ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ತಾಲೂಕು ಘಟಕದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ಸ ಕವಿಗೋಷ್ಠಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಕಲಾವತಿ ಮಧುಸೂದನ್, ಆಶಾಕಿರಣ್, ಡಾ.ಶ್ರೀವತ್ಸ ಎಸ್ ವಟಿ ಇತರರು ಇದ್ದರು.  
ಹಾಸನ

ಕನ್ನಡ ಶಾಲೆ ಮುಚ್ಚುವುದು ಸರಿಯಲ್ಲ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • kannada rajyotsava
ಬೇಲೂರು: ಪ್ರಸ್ತುತ ದಿನಗಳಲ್ಲಿ ಖಾಸಗಿ ಶಾಲೆಗಳ ಹಾವಳಿಯಿಂದ ಸರ್ಕಾರ ಕನ್ನಡ ಶಾಲೆಗಳನ್ನು ಮುಚ್ಚಲು ಮುಂದಾಗುತ್ತಿರುವುದು ನಿಜಕ್ಕೂ ವಿಷಾದನೀಯ. ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಸಾಂಸ್ಕೃತಿಕ ಹಿರಿಮೆ ಎಂದು ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ಕಲಾವತಿ ಮಧುಸೂದನ್ ಹೇಳಿದರು.
ಪಟ್ಟಣದ ಶ್ರೀ ವೈಷ್ಣವ ಗೋಷ್ಠಿ ಸಭಾಂಗಣದಲ್ಲಿ ಮಂಗಳವಾರ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ತಾಲೂಕು ಘಟಕದಿಂದ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ಕವಿಗೋಷ್ಠಿ-2025 ಕಾರ್ಯಕ್ರಮದಲ್ಲಿ ಮಾತನಾಡಿದರು.
ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳಿಗೆ ವಿದ್ಯಾರ್ಥಿಗಳ ದಾಖಲಾತಿ ಕಡಿಮೆಯಾಗುತ್ತಿರುವ ನೆಪದಲ್ಲಿ ಕಡಿಮೆ ದಾಖಲಾತಿ ಇರುವ ಸರ್ಕಾರಿ ಶಾಲೆಗಳನ್ನು ಮುಚ್ಚಿ ಹತ್ತಿರದ ಸರ್ಕಾರಿ ಶಾಲೆಗಳಿಗೆ ಸಂಯೋಜನೆಗೊಳಿಸಲು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಆದರೆ ಈ ಸುತ್ತೋಲೆಯಲ್ಲಿ ವಿಲೀನ ಪದ ಬಳಸದೆ ಸಂಯೋಜನೆ ಎಂಬ ಪದವನ್ನು ಬಳಸಲಾಗಿದೆ. ಕೇವಲ ಹಾಜರಾತಿ ದಾಖಲೆಗಳನ್ನು ಪರಿಗಣಿಸಿ ಸರ್ಕಾರ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವುದು ಕನ್ನಡ ಭಾಷೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಸರ್ಕಾರ ಇಂತಹ ಕ್ರಮ ಕೈಗೊಳ್ಳುವ ಮುನ್ನ ಕನ್ನಡಪರ ಸಂಘಟನೆಗಳ ಮತ್ತು ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ ಸಂಘ, ಸಂಸ್ಥೆಗಳ ಅಭಿಪ್ರಾಯ ಪಡೆಯಬೇಕು. ಈ ನಿಟ್ಟಿನಲ್ಲಿ ರಾಜ್ಯ ಸ್ಪಂದನ ಸಿರಿ ವೇದಿಕೆ ಕನ್ನಡವನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆ ಜಿಲ್ಲಾಧ್ಯಕ್ಷೆ ಆಶಾಕಿರಣ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕನ್ನಡ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗುತ್ತಿದೆ. ಕಾರಣ ನಮ್ಮಲ್ಲಿ ಭಾಷಾಭಿಮಾನದ ಕೊರತೆ ಎದ್ದು ಕಾಣುತ್ತಿದೆ. ಆದ್ದರಿಂದ ಇಂತಹ ರಾಜ್ಯೋತ್ಸವ ಕಾರ್ಯಕ್ರಮಗಳು ಪೂರಕವಾಗಲಿದೆ. ಅಲ್ಲದೆ ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಇಂತಹ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಸಾಹಿತಿ ಡಾ.ಶ್ರೀವತ್ಸ ಎಸ್ ವಟಿ ಮಾತನಾಡಿ, ಬೇಲೂರನ್ನು ಹತ್ತಾರು ರಾಜವಂಶಸ್ಥರು ಆಳ್ವಿಕೆ ನಡೆಸಿ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಆದರೆ ಕನ್ನಡ ಭಾಷೆಗೆ ಪ್ರಥಮ ಶಿಲಾಶಾಸನ ಕೊಡುಗೆ ನೀಡಿದ ಹೆಗ್ಗಳಿಕೆ ತಾಲೂಕಿನ ಹಲ್ಮಿಡಿ ಗ್ರಾಮಕ್ಕೆ ಸೇರುತ್ತದೆ ಎಂದರು.
ವೇದಿಕೆಯ ತಾಲೂಕು ಅಧ್ಯಕ್ಷೆ ಪ್ರತಿಭಾ ಮಯ್ಯ, ತುಮಕೂರು ಅಂಗಳ ಕಮ್ಯುನಿಸ್ಟ್ ಟ್ರಸ್ಟ್ ಅಧ್ಯಕ್ಷ ವರುಣ್ ರಾಜ್, ವೈಡಿಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕ ಮಂಜುನಾಥ, ಶ್ರೀದೇವಿ, ಮಂಗಳಾ, ಸುಮಿತ್ರಾ ಸೇರಿದಂತೆ ಇತರರಿದ್ದರು.