ವಡೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬೆಳಗೋಡು ಜಿಲ್ಲಾ ಪಂಚಾಯಿತಿ ಮಟ್ಟದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಸಲೀಂ ಕೊಲ್ಲಹಳ್ಳಿ, ಎಡೆಹಳ್ಳಿ ಮಂಜುನಾಥ್, ಸಯ್ಯದ್ ಮುಫೀಜ್, ಬೈಕೆರೆ ದೇವರಾಜ್, ತಾರಾ ಮಹೇಶ್ ಇದ್ದರು.
ಸಕಲೇಶಪುರ: ಬೆಳಗೋಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ಆಯೋಜಿಸಲಾಗಿದೆ. ಇದು ಯಾವುದೇ ವ್ಯಕ್ತಿಯ ವಿರುದ್ಧ ನಡೆಸಿದ ಸಭೆಯಲ್ಲ ಎಂದು ಕೆಪಿಸಿಸಿ ಸದಸ್ಯ ಸಲೀಂ ಕೊಲ್ಲಹಳ್ಳಿ ಹೇಳಿದರು.
ತಾಲೂಕಿನ ವಡೂರು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬೆಳಗೋಡು ಜಿಲ್ಲಾ ಪಂಚಾಯಿತಿ ಮಟ್ಟದ ಕಾಂಗ್ರೆಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಹಿಂದಿನ ಚುನಾವಣೆಗಳಲ್ಲಿ ಗೆಲುವು, ಸೋಲು ಏನೇ ಆಗಿದ್ದರೂ ಬೆಳಗೋಡು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ. ಮುಂದಿನ ದಿನಗಳಲ್ಲಿ ನಡೆಯಲಿರುವ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಎಂದು ತಿಳಿಸಿದರು.
ಯಸಳೂರು ಹೋಬಳಿಯಲ್ಲಿ ನಡೆದ ಕಾಡಾನೆ ಗಲಾಟೆಯಲ್ಲಿ ಸಾಕಾನೆ ಅರ್ಜುನ ಮೃತಪಟ್ಟ ಪ್ರಕರಣವನ್ನು ಉಲ್ಲೇಖಿಸಿದ ಸಲೀಂ ಕೊಲ್ಲಹಳ್ಳಿ, ಅರ್ಜುನನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದವು. ಅರ್ಜುನನ ಸಾವಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಡೆಹಳ್ಳಿ ಮಂಜುನಾಥ್ ನೇತೃತ್ವದಲ್ಲಿ ನಡೆದ ಶಾಂತಿಯುತ ಹೋರಾಟದ ವೇಳೆ, ನಿಖರ ಕಾರಣ ತಿಳಿಸಲು ವಿಫಲವಾದ ಅಧಿಕಾರಿಗಳು ಹೋರಾಟಗಾರರ ಮೇಲೆ ಸುಳ್ಳು ಆರೋಪ ಹೊರಿಸಿ ಲಾಠಿಚಾರ್ಜ್ ನಡೆಸಿ ಹಲವರನ್ನು ಗಾಯಗೊಳಿಸಿದರು. ಈ ವೇಳೆ ಸ್ಥಳದಲ್ಲೇ ಇಲ್ಲದ ಎಡೆಹಳ್ಳಿ ಮಂಜುನಾಥ್ ಸೇರಿದಂತೆ 19 ಜನರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ನ್ಯಾಯ ಸಿಗದ ಹಿನ್ನೆಲೆ ಮಂಜುನಾಥ್ ಅವರು ಕೆಪಿಸಿಸಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ನಡೆದ ಮನವೊಲಿಸುವ ಪ್ರಕ್ರಿಯೆಯಲ್ಲಿಯೇ ಪಕ್ಷ ಸಂಘಟನೆ ಕುರಿತ ಚರ್ಚೆ ಆರಂಭವಾಗಿ, ಅದರ ಮುಂದುವರಿಕೆಯಾಗಿ ಈ ಸಭೆ ಆಯೋಜಿಸಲಾಗಿದೆ ಎಂದು ವಿವರಿಸಿದರು.
ಕೆಪಿಸಿಸಿ ಸದಸ್ಯ ಎಡೆಹಳ್ಳಿ ಮಂಜುನಾಥ್ ಮಾತನಾಡಿ, ಸಾಕಾನೆ ಅರ್ಜುನನ ಸಾವಿಗೆ ಅಧಿಕಾರಿಗಳ ನಿರ್ಲಕ್ಷ್ಯವೇ ನೇರ ಕಾರಣ. ಈ ಅನ್ಯಾಯದ ವಿರುದ್ಧ ಹೋರಾಟ ನಡೆಸಿದ್ದಕ್ಕೆ ಎರಡು ವರ್ಷಗಳ ನಂತರ ಸುಳ್ಳು ಪ್ರಕರಣ ದಾಖಲಿಸಿರುವುದು ನೋವು ತಂದಿದೆ. ಆದರೆ ಬೆಳಗೋಡು ಹೋಬಳಿಯ ಮುಖಂಡರು ಹಾಗೂ ಕಾರ್ಯಕರ್ತರು ನಿವಾಸಕ್ಕೆ ಬಂದು ಮನವೊಲಿಸಿ, ಪಕ್ಷದ ನಾಯಕರೊಂದಿಗೆ ಮಾತನಾಡಿ ನ್ಯಾಯ ಒದಗಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಯ ದೃಷ್ಟಿಯಿಂದ ಈ ಸಭೆ ನಡೆಸಲಾಗಿದೆ. ಇದು ಯಾರ ವಿರುದ್ಧವೂ ಅಲ್ಲ. ಪಕ್ಷ ಬಲಪಡಿಸುವ ಉದ್ದೇಶ ಮಾತ್ರ ಎಂದು ಹೇಳಿದರು.
ಸಕಲೇಶಪುರ ತಾಲೂಕು ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷ ಸಯ್ಯದ್ ಮುಫೀಜ್, ಬೈಕೆರೆ ದೇವರಾಜ್, ಕುಣಿಗನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹೇಗ್ಗಾವೆ ಪುಟ್ಟರಾಜೇಗೌಡ, ದೊಡ್ಡದೀನೆ ಮಂಜೇಗೌಡ, ಹೆಗ್ಗಾವೆ ಗೋಪಾಲಸ್ವಾಮಿ, ಬಾಗೆ ನೀಲಕಂಠಗೌಡ, ಬೆಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಭುವನಾಕ್ಷ, ಕುಣಿಗನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ತಾರಾ ಮಹೇಶ್, ಒಬಿಸಿ ಮುಖಂಡ ವಡ್ಡರಳ್ಳಿ ರಾಜಣ್ಣ, ಸಾವುಲ್ ಹಮೀದ್, ನಾಗರಾಜ್, ನಿಜಾರ್, ದಿನೇಕೆರೆ ಶೇಖರ್, ಪ್ರೇಮ್ ಉಪಸ್ಥಿತರಿದ್ದರು.