ಎತ್ತಿನಹೊಳೆ ಯೋಜನೆ ಕಾಮಗಾರಿಯಿಂದ ಹಾನಿಗೊಳಗಾದ ಮನೆಗಳ ಮಾಲೀಕರಿಗೆ ಸರ್ಕಾರದ ಪರವಾಗಿ ಪರಿಹಾರ ಚೆಕ್‌ಗಳನ್ನು ಶಾಸಕ ಸಿಮೆಂಟ್ ಮಂಜು ವಿತರಿಸಿದರು. 
ಹಾಸನ

ಮಾಲೀಕರಿಗೆ ಪರಿಹಾರ ಚೆಕ್‌ಗಳ ವಿತರಣೆ

ಸಕಲೇಶಪುರ: ಎತ್ತಿನಹೊಳೆ ಯೋಜನೆ ಕಾಮಗಾರಿಯಿಂದ ಹಾನಿಗೊಳಗಾದ ಮನೆಗಳ ಮಾಲೀಕರಿಗೆ ಸರ್ಕಾರದ ಪರವಾಗಿ ಪರಿಹಾರ ಚೆಕ್‌ಗಳನ್ನು ಶಾಸಕ ಸಿಮೆಂಟ್ ಮಂಜು ವಿತರಿಸಿದರು.
ಪಟ್ಟಣದ ತಮ್ಮ ಸ್ವಗೃಹದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಹಾರ ಚೆಕ್ ವಿತರಿಸಿ ಮಾತನಾಡಿದ ಅವರು, ತಾಲೂಕಿನ ಮಾರನಹಳ್ಳಿ ಭಾಗದಲ್ಲಿ ಎತ್ತಿನಹೊಳೆ ಯೋಜನೆಯಡಿ ಸುರಂಗ (ಟನಲ್) ಮುಖಾಂತರ ನೀರು ಹರಿಸುವ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಸುಮಾರು 20 ಮನೆಗಳಿಗೆ ಹಾನಿಯಾಗಿತ್ತು. ಸುರಂಗ ನಿರ್ಮಾಣದ ವೇಳೆ ಸಿಡಿಸಿದ ಸ್ಫೋಟಕಗಳಿಂದ ಅನೇಕ ಬಡ ಮತ್ತು ಕಾರ್ಮಿಕರ ಮನೆಗಳಿಗೆ ಭಾರಿ ಪ್ರಮಾಣದಲ್ಲಿ ಹಾನಿಯಾಗಿ ವಾಸ ಮಾಡಲು ಅಸಾಧ್ಯವಾಗಿತ್ತು. ಹಾನಿಗೊಳಗಾದ ಮನೆಗಳಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಲಾಗಿತ್ತು. ಈ ಫಲವಾಗಿ ಸರ್ಕಾರವು ಮೊದಲ ಹಂತದಲ್ಲಿ ಸುಮಾರು 2 ಕೋಟಿ ರೂ.ಪರಿಹಾರ ಬಿಡುಗಡೆ ಮಾಡಿದ್ದು ಅದರ ಮೊದಲ ಹಂತದ ಚೆಕ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ಎತ್ತಿನಹೊಳೆ ಕಾಮಗಾರಿಯಿಂದ ಕೆಲವರು ಜಮೀನು ಕಳೆದುಕೊಂಡಿರುವುದರ ಜತೆಗೆ ಹಲವರ ಮನೆಗಳಿಗೆ ಹಾನಿಯಾಗಿದೆ. ಯೋಜನೆಗೆ ಸಂಬಂಧಿಸಿದಂತೆ ಸಣ್ಣ ಹಿಡುವಳಿದಾರರು, ಬಡವರು ಹಾಗೂ ಕಾರ್ಮಿಕ ವರ್ಗದವರು ತಮ್ಮ ಆಸ್ತಿ ಕಳೆದುಕೊಂಡಿದ್ದಾರೆ. ಆಸ್ತಿ ಮತ್ತು ಮನೆ ಕಳೆದುಕೊಂಡ ಎಲ್ಲರಿಗೂ ವೈಜ್ಞಾನಿಕವಾಗಿ ಮಾರುಕಟ್ಟೆ ದರದಲ್ಲಿ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಎತ್ತಿನಹೊಳೆ ಯೋಜನೆ ಹಾದುಹೋಗಿರುವ ಪ್ರದೇಶಗಳಲ್ಲಿ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಬೇಕು. ಎರಡು-ಮೂರು ವರ್ಷಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವ ಅತಿವೃಷ್ಟಿ ಮಳೆಯಿಂದ ಮಲೆನಾಡು ಪ್ರದೇಶಕ್ಕೆ ವಿಶೇಷ ಪ್ಯಾಕೇಜ್ ಘೋಷಿಸಬೇಕು. ಈ ಭಾಗದಲ್ಲಿ ಉಂಟಾದ ಎಲ್ಲ ಹಾನಿಯನ್ನು ಸರ್ಕಾರ ಸಮಗ್ರವಾಗಿ ಪರಿಶೀಲಿಸಿ, ಯಾರಿಗೂ ಅನ್ಯಾಯವಾಗದಂತೆ ಸೂಕ್ತ ಪರಿಹಾರ ಹಾಗೂ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.