ಅರಕಲಗೂಡು ತಾಲೂಕಿನ ಗೊಬ್ಬಳಿ ಗ್ರಾಮದಲ್ಲಿ ಕೃಷಿ ಹಾಗೂ ಹೈನುಗಾರಿಕೆ ತರಬೇತಿ ಕಾರ್ಯಕ್ರಮದಲ್ಲಿ ಪಶು ವೈದ್ಯಾಧಿಕಾರಿ ಡಾ.ಚಿರಂಜಿವಿ ಅವರು ಉತ್ತಮ ತಳಿಯ ಹಸುಗಳನ್ನು ಆಯ್ಕೆ ಮಾಡುವ ವಿಧಾನಗಳ ಕುರಿತು ರೈತರಿಗೆ ಮಾಹಿತಿ ನೀಡಿದರು. ಗ್ರಾಮದ ರೈತರು ಇದ್ದರು.
- ರೈತರಿಗೆ ಪಶು ವೈದ್ಯಾಧಿಕಾರಿ ಡಾ. ಚಿರಂಜೀವಿ ಸಲಹೆ
ಅರಕಲಗೂಡು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಇತ್ತೀಚೆಗೆ ಬಸವಪಟ್ಟಣ ವಲಯದ ಕಟ್ಟೆಪುರ ಕಾರ್ಯಕ್ಷೇತ್ರದ ಗೊಬ್ಬಳಿ ಗ್ರಾಮದಲ್ಲಿ ಕೃಷಿ ಹಾಗೂ ಹೈನುಗಾರಿಕೆ ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪಶು ವೈದ್ಯಾಧಿಕಾರಿ ಡಾ. ಚಿರಂಜೀವಿ, ಹೈನುಗಾರಿಕೆಯಲ್ಲಿ ಯಶಸ್ಸು ಸಾಧಿಸಲು ಅನುಸರಿಸಬೇಕಾದ ಕ್ರಮಗಳು, ಪಶುಗಳಲ್ಲಿ ಕಾಣಿಸಿಕೊಳ್ಳುವ ವಿವಿಧ ರೋಗಗಳ ತಡೆಗಟ್ಟುವಿಕೆಯ ಕ್ರಮ, ಸಮರ್ಪಕ ಆಹಾರ ಪದ್ಧತಿ, ಪಶುಗಳಿಗೆ ಸಮಯೋಚಿತ ಚಿಕಿತ್ಸೆ ನೀಡುವ ಅಗತ್ಯತೆ ಹಾಗೂ ಉತ್ತಮ ತಳಿಯ ಹಸುಗಳನ್ನು ಆಯ್ಕೆ ಮಾಡುವ ವಿಧಾನಗಳ ಕುರಿತು ಮಾಹಿತಿ ನೀಡಿದರು.
ವೈಜ್ಞಾನಿಕ ಪದ್ಧತಿಯಲ್ಲಿ ಹೈನುಗಾರಿಕೆ ನಡೆಸಿದರೆ ರೈತರು ಉತ್ತಮ ಆದಾಯ ಗಳಿಸಬಹುದು ಎಂದು ತಿಳಿಸಿದರು.
ಸಂಸ್ಥೆಯ ಕೃಷಿ ಮೇಲ್ವಿಚಾರಕ ಎಂ. ಸುನೀಲ್ ಕುಮಾರ್ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸುತ್ತಿರುವ ವಿವಿಧ ತರಬೇತಿಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಜತೆಗೆ ಫಸಲ್ ಭೀಮಾ ಯೋಜನೆ ಬೆಳೆ ವಿಮೆ ಮಾಡಿಸುವುದರಿಂದ ಆಗುವ ಪ್ರಯೋಜನಗಳು ಹಾಗೂ ಬೆಳೆ ನಷ್ಟದ ಸಂದರ್ಭದಲ್ಲಿನ ಪರಿಹಾರದ ಕುರಿತು ಮಾಹಿತಿ ನೀಡಿದರು.
ಗ್ರಾಮದ ಮುಖಂಡ ಶ್ರೀನಿವಾಸ್, ಮಂಜೇಗೌಡ, ಬಸವಾಪಟ್ಟಣ ವಲಯದ ಮೇಲ್ವಿಚಾರಕಿ ರಾಧಾ, ಕಟ್ಟೆಪುರ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಉಷಾ, ಗ್ರಾಮದ ರೈತರು ಹಾಗೂ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಇದ್ದರು.