ಪಟ್ಟಣದ ಪಂಪ್‌ಹೌಸ್ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಹೆಚ್ಚುವರಿ ಕಟ್ಟಡದ ಕಾಮಗಾರಿಯನ್ನು ಶಾಸಕ ಎಚ್.ಕೆ.ಸುರೇಶ್ ಪರಿಶೀಲಿಸಿದರು. ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ದೂದ್‌ಪೀರ್, ಸಹಾಯಕ ನಿರ್ದೇಶಕ ಲಿಂಗರಾಜು, ಎಇಇ ನವ್ಯಶ್ರೀ, ಭೂ ಸೇನಾ ನಿಗಮದ ಅಧಿಕಾರಿಗಳಿದ್ದರು.
- ಶಾಸಕ ಎಚ್.ಕೆ.ಸುರೇಶ್ ಸೂಚನೆ
- ಬಾಲಕಿಯರ ವಿದ್ಯಾರ್ಥಿನಿಲಯದ ಹೆಚ್ಚುವರಿ ಕಟ್ಟಡ ಪರಿಶೀಲನೆ
ಬೇಲೂರು: ಪಟ್ಟಣದ ಪಂಪ್‌ಹೌಸ್ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದ ಹೆಚ್ಚುವರಿ ಕಟ್ಟಡದ ಕಾಮಗಾರಿಯನ್ನು ಶಾಸಕ ಎಚ್.ಕೆ.ಸುರೇಶ್ ಪರಿಶೀಲಿಸಿ ಗುಣಮಟ್ಟದ ಕಾಮಗಾರಿಗೆ ಸೂಚಿಸಿದರು.
ಬಳಿಕ ಮಾತನಾಡಿದ ಅವರು, ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ ಬಹುತೇಕ ಬಡ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳೇ ಹೆಚ್ಚಾಗಿ ಇರುವುದರಿಂದ ಕೊಠಡಿಗಳ ಸಮಸ್ಯೆ ಕಾಡುತ್ತಿತ್ತು. ಆದರೆ ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹೆಚ್ಚುವರಿ ಕೊಠಡಿ ನಿರ್ಮಿಸಲು 3 ಕೋಟಿ ರೂ. ಅನುದಾನ ಮಂಜೂರು ಮಾಡಿಸಿದ್ದೇನೆ. ಭೂ ಸೇನಾ ನಿಗಮದಿಂದ ಹೆಚ್ಚುವರಿ ಕಟ್ಟಡದ ಕಾಮಗಾರಿ ಮಾಡಿಸಲಾಗುತ್ತಿದೆ. ಕಾಮಗಾರಿಯನ್ನು ಗುಣ ಮಟ್ಟದಲ್ಲಿದ್ದು ಯಾವುದೇ ಲೋಪವಾಗದಂತೆ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದರು.
ವಿದ್ಯಾರ್ಥಿಗಳು ನಮ್ಮ ಮಕ್ಕಳಿದ್ದಂತೆ. ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ವಿದ್ಯಾರ್ಥಿನಿಲಯಕ್ಕೆ ಬಂದಿರುತ್ತಾರೆ. ಜತೆಗೆ ಭವಿಷ್ಯದಲ್ಲಿ ದೊಡ್ಡ ಕನಸು ಕಟ್ಟಿಕೊಂಡಿರುತ್ತಾರೆ. ಅವರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಮೂಲಸೌಲಭ್ಯ ಒದಗಿಸುವುದು ನಮ್ಮ ಕರ್ತವ್ಯವಾಗಿದೆ. ಆದ್ದರಿಂದ ಹೆಚ್ಚುವರಿ ಕೊಠಡಿ ನಿರ್ಮಿಸಲು ಕಾಮಗಾರಿ ಮಾಡಿಸುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಗಮನಹರಿಸಿ ಕೆಲಸ ಮಾಡಿಸಬೇಕು ಎಂದರು.
ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ದೂದ್‌ಪೀರ್, ಸಹಾಯಕ ನಿರ್ದೇಶಕ ಲಿಂಗರಾಜು, ಎಇಇ ನವ್ಯಶ್ರೀ, ಭೂ ಸೇನಾ ನಿಗಮದ ಅಧಿಕಾರಿಗಳಿದ್ದರು.