹೆ ನೀಡಿದರು.
ದಸಂಸ ರಾಜ್ಯ ಸಂಚಾಲಕ ಎಂ.ಸೋಮಶೇಖರ್, ಸಂಘಟನಾ ಸಂಚಾಲಕ ಅಂದಾನಿ ಸೋಮನಹಳ್ಳಿ, ದಾವಣಗೆರೆಯ ಹೆಗ್ಗೆರೆ ರಂಗಪ್ಪ, ಜಿಲ್ಲಾ ಸಂಚಾಲಕ ವಳಲಹಳ್ಳಿ ವೀರೇಶ್, ಮಂಗಳೂರು ಸಂಚಾಲಕ ಎಂ.ದೇವದಾಸ್, ಮಾದಿಗ ದಂಡೋರ ರಾಜ್ಯ ಸಮಿತಿಯ ಟಿ.ಆರ್.ವಿಜಯ್ ಕುಮಾರ್, ಹುಡಾ ಮಾಜಿ ಅಧ್ಯಕ್ಷ ಎಚ್.ಆರ್. ಕೃಷ್ಣಕುಮಾರ್, ಕೋಲಾರ ರಾಜ್ಯ ಸಂಚಾಲಕ ವಿ.ನಾರಾಯಣಸ್ವಾಮಿ, ರಾಜ್ಯ ಸಂಚಾಲಕಿ ಭಾಗ್ಯಮ್ಮ ನಾರಾಯಣಸ್ವಾಮಿ, ದಲಿತ ಹಿರಿಯ ಮುಖಂಡ ಎಚ್.ಕೆ.ಸಂದೇಶ್, ಆನೆಕಲ್ ಕೃಷ್ಣಪ್ಪ, ಬಿ.ಸಿ. ರಾಜೇಶ್, ಕಬ್ಬಳ್ಳಿ ಮೈಲಪ್ಪ ರಾಜಶೇಖರ್ ಹುಲಿಕಲ್, ಗೊರೂರು ರಾಜು ಇತರಿದ್ದರು.