ಬಂದೂಕು ಪರವಾನಗಿ ನವೀಕರಣಕ್ಕಾಗಿ ರೈತರು ಸರದಿ ಸಾಲಿನಲ್ಲಿ ನಿಂತಿರುವುದು.
- ಬಂದೂಕು ಪರವಾನಗಿ ವಿಳಂಬಕ್ಕೆ ಖಂಡನೆ
- ಜಿಲ್ಲಾಡಳಿತದ ವಿರುದ್ಧ ರೈತರ ಆಕ್ರೋಶ
ಹಾಸನ: ಬಂದೂಕು ಪರವಾನಗಿ ನವೀಕರಣಕ್ಕಾಗಿ ಬಂದವರು ಪ್ರಕ್ರಿಯೆಯಲ್ಲಿ ಉಂಟಾಗಿರುವ ವಿಳಂಬ ಖಂಡಿಸಿ ಜಿಲ್ಲಾಧಿಕಾರಿ ಕಚೇರಿ ಕಟ್ಟಡದಲ್ಲೇ ಇರುವ ನ್ಯಾಯಾಂಗ ಶಾಖೆ ಮುಂದೆಯೇ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮುರುಳಿಧರ್ ಹಾಗೂ ಸುಬ್ರಹ್ಮಣ್ಯ ಸುದ್ದಿಗಾರರೊಂದಿಗೆ ಮಾತನಾಡಿ, ಐದು ವರ್ಷಕ್ಕೊಮ್ಮೆ ಬಂದೂಕು ಪರವಾನಗಿ ನವೀಕರಣ ಮಾಡಿಸಬೇಕೆಂಬ ನಿಯಮದ ಹಿನ್ನೆಲೆಯಲ್ಲಿ ರೈತರು ತಮ್ಮ ತಮ್ಮ ಬಂದೂಕುಗಳೊಂದಿಗೆ ಡಿಸಿ ಕಚೇರಿಗೆ ಆಗಮಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷೃ ಹಾಗೂ ನಿಧಾನಗತಿಯ ಕಾರ್ಯವೈಖರಿಯಿಂದ ಬಂದೂಕು ಮಾಲೀಕರು ದಿನವಿಡೀ ಕಚೇರಿ ಬಳಿ ಕಾಯುವಂತಾಗಿದೆ ಎಂದರು.
ಅಧಿಕಾರಿಗಳು ಪರವಾನಗಿ ನವೀಕರಣಕ್ಕೆ ಗಂಟೆಗಟ್ಟಲೇ ಸಮಯ ತೆಗೆದುಕೊಳ್ಳುತ್ತಿರುವುದರಿಂದ, ಕೃಷಿ ಕೆಲಸಗಳನ್ನು ಬಿಟ್ಟು ದೂರದ ಊರುಗಳಿಂದ ಬಂದ ರೈತರು ಊಟ, ನೀರು ಇಲ್ಲದೆ ಸಾಲಿನಲ್ಲಿ ನಿಂತು ಕಾಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಸಮಾಧಾನ ಹೊರಹಾಕಿದರು.
ಬಂದೂಕು ನವೀಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತವೇ ರೈತರಿಗೆ ಟೋಕನ್ ನೀಡಿ ದಿನಾಂಕ ನಿಗದಿಪಡಿಸಿದ್ದರೂ, ದಿನಕ್ಕೆ 50 ಜನರಿಗೆ ಟೋಕನ್ ನೀಡಲಾಗುತ್ತಿದ್ದು, ಕೇವಲ 20ರಿಂದ 25 ಜನರ ಪರವಾನಗಿ ಮಾತ್ರ ನವೀಕರಿಸಲಾಗುತ್ತಿದೆ ಎಂದು ಆರೋಪಿಸಿದರು. ಇದರಿಂದ ಉಳಿದ ರೈತರು ದಿನವಿಡೀ ಕಾಯುವಂತಾಗಿ, ಕೊನೆಗೆ ಯಾವುದೇ ಕೆಲಸವಾಗದೆ ಬರಿಗೈಯಲ್ಲಿ ವಾಪಸ್ಸಾಗುವ ಪರಿಸ್ಥಿತಿ ಎದುರಾಗುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಹಿಂದೆ ತಾಲೂಕು ಕಚೇರಿಗಳಲ್ಲೇ ಬಂದೂಕು ಪರವಾನಗಿ ನವೀಕರಣ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲೇ ನವೀಕರಣ ಮಾಡಿಸಬೇಕೆಂಬ ಹೊಸ ನಿಯಮ ಜಾರಿಯಾಗಿದೆ. ಇದರಿಂದ ಗ್ರಾಮೀಣ ಪ್ರದೇಶದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಬೆಳಗ್ಗೆಯೇ ದೂರದ ಊರುಗಳಿಂದ ಬಂದರೂ, ಸಂಜೆಯಾದರೂ ಪರವಾನಗಿ ನವೀಕರಣವಾಗುತ್ತಿಲ್ಲ. ಬೆಳಗ್ಗಿನಿಂದ ಸಂಜೆವರೆಗೂ ಊಟ, ನೀರು ಇಲ್ಲದೆ ಸರದಿ ಸಾಲಿನಲ್ಲಿ ಕಾಯಬೇಕಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ತಕ್ಷಣ ಜಿಲ್ಲಾಧಿಕಾರಿ ಈ ಸಮಸ್ಯೆಯತ್ತ ಗಮನಹರಿಸಿ, ರೈತರಿಗೆ ಅನುಕೂಲವಾಗುವಂತೆ ತಾಲೂಕು ಮಟ್ಟದಲ್ಲೇ ಬಂದೂಕು ಪರವಾನಗಿ ನವೀಕರಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.