ಬೇಲೂರು ತಾಲೂಕಿನ ಅರೇಹಳ್ಳಿ ಬೋಬಳಿಯ ನಲ್ಕೆ ಗ್ರಾಮದಲ್ಲಿ ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಾಫಿಯನ್ನು ತಡೆಯಲು ಬೆಳೆಗಾರರು ಹಾಗೂ ಕಾರ್ಮಿಕರು ಪ್ರಯತ್ನಿಸುತ್ತಿರುವುದು. 
ಹಾಸನ

ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ಹೊಡೆತ

ಪ್ರಮುಖ ಮುಖ್ಯಾಂಶಗಳು

  • ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ಹೊಡೆತ
  • ಬೆಳೆ ರಕ್ಷಿಸಿಕೊಳ್ಳಲಾಗದೆ ಪರದಾಟ*ಗುಣಮಟ್ಟ ಕಳೆದುಕೊಳ್ಳುವ ಆತಂಕ
ಕೆ.ಆರ್.ಪ್ರಸಿನ್ ಹಾಸನ
ಜಿಲ್ಲೆಯಲ್ಲಿ ಸುರಿಯುತ್ತಿರುವ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರಿಗೆ ಸಂಕಷ್ಟ ಶುರುವಾಗಿದೆ.
ಧಾರಾಕಾರ ಮಳೆಗೆ ಕಾಫಿ ಮಣ್ಣು ಪಾಲಾಗಿದೆ. ಹಲವೆಡೆ ಕೊಯ್ದು ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಅನಿರೀಕ್ಷಿತವಾಗಿ ಸುರಿದ ಮಳೆಯಲ್ಲಿ ನೆನೆದು ಸಂಪೂರ್ಣ ಹಾಳಾಗಿದೆ. ಇದರಿಂದ ಕಾಫಿ ಬೆಳೆಗಾರರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಅನಿರೀಕ್ಷಿತ ಮಳೆಯಿಂದಾಗಿ ಕಾಫಿ ಹೂವು, ಕಾಫಿ ಫಸಲು ಸೇರಿ ಕಾಫಿ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.
ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಕಾಫಿ ಹಣ್ಣನ್ನು ಒಣಗಿಸಲಾಗದೆ ಬೆಳೆಗಾರರು ಪರದಾಡುತ್ತಿದ್ದಾರೆ. ಮಂಗಳವಾರ ರಾತ್ರಿ ಏಕಾಏಕಿ ಸುರಿದ ಜೋರು ಮಳೆಗೆ ಬಯಲು ಪ್ರದೇಶ ಹಾಗೂ ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಕೊಚ್ಚಿ ಹೋಗಿ ಮಣ್ಣು ಪಾಲಾಗಿದೆ. ಮಣ್ಣಿನ ಕಣದ ಮೇಲೆ ಒಣಗಲು ಹಾಕಿದ್ದ ಕಾಫಿ ಹಣ್ಣು, ಮಣ್ಣು ಮಿಶ್ರಿತವಾಗಿ ಸಂಪೂರ್ಣವಾಗಿ ನಾಶವಾಗಿದೆ.
ಏಕಾಏಕಿ ಮಳೆ ಸುರಿಯಲು ಆರಂಭವಾಗಿದ್ದರಿಂದ ಕಾಫಿ ಬೀಜವನ್ನು ರಾಶಿ ಮಾಡಿ, ರಕ್ಷಣೆ ಮಾಡಿಕೊಳ್ಳಲು ಬೆಳೆಗಾರರು, ಕಾರ್ಮಿಕರು ಹರಸಾಹಸ ಪಡುವಂತಾಯಿತು. ಸಂಪೂರ್ಣವಾಗಿ ಒಣಗಿ ಇನ್ನೇನು ಮಾರಾಟ ಮಾಡಬೇಕೆಂದುಕೊಂಡಿದ್ದ ಫಸಲು ಕೂಡ ಮಳೆಯಲ್ಲಿ ನೆನೆದು ಹೋಗಿದೆ.
ಬುಧವಾರವೂ ಜಿಲ್ಲೆಯಾದ್ಯಂತ ಮಳೆಯಾಗಿ ಸಮಸ್ಯೆಯಾಯಿತು. ಮಲೆನಾಡು ಭಾಗ, ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಮಳೆ, ಮೋಡ ಕವಿದ ವಾತಾವರಣ ಮುಂದುವರಿದಿರುವುದರಿಂದ ಕಾಫಿ ಗುಣಮಟ್ಟ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಕಾರ್ಮಿಕರ ಕೊರತೆಯಿಂದ ರೋಬಸ್ಟಾ ಕಾಫಿ ಕೊಯ್ದು ಬಾಕಿ ಇದ್ದು, ಮಳೆ ಆರ್ಭಟಕ್ಕೆ ಉದುರಿ ತೋಟದಲ್ಲೇ ಮಣ್ಣು ಸೇರಿದೆ.
ಸಕಲೇಶಪುರ ತಾಲೂಕಿನ ವಿವಿಧ ಭಾಗಗಳಲ್ಲಿ 2 ಇಂಚಿಗೂ ಹೆಚ್ಚು ಮಳೆಯಾಗಿದೆ. ಹೆತ್ತೂರು, ಹಾನುಬಾಳು, ಯಸಳೂರು ಹೋಬಳಿ ಭಾಗದಲ್ಲಿ ಸರಾಸರಿ 2 ಇಂಚಿನಷ್ಟು ಮಳೆ ದಾಖಲಾಗಿದೆ.
ಆಲೂರು ತಾಲೂಕಿನ ಕೆ.ಹೊಸಕೋಟೆ, ಬೇಲೂರು ತಾಲೂಕಿನ ಹಲವು ಭಾಗಗಳಲ್ಲೂ ಅಕಾಲಿಕ ಮಳೆಯ ಆರ್ಭಟ ಜೋರಾಗಿತ್ತು. ಉಳಿದಂತೆ ಅರಕಲಗೂಡು, ಹಾಸನ, ಹೊಳೆನರಸೀಪುರ ತಾಲೂಕು ಭಾಗದಲ್ಲಿ ಮಂಗಳವಾರ ತುಂತುರು ಮಳೆಯಾದರೆ. ಬುಧವಾರ ಜೋರು ಮಳೆ ಸುರಿಯಿತು.
ಕೆಲ ಭಾಗದಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ಮಳೆ ಪ್ರಾರಂಭವಾದರೆ, ಕೆಲ ಭಾಗದಲ್ಲಿ ರಾತ್ರಿ ವೇಳೆಗೆ ಆರಂಭವಾಗಿದ್ದರಿಂದ ಕಣದಲ್ಲಿ ಒಣ ಹಾಕಿದ್ದ ಕಾಫಿ ಮಳೆಯಿಂದ ನೆನೆಯುವುದಿಂದ ಕಾಪಾಡಿ ಕೊಳ್ಳಲಾಗದೆ ಕೈಚೆಲ್ಲಿ ಕೂರಬೇಕಾಯಿತು. ಬುಧವಾರ ದಿಢೀರನೆ ಎರಡೆರಡು ಭಾರಿ ಮಳೆ ಸುರಿದಿದ್ದು, ಸಮಸ್ಯೆ ಉಂಟು ಮಾಡಿತು.
ಮಳೆಯಲ್ಲಿ ನೆನೆದಿರುವ ಕಾಫಿಯನ್ನು ಒಣಗಿಸಲು ಮರುದಿನ ಬೆಳಗ್ಗೆಯಿಂದಲೇ ಬಿಸಿಲು ಬಾರದೆ ಮೋಡ ಕವಿದ ವಾತಾವರಣ ಕಂಡುಬಂತು. ಸಂಜೆ ವೇಳೆಗೆ ಪುನಾ ಮಳೆ ಆರ್ಭಟ ಪ್ರಾರಂಭವಾಗಿದ್ದರಿಂದ ಏನು ಮಾಡಬೇಕೆಂದು ದಿಕ್ಕು ತೋಚದಂತಾಗಿದೆ.
ಮುಂದಿನ ವರ್ಷದ ಫಸಲಿಗೆ ಹೊಡೆತ
ಕಾಫಿ ಕೊಯ್ಲು ಮಾಡಿದ ಬಳಿಕ ಮುಂದಿನ ವರ್ಷದ ಫಸಲಿಗೆ ಗಿಡಗಳನ್ನು ಸಿದ್ಧಗೊಳಿಸಲು ನೀರು ಕೊಡುವುದು ಪದ್ಧತಿ. ಅದಕ್ಕಾಗಿ ಬೆಳೆಗಾರರು ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. ಆದರೆ, ಈಗ ಸುರಿಯುತ್ತಿರುವ ಅಕಾಲಿಕ ಮಳೆ ಮುಂದಿನ ವರ್ಷದ ಕಾಫಿ ಫಸಲಿಗೆ ಹೊಡೆತ ನೀಡಲಿದೆ ಎಂದು ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಮಳೆ ಸುರಿಯುತ್ತಿರುವುದರಿಂದ ಕಾಫಿ ಹೂ ಅರಳಲು ಪ್ರಾರಂಭವಾಗುತ್ತದೆ. ತಕ್ಷಣವೇ ನೀರು ಕೊಡದಿದ್ದರೆ ಹೂ ಕಾಯಿ ಕಟ್ಟುವ ಮೊದಲೇ ಬಿಸಿಲಿನ ತಾಪಕ್ಕೆ ಒಣಗಿ ಹೋಗುವುದರಿಂದ ಮುಂದಿನ ವರ್ಷ ನಷ್ಟ ಅನುಭವಿಸಬೇಕಾಗಿದೆ. ಈಗ ಬಹುತೇಕ ರೋಬಸ್ಟಾ ಕಾಫಿ ಕೊಯ್ಲು ಆಗಿಲ್ಲ. ಈಗ ಅಕಾಲಿಕ ಮಳೆ ಸುರಿದಿದ್ದರಿಂದ ಕಾಫಿ ಉದುರುವುದರ ಜತೆಗೆ ಕಾಫಿ ಮೊಗ್ಗು ಬರುವುದರಿಂದ ಮುಂದಿನ ವರ್ಷದ ಮೊಗ್ಗು ಕೂಡ ನಾಶವಾಗುವ ಸಂಭವವಿದೆ.
ಕಾರ್ಮಿಕರ ಅಭಾವ
ಅಕಾಲಿಕ ಮಳೆ ಸುರಿದಿದ್ದರಿಂದ ಕಾರ್ಮಿಕರ ಅಭಾವ ಸೃಷ್ಟಿಯಾಗಲಿದೆ. ಇನ್ನು 15-20 ದಿನಗಳವರೆಗೆ ನಿಧಾನವಾಗಿ ಕಾಫಿ ಕೊಯ್ಲು ಮಾಡಬಹುದಿತ್ತು. ದಿಢೀರ್ ಮಳೆ ಸುರಿದಿದ್ದರಿಂದ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿದೆ. ಫಸಲು ಉಳಿಸಿಕೊಳ್ಳಬೇಕೆಂದರೆ ಮೂರ್ನಾಲ್ಕು ದಿನದಲ್ಲಿ ಕಾಫಿ ಕೊಯ್ಲು ನಡೆಸಬೇಕಾಗಿದೆ. ಹಾಗಾಗಿ ಕಾರ್ಮಿಕರಿಗೆ ಬೇಡಿಕೆ ಹೆಚ್ಚಾಗಿರುವುದರಿಂದ ಬೆಳೆಗಾರನಿಗೆ ಇದು ಕೂಡ ಸಮಸ್ಯೆಯಾಗಿ ಕಾಡಿದೆ.
ಒಂದು ವಾರ ತಡವಾಗಿ ಕಾಫಿ ಕೊಯ್ಲು ಮಾಡುವ ಯೋಜನೆಯಲ್ಲಿದ್ದೆವು. ಅಕಾಲಿಕ ಮಳೆ ಸುರಿದಿದ್ದರಿಂದ ಈಗ ತುರ್ತಾಗಿ ಕಾಫಿ ಕೊಯ್ಲು ಮಾಡಬೇಕು. ಜನ ಸಿಗುವುದು ಕಷ್ಟ. ಮೂರು-ನಾಲ್ಕು ದಿನದಲ್ಲಿ ಕಾಫಿ ಕೊಯ್ಲು ಮಾಡದಿದ್ದರೆ ಗಿಡದಲ್ಲಿ ಮೊಗ್ಗು ಬಂದು ಮುಂದಿನ ವರ್ಷದ ಫಸಲು ನಷ್ಟವಾಗುತ್ತದೆ. ಹಾಗಾಗಿ ತುರ್ತಾಗಿ ಕಾಫಿ ಕೊಯ್ಲು ಮಾಡಬೇಕಿದೆ. ಮಳೆ ಹಾಗೂ ಮೋಡದ ವಾತಾವರಣ ಇರುವುದರಿಂದ ಕಾಫಿ ಒಣಗಿಸುವುದು ಕಷ್ಟವಾಗಿದೆ.
ಕುಶಾಲ್ ರಾಜು ಕಾಫಿ ಬೆಳೆಗಾರ ಹೆತ್ತೂರು
==
ಕಳೆದ ಎರಡು ದಿನ ಸುರಿದ ಅಕಾಲಿಕ ಮಳೆಯಿಂದಾಗಿ ಕಣದಲ್ಲಿ ಒಣಗಲು ಹಾಕಿದ್ದ ಕಾಫಿ ಸಂಪೂರ್ಣವಾಗಿ ನೆನೆದಿದ್ದಲ್ಲದೆ ನೀರಿನಲ್ಲಿ ಕೊಚ್ಚಿ ಹೋಗಿದೆ. ಇನ್ನೂ ಕಾಫಿ ಹಣ್ಣು ಇರುವಾಗಲೆ ಮಳೆ ಬಂದಿದ್ದರಿಂದ ಗಿಡದಲ್ಲಿ ಹೂವು ಬಿಟ್ಟರೆ ಬೆಳೆಗಾರರನ್ನು ದೇವರೇ ಕಾಪಾಡಬೇಕು. ಈಗ ಬೆಳೆದ ಹೂವಿಗೆ ಬ್ಯಾಕ್ ಟು ಬ್ಯಾಕ್ ನೀರು ಇಲ್ಲದಿದ್ದರೆ ಒಂದು ವರ್ಷದ ಕಾಫಿ, ಬೆಳೆಗಾರರ ಕೈಗೆ ಸಿಗದಂತಾಗಿ ವರ್ಷದ ಬೆಳೆ ಕಳೆದುಕೊಳ್ಳುವುದಲ್ಲದೆ ನಷ್ಟ ಅನುಭವಿಸಬೇಕಾಗುತ್ತದೆ. ಈ ಅಕಾಲಿಕ ಮಳೆ ಬೆಳೆಗಾರರಿಗೆ ಶಾಪವಾಗಿ ಪರಿಣಮಿಸಿದೆ.
ರಮೇಶ್ ಸುವರ್ಣ ಕಾಫಿ ಬೆಳೆಗಾರ, ಬಂಡೆ ಚೀಕನಹಳ್ಳಿ ಬೇಲೂರು ತಾಲೂಕು