ಅರಕಲಗೂಡು ತಾಲೂಕಿನ ಚಿಕ್ಕಮಗ್ಗೆ ಗ್ರಾಮದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡ ನಿವಾಸದಲ್ಲಿ ಅಧಿಕಾರಿಗಳ ಸಮಿತಿ ಇತ್ತೀಚೆಗೆ ಸಭೆ ನಡೆಸಿತು. ಡಾ.ಹುಲಿಮನಿ ತಿಪ್ಪಣ್ಣ, ಕೆ.ಸಿ.ಸೌಮ್ಯಾ, ಕೆ.ಜೆ.ಕವಿತಾ, ಡಾ.ಪುಷ್ಪಲತಾ ಇತರರಿದ್ದರು.
ಕೃಷಿ ಇಲಾಖೆ ಅಧಿಕಾರಿ ಒಳಗೊಂಡ ಸಮಿತಿ ಸಭೆಯಲ್ಲಿ ನಿರ್ಧಾರ
ಅರಕಲಗೂಡು: ತಾಲೂಕಿನ ದೊಡ್ಡಮಗ್ಗೆ ಹೋಬಳಿಯ ಚಿಕ್ಕಮಗ್ಗೆ ಗ್ರಾಮದ ರೈತ ಸ್ವಾಮಿಗೌಡ ಅವರು ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ಮಂಜೂರು ಮಾಡುವ ಬಗ್ಗೆ ಅಧಿಕಾರಿಗಳ ಸಮಿತಿ ಮೃತರ ನಿವಾಸದಲ್ಲೇ ಸಭೆ ನಡೆಸಿ ಒಮ್ಮತದ ನಿರ್ಧಾರ ಕೈಗೊಂಡಿದೆ.
ಸಕಲೇಶಪುರ ಉಪವಿಭಾಗಾಧಿಕಾರಿ ಡಾ.ಹುಲಿಮನಿ ತಿಪ್ಪಣ್ಣ, ತಹಸೀಲ್ದಾರ್ ಕೆ.ಸಿ.ಸೌಮ್ಯಾ ಅವರ ನೇತೃತ್ವದಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ, ಸರ್ಕಾರದ ನಿಯಮಾವಳಿಗಳ ಪ್ರಕಾರ ಮೃತ ರೈತನ ಕುಟುಂಬಕ್ಕೆ ನೀಡಬೇಕಿರುವ ಪರಿಹಾರವನ್ನು ಶೀಘ್ರದಲ್ಲೇ ಅವರ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಕೆಲ ದಿನಗಳ ಹಿಂದೆ ತೀವ್ರ ಸಾಲದ ಒತ್ತಡದಿಂದ ರೈತ ಸ್ವಾಮಿಗೌಡ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದು ಕುಟುಂಬವನ್ನು ತೀವ್ರ ಸಂಕಷ್ಟಕ್ಕೆ ದೂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅರಕಲಗೂಡು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಇದೇ ವೇಳೆ ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆತ್ಮಹತ್ಯೆಗೆ ಕಾರಣವಾದ ಪರಿಸ್ಥಿತಿಗಳ ಕುರಿತು ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಿದ್ದರು.
ಸಭೆಯಲ್ಲಿ ಸಹಾಯಕ ಕೃಷಿ ನಿರ್ದೇಶಕಿ ಶ್ರೀಮತಿ ಕೆ.ಜೆ.ಕವಿತಾ ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ, ಪೊಲೀಸರು ಹಾಜರಿದ್ದು ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿ, ಸರ್ಕಾರದಿಂದ ದೊರೆಯುವ ಎಲ್ಲ ಸೌಲಭ್ಯಗಳನ್ನು ತ್ವರಿತವಾಗಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕಿ ಕೆ.ಜೆ.ಕವಿತಾ ಮಾತನಾಡಿ, ಅತಿವೃಷ್ಟಿ, ಅನಾವೃಷ್ಟಿ ಹಾಗೂ ಬೆಳೆ ವೈಫಲ್ಯದಂತಹ ಸಮಸ್ಯೆಗಳು ರೈತರ ಬದುಕಿಗೆ ದೊಡ್ಡ ಸವಾಲಾಗಿವೆ. ಆದರೆ ಯಾವುದೇ ಕಾರಣಕ್ಕೂ ರೈತರು ಆತ್ಮಹತ್ಯೆಯಂತಹ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಸಂಕಷ್ಟದ ಸಂದರ್ಭದಲ್ಲಿ ಸರ್ಕಾರ ರೈತರ ಬೆನ್ನಿಗೆ ನಿಲ್ಲಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಮೃತ ರೈತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ಮಂಜೂರು ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಅಧಿಕಾರಿಗಳ ತಂಡ ಮೃತ ರೈತನ ಕುಟುಂಬದ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ, ಅಗತ್ಯ ದಾಖಲೆಗಳ ಪರಿಶೀಲನೆ ಮತ್ತು ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಪರಿಹಾರ ಧನವನ್ನು ಶೀಘ್ರವೇ ಬಿಡುಗಡೆ ಮಾಡುವುದಾಗಿ ತಿಳಿಸಿತು.