ಚನ್ನರಾಯಪಟ್ಟಣದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ಇಲಾಖೆಯ ವಿವಿಧ ಹಂತಗಳ ಅಧಿಕಾರಿಗಳೊಂದಿಗೆ ವಿದ್ಯುತ್ ಸಮಸ್ಯೆ ಕುರಿತು ಶಾಸಕ ಸಿ.ಎನ್.ಬಾಲಕೃಷ್ಣ ಗುರುವಾರ ಸಭೆ ನಡೆಸಿದರು. ಆರ್.ರತ್ನಾ, ಹರೀಶ್, ವಜ್ರಕುಮಾರ್ ಇತರರಿದ್ದರು. 
ಹಾಸನ

ದಿನಕ್ಕೆ ಏಳು ಗಂಟೆ ಮೂರು ಫೇಸ್‌ನಲ್ಲಿ ವಿದ್ಯುತ್ ನೀಡಲು ಬದ್ಧರಾಗಿರಿ

ಎಂ.ರವಿ
ಚನ್ನರಾಯಪಟ್ಟಣ: ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದು, ಬೆಳೆಗಳನ್ನು ಉಳಿಸಿಕೊಳ್ಳಲು ನೀರಾವರಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ ಅತ್ಯಗತ್ಯವಾಗಿದೆ. ದಿನಕ್ಕೆ 7 ಗಂಟೆ ಮೂರು ಫೇಸ್ ವಿದ್ಯುತ್ ನೀಡಲು ಬದ್ಧರಾಗಿರಬೇಕು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ಕಾರ್ಯಪಾಲಕ ಇಂಜಿನಿಯರ್ ಕಚೇರಿಯಲ್ಲಿ ಇಲಾಖೆಯ ವಿವಿಧ ಹಂತಗಳ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿ ರೈತರಿಗೆ ಸಮಯಕ್ಕೆ ಸರಿಯಾಗಿ ವಿದ್ಯುತ್ ನೀಡದಿದ್ದರೆ ಬೆಳೆ ಉಳಿಸಿಕೊಳ್ಳುವುದು ಕಷ್ಟವಾಗಲಿದೆ. ಮುಂಗಾರು ಕೈಕೊಟ್ಟಿದ್ದು ಇರುವಷ್ಟು ನೀರಿನಲ್ಲೇ ಕೃಷಿ ಮಾಡಲು ವಿದ್ಯುತ್ ಸರಬರಾಜು ವ್ಯವಸ್ಥೆ ಪೂರಕವಾಗಿರಬೇಕು. ಬೆಳಗಿನ ವೇಳೆ 3 ಗಂಟೆ ಹಾಗೂ ರಾತ್ರಿ ವೇಳೆ 4 ಗಂಟೆ ವಿದ್ಯುತ್ ನೀಡುತ್ತಿದ್ದು ಇದರಲ್ಲಿ ವ್ಯತ್ಯಾಸವಾಗಬಾರದು. ತಾಲೂಕಿನಲ್ಲಿ ಇತ್ತೀಚೆಗೆ ಉಂಟಾಗಿರುವ ವಿದ್ಯುತ್ ಸಮಸ್ಯೆಗಳನ್ನು ಶೀಘ್ರವಾಗಿ ಪರಿಹರಿಸಿ, ರೈತರು ಹಾಗೂ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.
ತಾಲೂಕಿನ ಸೆಸ್ಕ್ ಇಲಾಖೆಯಲ್ಲಿ ಲೈನ್‌ಮನ್‌ಗಳ ಕೊರತೆ ಕಾಡುತ್ತಿದ್ದು, ಶ್ರವಣಬೆಳಗೊಳದಲ್ಲಿ 36 ಲೈನ್‌ಮನ್‌ಗಳು ಇರಬೇಕಾದ ಕಡೆ ಕೇವಲ 17 ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಇಲ್ಲಿಂದ ಬೇರೆಕಡೆಗೆ ನಿಯೋಜನೆ ಗೊಂಡಿರುವವರನ್ನು ಕೂಡಲೇ ವಾಪಸ್ ಕರೆಸಿಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿ ವಿದ್ಯುತ್ ವ್ಯತ್ಯಯ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ದೂರುಗಳಿಗೆ ತಕ್ಷಣ ಸ್ಪಂದಿಸಿ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಶೀಘ್ರ ಸಂಪರ್ಕ ಯೋಜನೆಯಡಿ ಪರಿವರ್ತಕಗಳನ್ನು ಸಕಾಲದಲ್ಲಿ ನೀಡದಿರುವ ಬಗ್ಗೆ ದೂರುಗಳಿವೆ. ಹೊಸ ವಿದ್ಯುತ್ ಪರಿವರ್ತಕಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಸಕಾಲದಲ್ಲಿ ಸಿಗುವಂತಾಗಬೇಕು. ತಾಲೂಕಿನಲ್ಲಿ 47 ಸಾವಿರ ಅಧಿಕೃತ ಪರಿವರ್ತಕಗಳಿವೆ. ಇನ್ನೂ ಅನೇಕ ಅನಧಿಕೃತವಾಗಿದ್ದು ಇವುಗಳನ್ನು ಸಕ್ರಮಗೊಳಿಸಿಕೊಳ್ಳಬೇಕು. 63 ಕೆವಿ ಇರುವ ಪರಿವರ್ತಕಗಳಿಂದ ಹೆಚ್ಚುವರಿಯಾಗಿ ಸಂಪರ್ಕ ಪಡೆದುಕೊಳ್ಳುತ್ತಿದ್ದು, ಅಂತಹ ಕಡೆಗಳಲ್ಲಿ 100 ಕೆವಿ ಪರಿವರ್ತಕಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ. ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಿಗೆ ಪರಿವರ್ತಕಗಳನ್ನು ಅಳವಡಿಸಬೇಕು. ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವಿದ್ಯುತ್ ಪರಿವರ್ತಕಗಳ ಸಂರಕ್ಷಣೆ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ ಐಪಿ ಫೀಡರ್ ಸಮಸ್ಯೆ, ಗಂಗಾಕಲ್ಯಾಣ ಯೋಜನೆಯ ವಿದ್ಯುತ್ ಸಂಪರ್ಕಗಳನ್ನು ಶೀಘ್ರ ಅಳವಡಿಸುವುದು, ದಿಡಗ ಭಾಗದಲ್ಲಿ ರೈತರು ಎದುರಿಸುತ್ತಿರುವ ವಿದ್ಯುತ್ ಸಮಸ್ಯೆಗಳ ಪರಿಹಾರ ಹಾಗೂ ಸಬ್ಬನಹಳ್ಳಿ ಲಿಂಕ್ ಲೈನ್ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಂಪರ್ಕ ಕಲ್ಪಿಸುವುದು ಆಗಾಗ್ಗೆ ಉಂಟಾಗುತ್ತಿರುವ ವಿದ್ಯುತ್ ವ್ಯತ್ಯಯ, ಹಾಳಾಗಿರುವ ವಿದ್ಯುತ್ ಪರಿವರ್ತಕಗಳ ಬದಲಾವಣೆ ಹಾಗೂ ಹೊಸ ವಿದ್ಯುತ್ ಲೈನ್‌ಗಳ ಕಾಮಗಾರಿಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಶಾಸಕರು ಮಾಹಿತಿ ಪಡೆದರು.
ಸಭೆಯಲ್ಲಿ ಸೆಸ್ಕ್ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಆರ್.ರತ್ನಾ, ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ಹರೀಶ್, ವಜ್ರಕುಮಾರ್, ಹಿರಿಯ ಅಧಿಕಾರಿಗಳು, ಇಂಜಿನಿಯರ್‌ಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.