ಸಕಲೇಶಪುರದಲ್ಲಿ ಟಿಪ್ಪು ಜಯಂತಿ ಆಚರಣೆ ಹಾಗೂ ಗೋಹತ್ಯೆ ಕಾನೂನು ತಿದ್ದುಪಡಿ ವಿರುದ್ಧ ಹಿಂದು ಹಿತರಕ್ಷಣಾ ವೇದಿಯಿಂದ ಉಪವಿಭಾಗಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
- ಜಾನುವಾರು ಹತ್ಯೆ ಪ್ರತಿಬಂಧಕ, ಸಂರಕ್ಷಣಾ ಅಧಿನಿಯಮ ತಿದ್ದುಪಡಿಗೆ ವಿರೋಧ
- ಕಡಿತಕ್ಕೆ ರಾಜ್ಯಪಾಲರು ಸಹಿ ಹಾಕದೆ ತಿರಸ್ಕರಿಸುವಂತೆ ಎಸಿಗೆ ಮನವಿ
ಸಕಲೇಶಪುರ: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಹಿಂದು ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವುದು ಖಂಡನೀಯ ಎಂದು ಹಿಂದು ಮುಖಂಡ ರಘು ಸಕಲೇಶಪುರ ಹೇಳಿದರು.
ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿಗೆ ಹಿಂದು ಹಿತರಕ್ಷಣಾ ವೇದಿಕೆ ವತಿಯಿಂದ ಮನವಿ ನೀಡಿ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ಕಾಯ್ದೆಯಲ್ಲಿ ಅಕ್ರಮವಾಗಿ ಗೋವುಗಳ ಸಾಗಣೆ ಮಾಡಿದ ವಾಹನಗಳನ್ನು ಮುಟ್ಟುಗೋಲು ಹಾಕಿ ವಾಹನದ ಮೌಲ್ಯದ ಬಾಂಡ್ ಇರಿಸಿ ವಾಹನ ಬಿಡಿಸಿಕೊಂಡು ಹೋಗಬೇಕು ಎಂಬ ಕಾಯ್ದೆಯನ್ನು ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟೀಕರಣ ಮಾಡುವ ದುರುದ್ದೇಶದಿಂದ ಅಕ್ರಮ ಗೋಸಾಗಣೆ ಮಾಡುವ ವಾಹನ ಪೊಲೀಸ್ ಜಪ್ತಿ ಮಾಡಿದರೆ ಯಾವುದೇ ಬಾಂಡ್ ನೀಡದೆ ಬಿಡುಗಡೆಗೊಳಿಸಬೇಕು ಎಂದು ಸಚಿವ ಸಂಪುಟದಲ್ಲಿ ನಿರ್ಣಯ ಮಾಡಿರುವ ಪ್ರಸ್ತಾಪ ಕಡಿತಕ್ಕೆ ರಾಜ್ಯಪಾಲರು ಸಹಿ ಹಾಕದೆ ತಿರಸ್ಕಾರ ಮಾಡಬೇಕು ಎಂದು ಆಗ್ರಹಿಸಿದರು.
ಸರ್ಕಾರ ಗೋ ಸಾಗಣೆ ಮಾಡುವವರಿಗೆ ಬೆಂಬಲ ನೀಡಿ ಗೋವುಗಳನ್ನು ಕಳ್ಳತನ ಮಾಡಲು ಕುಮ್ಮಕ್ಕು ನೀಡುತ್ತಿದೆ, ಪ್ರಜಾಪ್ರಭುತ್ವದಲ್ಲಿ ಒಂದು ಸರ್ಕಾರ ಮಾಡಿರುವ ಕಾಯ್ದೆಯನ್ನು ದುರುದ್ದೇಶ ಇಟ್ಟುಕೊಂಡು ಒಂದು ಕೋಮನ್ನು ಓಲೈಕೆ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವದ ವಿರೋಧಿಯಾಗಿದೆ ಎಂದು ಆರೋಪಿಸಿದರು.
ವಿಧೇಯಕಕ್ಕೆ ಬದಲಾವಣೆ ತಂದಲ್ಲಿ ಗೋವುಗಳ ಕಳ್ಳತನ ಹೆಚ್ಚಾಗುತ್ತದೆ. ರಸ್ತೆಯಲ್ಲಿ ಮಲಗಿರುವ ಗೋವು ಕದ್ದು ವಾಹನದಲ್ಲಿ ತುಂಬಿಸುವ ಕೃತ್ಯ ಹೆಚ್ಚಾಗುತ್ತದೆ. ಕೊಟ್ಟಿಗೆಯಿಂದ ಕದ್ದು ತೆಗೆದುಕೊಂಡು ಹೋಗೋದು, ಹೊಲಗಳಲ್ಲಿ ಮೇಯಲು ಬಿಟ್ಟ ದನಗಳನ್ನು ಕದ್ದು ವಾಹನದಲ್ಲಿ ತುಂಬಿಕೊಂಡು ಹೋಗುವ ಎಲ್ಲ ಸಾಧ್ಯತೆ ಇದ್ದು ಇದು ರೈತರಿಗೆ ಹೈನುಗಾರಿಕೆ ಮಾಡುವವರ ಜೀವನ ಕಷ್ಟಮಯವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಹೀಗಾಗಿ ಕರ್ನಾಟಕ ರಾಜ್ಯದಲ್ಲಿ ಜಾರಿಯಲ್ಲಿರುವ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧಿನಿಯಮ 2020 ವಿಧೇಯಕಕ್ಕೆ ಯಾವುದೇ ತಿದ್ದುಪಡಿ ಮಾಡಲು ಅವಕಾಶ ನೀಡಬಾರದು ಮತ್ತು ತಿದ್ದುಪಡಿ ವಿಧೇಯಕಕ್ಕೆ ಸಹಿ ಮಾಡದೆ ತಿರಸ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ಮುಸ್ಲಿಂ ತುಷ್ಟೀಕರಣ ಮಾಡುವ ದುರುದ್ದೇಶದಿಂದ ಟಿಪ್ಪು ಜಯಂತಿ ಆಚರಣೆ ಮಾಡಬೇಕು ಎಂದು ವಿವಾದ ಹಾಗೂ ಮತಾಂಧತೆಯನ್ನು ಸೃಷ್ಟಿಸಲು ಹೊರಟಿರುವುದು ಸಾರ್ವಜನಿಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರ ಜನರಿಗೆ ಬೇಕಾದ ಅಭಿವೃದ್ಧಿ ಹಾಗೂ ಶಾಂತಿ ನೆಮ್ಮದಿ ನೀಡುವ ಬದಲು ಓಲೈಕೆ ರಾಜಕಾರಣ ಮಾಡಲು ಮುಂದಾಗಿದೆ. ಟಿಪ್ಪು ಜಯಂತಿ ಆಚರಣೆ ಕರ್ನಾಟಕದಲ್ಲಿ ಮತ್ತೆ ಕೋಮು ಸಂಘರ್ಷಕ್ಕೆ ಜಯಂತಿ ಸಾಕ್ಷಿಯಾಗಲಿದ್ದು ಜನಜೀವನ ಸಂಕಷ್ಟಕ್ಕೆ ತಳ್ಳುವ ಸಾಧ್ಯತೆ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಶಾಂತಿ ಭಂಗವಾಗುವ ಎಲ್ಲ ಪ್ರಕರಣಗಳು ನಡೆಯುತ್ತವೆ. ಹಾಗಾಗಿ ಟಿಪ್ಪು ಜಯಂತಿ ನಡೆಸಲು ಸರ್ಕಾರ ಅವಕಾಶ ನೀಡಬಾರದು ಎಂದು ಮನವಿ ಮಾಡಿದರು.
ಸಂಘಟನೆ ಮುಖಂಡರಾದ ಶಿವಾನಂದ, ಧರ್ಮೇಶ್, ಮಂಜು ಕಬ್ಬಿನಗದ್ದೆ, ಶ್ರೀಜಿತ್, ಹರೀಶ್, ಶೇಖರ್ ಪೂಜಾರಿ, ಸಂತೋಷ್ ಇತರರು ಇದ್ದರು.