ಸಕಲೇಶಪುರದಲ್ಲಿ ಬಸ್ ಶೆಲ್ಟರ್ ಕಾಮಗಾರಿ ಸ್ಥಗಿತ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ ನಡೆಯಿತು. ಹಿಂದೂಪರ ಹೋರಾಟಗಾರ ರಘು, ನಾರಾಯಣ ಆಳ್ವ, ಬಿಜೆಪಿ ಮುಖಂಡ ಲೋಹಿತ್ ಕೌಡಳ್ಳಿ, ಹಿಂದೂ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜು ಕಬ್ಬಿನಗದ್ದೆ, ಮಿಲಿಟರಿ ಧರ್ಮಣ್ಣ, ನಾಗರಾಜ್, ಆಟೋ ರವಿ, ಕೌಶಿಕ್, ಶಿವು ಜಿಪ್ಪಿ, ದಿಲೀಪ್, ಹರೀಶ್ ಆಟೋ, ಮನು ಆಚಂಗಿ, ಪ್ರದೀಪ್ ಇತರರು ಇದ್ದರು.
- ಹಿಂದೂಪರ ಸಂಘಟನೆಗಳಿಂದ ಪ್ರತಿಭಟನೆ
- ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಕೆ
ಸಕಲೇಶಪುರ: ಪಟ್ಟಣದ ಹಳೇ ಬಸ್ ನಿಲ್ದಾಣ ಸಮೀಪ ಉಪನೋಂದಣಾಧಿಕಾರಿ ಹಾಗೂ ಅಬಕಾರಿ ಇಲಾಖೆಗೆ ಸೇರಿದ ಜಾಗದಲ್ಲಿ ನಿರ್ಮಾಣವಾಗುತ್ತಿದ್ದ ಬಸ್ ಶೆಲ್ಟರ್ ಕಾಮಗಾರಿ ಸ್ಥಗಿತಗೊಳಿಸಿರುವುದನ್ನು ಖಂಡಿಸಿ ಸೋಮವಾರ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಹಿಂದೂಪರ ಹೋರಾಟಗಾರ ರಘು ಮಾತನಾಡಿ, ಮಲೆನಾಡು ಪ್ರದೇಶವಾಗಿರುವ ಸಕಲೇಶಪುರದಲ್ಲಿ ವರ್ಷಪೂರ್ತಿ ಮಳೆ ಹಾಗೂ ಚಳಿ ಹೆಚ್ಚಿರುತ್ತದೆ. ವಿವಿಧ ಭಾಗಗಳಿಂದ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರ ಅನುಕೂಲಕ್ಕಾಗಿ ಶಾಸಕ ಸಿಮೆಂಟ್ ಮಂಜು ಅವರ ಅನುದಾನದಲ್ಲಿ ಬಸ್ ಶೆಲ್ಟರ್ ನಿರ್ಮಿಸಲಾಗುತ್ತಿತ್ತು. ಕಾಮಗಾರಿ ಶೇ.75ರಷ್ಟು ಪೂರ್ಣಗೊಂಡಿರುವ ಸಂದರ್ಭದಲ್ಲಿ ಅಧಿಕಾರಿಗಳು ಏಕಾಏಕಿ ಕಾಮಗಾರಿ ಸ್ಥಗಿತಗೊಳಿಸಿರುವುದು ಖಂಡನೀಯ ಎಂದರು.
ಉಪನೋಂದಣಾಧಿಕಾರಿ ಹಾಗೂ ಅಬಕಾರಿ ಇಲಾಖೆಯ ಕಚೇರಿಗಳು ಈಗಾಗಲೇ ಬೇರೆ ಕಟ್ಟಡಗಳಿಗೆ ಸ್ಥಳಾಂತರಗೊಂಡಿದ್ದು, ಸಂಬಂಧಿತ ಜಾಗ ಸಾರ್ವಜನಿಕ ಬಳಕೆಗೆ ಉಪಯೋಗವಾಗಬೇಕು. ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಲಾಗುತ್ತಿರುವ ಬಸ್ ಶೆಲ್ಟರ್ ಕಾಮಗಾರಿ ತಡೆಯುವುದು ಯಾವುದೇ ರೀತಿಯಲ್ಲೂ ಸಮಂಜಸವಲ್ಲ ಎಂದು ಹೇಳಿದರು.
ಕಾಮಗಾರಿ ಸ್ಥಗಿತಗೊಳಿಸುವ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲವಾದರೆ ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯಲು ಮುಂದಿನ ಹಂತದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಸೇರಿದಂತೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಹಳೇ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ರಚಿಸಿದ ಪ್ರತಿಭಟನಾಕಾರರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ, ಬಳಿಕ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ರೈಲ್ವೆ ಹೋರಾಟ ಸಮಿತಿಯ ನಾರಾಯಣ ಆಳ್ವ, ಬಿಜೆಪಿ ಮುಖಂಡ ಲೋಹಿತ್ ಕೌಡಳ್ಳಿ, ಹಿಂದೂ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಮಂಜು ಕಬ್ಬಿನಗದ್ದೆ, ಮಿಲಿಟರಿ ಧರ್ಮಣ್ಣ, ನಾಗರಾಜ್, ಆಟೋ ರವಿ, ಕೌಶಿಕ್, ಶಿವು ಜಿಪ್ಪಿ, ದಿಲೀಪ್, ಹರೀಶ್ ಆಟೋ, ಮನು ಆಚಂಗಿ, ಪ್ರದೀಪ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.