ಸಕಲೇಶಪುರ ತಾಲೂಕಿನ ಬಾಳುಪೇಟೆ ಗ್ರಾಮದಲ್ಲಿ ಆಯೋಜಿಸಿದ್ದ ಬೆಳಗೋಡು ಹೋಬಳಿ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಸಂಪಂಗಿ ಮಾತನಾಡಿದರು. 
ಹಾಸನ

ಕಾರ್ಯಕರ್ತರ ಶ್ರಮದಿಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಸುಭದ್ರ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಸಂಪಂಗಿ
  • ಬಾಳುಪೇಟೆ
ಸಕಲೇಶಪುರ: ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸೋಲು ಅನುಭವಿಸಿದ್ದರೂ, ಲೋಕಸಭೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸಾಧಿಸಿರುವುದು ಜಿಲ್ಲೆಯಲ್ಲಿ ಕಾಂಗ್ರೆಸ್ ಗಟ್ಟಿಯಾಗಿದೆ ಎಂಬುದಕ್ಕೆ ಸಾಕ್ಷಿ ಎಂದು ಮಾಜಿ ಶಾಸಕ ಸಂಪಂಗಿ ಹೇಳಿದರು.
ತಾಲೂಕಿನ ಬಾಳುಪೇಟೆಯಲ್ಲಿ ಆಯೋಜಿಸಿದ್ದ ಬೆಳಗೋಡು ಹೋಬಳಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿದ ಅನೇಕ ಹಿರಿಯ ನಾಯಕರು ಹಾಗೂ ವಿದ್ಯಾರ್ಥಿ ರಾಜಕೀಯದಿಂದ ಬಂದ ಕಾರ್ಯಕರ್ತರ ಶ್ರಮವೇ ಇಂದಿನ ಬಲವಾಗಿದೆ ಎಂದು ಹೇಳಿದರು.
ಪಕ್ಷದ ಒಳಜಗಳಗಳಿಂದ ಮೂರನೇ ವ್ಯಕ್ತಿಗಳಿಗೆ ಲಾಭವಾಗುತ್ತದೆ. ಪಕ್ಷವನ್ನು ಉಳಿಸಿ ಬಲಪಡಿಸುವ ಜವಾಬ್ದಾರಿ ಪ್ರತಿಯೊಬ್ಬ ಕಾರ್ಯಕರ್ತನ ಮೇಲಿದೆ. ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು ಹಾಗೂ ಎಲ್ಲ ವರ್ಗದ ಬಡವರ ನಂಬಿಕೆ ಕಾಂಗ್ರೆಸ್. ಪಕ್ಷ ಇಲ್ಲದಿದ್ದರೆ ನಾವು ಯಾರೂ ಇಲ್ಲ ಎಂಬುದನ್ನು ಮನಗಾಣಬೇಕು ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಬಲಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆಶಿ ನೇತೃತ್ವದ ಸರ್ಕಾರ ಜನಪರವಾಗಿ ಕೆಲಸ ಮಾಡುತ್ತಿದೆ. ಐದು ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಮಹತ್ವದ ನೆರವು ದೊರಕುತ್ತಿದೆ. ಹಿಂದೆ ಈ ಯೋಜನೆಗಳನ್ನು ವಿರೋಧಿಸಿದ್ದ ಬಿಜೆಪಿಯೇ ಈಗ ಬೇರೆ ರಾಜ್ಯಗಳಲ್ಲಿ ಅದೇ ಮಾದರಿಯನ್ನು ಅನುಸರಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಸಾಧನೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಮುಂಬರುವ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸಬೇಕು. ಪಕ್ಷಕ್ಕೆ ಹಾನಿ ಉಂಟು ಮಾಡುವ ಯಾವುದೇ ವ್ಯಕ್ತಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ. ಪಕ್ಷಕ್ಕಿಂತ ದೊಡ್ಡವರು ಯಾರೂ ಇಲ್ಲ. ಪಕ್ಷ ಇದ್ದರೆ ಮಾತ್ರ ಕಾರ್ಯಕರ್ತರಿಗೆ ಸ್ಥಾನಮಾನ ಹಾಗೂ ಅವಕಾಶ ದೊರೆಯುತ್ತವೆ ಎಂದು ಹೇಳಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಲಕ್ಷ್ಮಣ್ ಮಾತನಾಡಿ, ಪಕ್ಷ ಸಂಘಟನೆಗೆ ಶಿಸ್ತು, ಏಕತೆ ಹಾಗೂ ಸಮನ್ವಯ ಅತ್ಯಂತ ಅವಶ್ಯಕ. ಪ್ರತಿ ಹಂತದಲ್ಲಿಯೂ ಕಾರ್ಯಕರ್ತರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಮಾತ್ರ ಸಂಘಟನೆ ಬಲವಾಗುತ್ತದೆ. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಸಂಘಟನೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ಕೆಲಸ ನಡೆಯಬೇಕು ಎಂದು ಹೇಳಿದರು.
ಪಕ್ಷದೊಳಗೆ ಭಿನ್ನಾಭಿಪ್ರಾಯಗಳಿದ್ದರೆ ಅವುಗಳನ್ನು ಸಭೆ ಅಥವಾ ಸಾರ್ವಜನಿಕವಾಗಿ ಚರ್ಚಿಸುವ ಬದಲು, ಸಂಬಂಧಪಟ್ಟ ನಾಯಕತ್ವದ ಮೂಲಕ ಒಳಾಂಗಣವಾಗಿ ಪರಿಹರಿಸಿಕೊಳ್ಳಬೇಕು. ಪದೇ ಪದೆ ವ್ಯಕ್ತಿಗಳ ಹೆಸರನ್ನು ತೆಗೆದುಕೊಂಡು ಟೀಕೆ ಮಾಡುವುದರಿಂದ ಅವರಿಗೆ ಅನವಶ್ಯಕ ಪ್ರಚಾರ ಸಿಗುತ್ತದೆ ಎಂದರು.
ಮುಂದಿನ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲರೂ ಕೆಲಸ ಮಾಡಬೇಕು. ಪರಸ್ಪರ ಸಹಕಾರ, ಸಹನೆ ಹಾಗೂ ತ್ಯಾಗದ ಮನೋಭಾವದಿಂದ ಕಾರ್ಯ ನಿರ್ವಹಿಸಿದರೆ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ. ಮುರಳಿ ಮೋಹನ್ ಅವರು ಪ್ರಾಮಾಣಿಕ ಕಾರ್ಯಕರ್ತರಾಗಿದ್ದು, ಅವರ ಕೆಲಸ ಶೈಲಿ ಎಲ್ಲರಿಗೂ ಗೊತ್ತಿದೆ. ಮುಂದಿನ ಚುನಾವಣೆಯಲ್ಲಿ ಗೆಲುವಿಗೆ ಅಗತ್ಯ ತಂತ್ರ ರೂಪಿಸಿ ಶಿಸ್ತಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್‌ಗೆ ಖಂಡಿತ ಜಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ಬಿ.ಶ್ರೀನಿವಾಸ್, ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮುರಳಿ ಮೋಹನ್, ಸಕಲೇಶಪುರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಮುಫಿಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿರುಮುಡಿ ಚಂದ್ರು ಹಲವರು ಉಪಸ್ಥಿತರಿದ್ದರು.