ಪಟ್ಟಣದ ತೇಜಸ್ವಿ ವೃತ್ತ ಅಗಲೀಕರಣ ಕಾರ್ಯ ನಡೆಸಲಾಯಿತು.
ಪಟ್ಟಣದ ತೇಜಸ್ವಿ ವೃತ್ತ ವಿಸ್ತರಣೆಗಾಗಿ ಶನಿವಾರ ಪುರಸಭೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ರಸ್ತೆ ಬದಿ ಅಂಗಡಿಗಳನ್ನು ತೆರವುಗೊಳಿಸಿದರು.
ಬೇಲೂರು ಹಾಗೂ ರಾಷ್ಟ್ರೀಯ ಹೆದ್ದಾರಿ-75 ಸಮಾಗಮಗೊಳ್ಳುವ ಈ ವೃತ್ತದ ರಸ್ತೆ ಬದಿಯನ್ನು ಸುಮಾರು 50ಕ್ಕೂ ಹೆಚ್ಚು ವರ್ತಕರು ಒತ್ತುವರಿ ಮಾಡಿಕೊಂಡು ಅಂಗಡಿ ಮುಂಗಟ್ಟು ನಿರ್ಮಿಸಿಕೊಂಡಿದ್ದರು. ಪರಿಣಾಮ ಕಿರಿದಾದ ವೃತ್ತ ಸದಾ ಸಂಚಾರ ಸಿಕ್ಕು ಉಂಟಾಗುತ್ತಿತ್ತು. ಸಮಸ್ಯೆ ಗಮನಿಸಿ ಶಾಸಕ ಸಿಮೆಂಟ್ ಮಂಜು ಮನವಿಯ ಮೇರೆಗೆ ಇತ್ತೀಚೆಗೆ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ನಡೆಸಿ ಅಂಗಡಿಗಳ ತೆರವಿಗೆ ಸೂಚನೆ ನೀಡಿದರು.
ಇದರಿಂದಾಗಿ ರಸ್ತೆ ಬದಿ ಹಾಗೂ ಪುರಸಭೆ ಸೇರಿದ ನಿವೇಶನದಲ್ಲಿದ್ದ ಅಂಗಡಿಗಳನ್ನು ಜೆಸಿಬಿ ಯಂತ್ರ ಬಳಸಿ ಅಧಿಕಾರಿಗಳು ತೆರವುಗೊಳಿಸಿದರೆ ಕೆಲವು ವರ್ತಕರು ಸ್ವಯಂ ಪ್ರೇರಿತವಾಗಿ ಅಂಗಡಿಗಳನ್ನು ತೆರವುಗೊಳಿಸಿದರು.
ಪುರಸಭೆ ಖಾತೆ ಹೊಂದಿರುವ ಕೆಲವು ಅಂಗಡಿ ಮುಂಗಟ್ಟುಗಳನ್ನು ತೆರವುಗೊಳಿಸುವ ನಿಟ್ಟನಲ್ಲಿ ಸಭೆ ನಡೆಸಿ ತಿರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಮಹೇಶ್ವರಪ್ಪ ಹೇಳಿದರು.