ಹಾಸನದ ಸರ್ಕಾರಿ ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಎಡವಟ್ಟು ಹಾಗೂ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮಲತಾಯಿ ಧೋರಣೆಯನ್ನು ಖಂಡಿಸಿ, ವಿದ್ಯಾರ್ಥಿಗಳು ಕಾಲೇಜಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಹಾಸನ: ಸರ್ಕಾರಿ ಕಾನೂನು ಕಾಲೇಜಿನ ಆಡಳಿತ ಮಂಡಳಿಯ ಎಡವಟ್ಟು ಹಾಗೂ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಮಲತಾಯಿ ಧೋರಣೆಯನ್ನು ಖಂಡಿಸಿ, ವಿದ್ಯಾರ್ಥಿಗಳು ಕಾಲೇಜಿಗೆ ಶುಕ್ರವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.
24 ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿರುವುದನ್ನು ವಿರೋಧಿಸಿ ಆಕ್ರೋಶ ಹೊರಹಾಕಿದ ವಿದ್ಯಾರ್ಥಿಗಳು, ನ್ಯಾಯ ಸಿಗುವವರೆಗೂ ತರಗತಿಗೆ ಹಾಜರಾಗುವುದಿಲ್ಲ ಎಂದು ಪಟ್ಟು ಹಿಡಿದರು.
2022-23ನೇ ಸಾಲಿನಲ್ಲಿ ಹಾಸನದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ನಿಗದಿತ 60 ಸೀಟುಗಳ ಬದಲಿಗೆ 120 ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳಲಾಗಿತ್ತು. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅನುಮತಿ ಸಿಗುವ ಮೊದಲೇ ಹೆಚ್ಚುವರಿ ದಾಖಲಾತಿ ಮಾಡಿಕೊಂಡಿದ್ದೇ ಈಗಿನ ಅವಾಂತರಕ್ಕೆ ಕಾರಣ. 4ನೇ ವರ್ಷಕ್ಕೆ ಬಂದಿರುವ ಈ ವಿದ್ಯಾರ್ಥಿಗಳ ಫಲಿತಾಂಶವನ್ನು ವಿಶ್ವವಿದ್ಯಾಲಯವು ಈಗ ಅಮಾನ್ಯಗೊಳಿಸಿದ್ದು, ವಿದ್ಯಾರ್ಥಿಗಳು ಬೀದಿಗೆ ಬೀಳುವಂತಾಗಿದೆ.
ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಬೆಂಗಳೂರಿನ ಖಾಸಗಿ ಕಾಲೇಜುಗಳಲ್ಲಿ ಇಂಥದ್ದೇ ಸಮಸ್ಯೆ ಉಂಟಾದಾಗ ವಿಶ್ವವಿದ್ಯಾಲಯವು ಪ್ರಭಾವಿಗಳ ಒತ್ತಡಕ್ಕೆ ಮಣಿದು ಬಗೆಹರಿಸಿದೆ. ಆದರೆ, ಸರ್ಕಾರಿ ಕಾಲೇಜಿನ ವಿಷಯದಲ್ಲಿ ವಿವಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಖಾಸಗಿ ಕಾಲೇಜುಗಳ ಹೆಸರು ಹಾಳಾಗುತ್ತದೆ ಎಂದು ತಕ್ಷಣ ಸ್ಪಂದಿಸುವ ಅಧಿಕಾರಿಗಳು, ನಮ್ಮ ಭವಿಷ್ಯದ ಬಗ್ಗೆ ಏಕೆ ಮೌನವಾಗಿದ್ದಾರೆ? ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪ್ರಶ್ನಿಸಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಪ್ರಾಂಶುಪಾಲೆ ಶೀನಾ ಥಾಮಸ್ ಮಾತನಾಡಿ, ಬಿಸಿಐಗೆ ಶುಲ್ಕ ಪಾವತಿಸಲಾಗಿದೆ ಮತ್ತು ಪ್ರಕರಣ ಲೀಗಲ್ ಎಜುಕೇಶನ್ ಕಮಿಟಿ ಮುಂದಿದೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಗಮನಕ್ಕೆ ವಿಷಯ ತರಲಾಗಿದೆ. ಪ್ರಕ್ರಿಯೆ ಚಾಲ್ತಿಯಲ್ಲಿದೆ, ವಿದ್ಯಾರ್ಥಿಗಳು ತಾಳ್ಮೆ ವಹಿಸಬೇಕು ಎಂದು ಮನವಿ ಮಾಡಿದರು. ಆದರೆ, ಈ ಭರವಸೆಗೆ ಒಪ್ಪದ ವಿದ್ಯಾರ್ಥಿಗಳು ಪ್ರತಿಭಟನೆ ಮುಂದುವರಿಸಿದರು.