ಅರಸೀಕೆರೆ ತಾಲೂಕಿನ ಗೀಜಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಸ್ತೂರಿ ಬಾ ಶಿಬಿರದಲ್ಲಿ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಶಾಸಕ ಶಿವಲಿಂಗೇಗೌಡ, ಸಮೀವುಲ್ಲಾ, ಶ್ರೀನಿವಾಸ್ ಚಂದ್ರಶೇಖರ್, ಶಶಿಧರ್, ದರ್ಶನ್ ಇತರರು ಇದ್ದರು. 
ಹಾಸನ

ನರೇಗಾ ಯೋಜನೆ ಹೆಸರು ಬದಲಿಸಿದ್ದಕ್ಕೆ ಖಂಡನೆ

ಪ್ರಮುಖ ಮುಖ್ಯಾಂಶಗಳು

  • ಬಿಜೆಪಿ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
  • ರಾಜ್ಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆ
ಅರಸೀಕೆರೆ ಗ್ರಾಮಾಂತರ: ರೈತಾಪಿ ವರ್ಗಕ್ಕೆ ಸಂಜೀವಿನಿ, ಕಾರ್ಮಿಕ ವರ್ಗಕ್ಕೆ ಆಶಾಕಿರಣವಾಗಿದ್ದ ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ನಿಷ್ಕ್ರಿಯಗೊಳಿಸಿ ಜಿ ರಾಮ್ ಜಿ ಹೆಸರಿನಲ್ಲಿ ಬದಲಿ ಯೋಜನೆಗೆ ಮುಂದಾಗಿರುವ ಕೇಂದ್ರ ಸರ್ಕಾರದ ನಿಲುವನ್ನು ಖಂಡಿಸಿ ಶಾಸಕ ಕೆ.ಎಂ.ಶಿವಲಿಂಗೇಗೌಡ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ತಾಲೂಕಿನ ಗೀಜಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಸ್ತೂರಿ ಬಾ ಶಿಬಿರದ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಪ್ರತಿಮೆಯ ಮುಂದೆ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದ ವೇಳೆ ದೇಶದ ರೈತರು ಮತ್ತು ಕಾರ್ಮಿಕರ ಹಿತ ಕಾಯುವ ದೃಷ್ಟಿಯಿಂದ ಉದ್ಯೋಗ ಖಾತ್ರಿ ಯೋಜನೆಯನ್ನು ಜಾರಿಗೆ ತಂದಿದ್ದರು. ಈ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಅಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಸಂಕಲ್ಪ ಮಾಡಿತ್ತು. ಹಾಗಾಗಿ ಯೋಜನೆಯ ಆಶಯದಂತೆ ಹಳ್ಳಿಗಳ ಚಿತ್ರಣ ಬದಲಾಗಿ ಉದ್ಯೋಗ ಖಾತ್ರಿ ಯೋಜನೆ ದೇಶದ ರೈತರು ಹಾಗೂ ಕೂಲಿ ಕಾರ್ಮಿಕರಿಗೆ ಆಶಾಕಿರಣವಾಗಿತ್ತು ಎಂದರು.
ಇಂತಹ ಜನಪರ ಯೋಜನೆಯನ್ನು ನಿಷ್ಕ್ರಿಯಗೊಳಿಸಿ ಜಿ ರಾಮ್ ಜಿ ಹೆಸರಿನಲ್ಲಿ ನೂತನ ಯೋಜನೆ ಅನುಷ್ಠಾನಕ್ಕೆ ತರಲು ಮುಂದಾಗಿರುವ ಕೇಂದ್ರ ಬಿಜೆಪಿ ಸರ್ಕಾರದ ನಿಲುವು ಕಳವಳಕ್ಕೆ ಕಾರಣವಾಗಿದ್ದು, ಕಾಂಗ್ರೆಸ್ ಪಕ್ಷ ಇದನ್ನು ಖಂಡಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು.
ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು ಮಾತನಾಡಿ, ಸ್ವಾರ್ಥ ರಾಜಕಾರಣಕ್ಕಾಗಿ ಜನಪರ ಯೋಜನೆ ಸ್ಥಗಿತಗೊಳಿಸಲಾಗಿದೆ. ಮಹಾತ್ಮ ಗಾಂಧೀಜಿ ಹೆಸರನ್ನು ಬದಲಿಸುವ ಮೂಲಕ ನೂತನ ಯೋಜನೆಗೆ ಜಿ ರಾಮ್ ಜಿ ಎಂದು ನಾಮಕರಣ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ನಿಲುವು ಗಾಂಧೀಜಿಗೆ ಮಾಡಿದ ಅಪಮಾನ ಹಾಗೂ ದೇಶದ ಜನತೆಯ ವಿರುದ್ಧವಾಗಿ ತೆಗೆದುಕೊಂಡಿರುವ ನಿರ್ಣಯ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಬಾಣಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಮಾಜಿ ಅಧ್ಯಕ್ಷ ಗಂಜಿಗೆರೆ ಚಂದ್ರಶೇಖರ್, ಕಾಂಗ್ರೆಸ್ ಶಶಿಧರ್ ನಗರಸಭೆ ನಿಕಟ ಪೂರ್ವ ಅಧ್ಯಕ್ಷ ಎಂ.ಸಮಿವುಲ್ಲಾ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್, ನಗರಸಭೆ ಮಾಜಿ ಸದಸ್ಯ ವೆಂಕಟಮುನಿ, ಉಮಾಶಂಕರ್, ಶ್ರೀನಿವಾಸ್, ದರ್ಶನ್, ಎಪಿಎಂಸಿ ಮಾಜಿ ಅಧ್ಯಕ್ಷ ಜಯರಾಂ, ಗೀಜಿಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಧರ್ಮೇಶ್, ದುಮ್ಮೇನಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ್ ಇತರರು ಇದ್ದರು.