ಚನ್ನರಾಯಪಟ್ಟಣ ತಿಮ್ಮಪ್ಪಯ್ಯ ಬಡಾವಣೆಯ ಪುನಿತ್ ರಾಜಕುಮಾರ್ ಉದ್ಯಾನವನದಲ್ಲಿ ಮಕ್ಕಳ ಆಟಿಕೆ ಪರಿಗಳು ಹಾಗೂ ಓಪನ್ ಜಿಮ್‌ಅನ್ನು ಶಾಸಕ ಬಾಲಕೃಷ್ಣ ಉದ್ಘಾಟಿಸಿದರು. ಪುರಸಭಾಧ್ಯಕ್ಷ ಕೋಟೆ ಮೊಹನ್, ಆರ್.ಯತೀಶ್ ಕುಮಾರ್ ಇತರರಿದ್ದರು.
ಚನ್ನರಾಯಪಟ್ಟಣ: ಪಟ್ಟಣದ ಪುನೀತ್ ರಾಜಕುಮಾರ್ ಉದ್ಯಾನವನವನ್ನು 30 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ 2.50 ಲಕ್ಷ ರೂ. ವೆಚ್ಚದಲ್ಲಿ ಹೈಮಾಸ್ಕ್ ದೀಪ ಹಾಗೂ ಕೊಳವೆಬಾವಿ ನಿರ್ಮಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಪಟ್ಟಣದ ತಿಮ್ಮಪಯ್ಯ ಬಡಾವಣೆಯಲ್ಲಿ ಪುನಿತ್ ರಾಜಕುಮಾರ್ ಉದ್ಯಾನವನದಲ್ಲಿ ಡಾ.ರಾಜಕುಮಾರ್ ಹುಟ್ಟು ಹಬ್ಬದ ಅಂಗವಾಗಿ ಇತ್ತೀಚೆಗೆ ಓಪನ್ ಜಿಮ್ ಹಾಗೂ ಮಕ್ಕಳ ಆಟಿಕೆಯ ಪರಿಕರಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿ, ಪುರಸಭೆ ಅಧ್ಯಕ್ಷ ಸಿ.ಎನ್.ಮೋಹನ್ ಶ್ರಮದಿಂದ 30 ಲಕ್ಷ ರೂ. ಅನುದಾನದಲ್ಲಿ ಉದ್ಯಾನವನ ಅಭಿವೃದ್ಧಿಪಡಿಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿ 14 ಉದ್ಯಾನವನಗಳಿದ್ದು, ಇವುಗಳಲ್ಲಿ ಆರು ಉದ್ಯಾನವನಗಳನ್ನು ತಲಾ 30 ಲಕ್ಷ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಪಟ್ಟಣದ ಎಲ್ಲ ಉದ್ಯಾನವನಗಳ ಅಭಿವೃದ್ಧಿಗೆ ನಾವು ಬದ್ಧವಾಗಿದ್ದೇವೆ ಎಂದು ಹೇಳಿದರು.
ಡಾ.ರಾಜಕುಮಾರ್ ಸಂಘದ ಹಾಸನ ಜಿಲ್ಲಾ ಗೌರವಾಧ್ಯಕ್ಷ ಬಾಳ್ಳು ಗೋಪಾಲ್ ಮಾತನಾಡಿ, ರಾಜ್ಯದ ಸಾಕಷ್ಟು ಕೆರೆ ಹಾಗೂ ಉದ್ಯಾನ ವನಗಳನ್ನು ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ. ಇದರಿಂದ ಸಾರ್ವಜನಿಕರ ಆಸ್ತಿ ಉಳ್ಳವರ ಪಾಲಾಗುತ್ತಿದೆ. ಇದನ್ನು ತಪ್ಪಿಸಲು ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ವೆಂಕಟೇಶ್, ನಿರ್ದೇಶಕರಾದ ಅನಿಲ್, ರಮೇಶ್, ಪುರಸಭೆ ಮಾಜಿ ಅಧ್ಯಕ್ಷರಾದ ಕೋಟೆ ಮೋಹನ್, ಬನಶಂಕರಿ, ಮಾಜಿ ಉಪಾಧ್ಯಕ್ಷೆ ಕವಿತಾ ರಾಜು, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಗಣೇಶ್, ಮಾಜಿ ಸದಸ್ಯರಾದ ರಘು, ನಂಜುಂಡ, ಮೈಮ್ ಮುಖ್ಯಾಧಿಕಾರಿ ಯತೀಶ್, ಸಾಹಿತಿ ಹೊನ್ನಶಟ್ಟಿಹಳ್ಳಿ ಗಿರಿರಾಜ್, ರೈತ ಸಂಘದ ಅಧ್ಯಕ್ಷೆ ಪ್ರೇಮಮ್ಮ, ಜಿಲ್ಲಾ ಪತ್ರಕರ್ತರ ಸಂಘ ಉಪಾಧ್ಯಕ್ಷ ನಂಜುಂಡೇಗೌಡ, ಡಾ.ರಾಜಕುಮಾರ್ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಪುಟ್ಟಣ್ಣ, ಪದಾಧಿಕಾರಿಗಳು ಹಾಗೂ ಇತರರು ಉಪಸ್ಥಿತರಿದ್ದರು.