ಎರೆಬೊರೆ ಕಾವಲು ಗ್ರಾಮದ ನಿವಾಸಿಗಳು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಆನಂದ್ ಡಿ.ಗೌಡ, ಮುರುಗೇಶ್, ಚಂದ್ರಗೌಡ, ತಿಮ್ಮಯ್ಯ, ಶಿವಕುಮಾರ್, ಜ್ಯೋತಿ ಇತರರಿದ್ದರು. 
ಹಾಸನ

ಸ್ಮಶಾನ ಜಾಗ ಒತ್ತುವರಿ ತೆರವು ಮಾಡಿ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಸ್ಮಶಾನ ಜಾಗ ಒತ್ತುವರಿ ತೆರವು ಮಾಡಿ
  • ಜಿಲ್ಲಾಡಳಿತಕ್ಕೆ ಎರೆಬೊರೆ ಕಾವಲು ಗ್ರಾಮಸ್ಥರಿಂದ ಮನವಿ

ಹಾಸನ:

ಮೃತರ ಅಂತ್ಯಸಂಸ್ಕಾರಕ್ಕಾಗಿ ಹಲವು ವರ್ಷಗಳ ಹಿಂದೆ ಮೀಸಲಿಟ್ಟಿದ್ದ ಸ್ಮಶಾನ ಜಾಗವನ್ನು ಅಕ್ರಮ ಕಲ್ಲು ಗಣಿಗಾರಿಕೆ ನಡೆಸುವವರು ಒತ್ತುವರಿ ಮಾಡಿಕೊಂಡಿದ್ದು, ತಕ್ಷಣವೇ ಜಾಗವನ್ನು ಗ್ರಾಮಸ್ಥರ ಬಳಕೆಗೆ ಮರಳಿ ತೆರವು ಮಾಡಿಕೊಡಬೇಕು ಎಂದು ಆಗ್ರಹಿಸಿ ಹಾಸನ ತಾಲೂಕಿನ ಎರೆಬೊರೆ ಕಾವಲು ಗ್ರಾಮದ ನಿವಾಸಿಗಳು ಬುಧವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಗ್ರಾಮದಲ್ಲಿ ಸುಮಾರು 80 ಕುಟುಂಬಗಳು ವಾಸಿಸುತ್ತಿದ್ದು, ಗ್ರಾಮಸ್ಥರ ಅನುಕೂಲಕ್ಕಾಗಿ ಸುಮಾರು ನಾಲ್ಕು ಎಕರೆ ಜಾಗವನ್ನು ಸ್ಮಶಾನಕ್ಕಾಗಿ ಸರ್ಕಾರ ಮೀಸಲಿಟ್ಟಿತ್ತು. ಇತ್ತೀಚಿನ ದಿನಗಳಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರು ಆ ಭೂಮಿಯನ್ನು ಅತಿಕ್ರಮಿಸಿ ಗಣಿಗಾರಿಕೆ ಚಟುವಟಿಕೆ ಆರಂಭಿಸಿದ್ದಾರೆ ಎಂದು ಗ್ರಾಮದ ಆನಂದ್ ಡಿ.ಗೌಡ ಆರೋಪಿಸಿದರು.

ಸ್ಮಶಾನಕ್ಕೆ ಮೀಸಲಾದ ಜಾಗದಲ್ಲೇ ಕಲ್ಲು ಒಡೆಯುವ ಯಂತ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಭಾರಿ ಪ್ರಮಾಣದ ಸ್ಫೋಟಕ ಬಳಸಲಾಗುತ್ತಿದೆ. ಪರಿಣಾಮ ಸುತ್ತಮುತ್ತಲಿನ ಪ್ರದೇಶದಲ್ಲಿ ಧೂಳು ವ್ಯಾಪಕವಾಗಿ ಹರಡುತ್ತಿದ್ದು, ಸ್ಫೋಟದ ವೇಳೆ ಉಂಟಾಗುವ ಶಬ್ದದಿಂದ ಗ್ರಾಮಸ್ಥರು ಆತಂಕದಲ್ಲಿದ್ದಾರೆ. ಪರಿಸರ ಮಾಲಿನ್ಯ ಹೆಚ್ಚಾಗಿದ್ದು, ವೃದ್ಧರು, ಮಕ್ಕಳು ಹಾಗೂ ಮಹಿಳೆಯರಲ್ಲಿ ಉಸಿರಾಟ ಸಂಬಂಧಿ ಸಮಸ್ಯೆ ಕಾಣಿಸಿಕೊಳ್ಳುತ್ತಿವೆ ಎಂದು ಅಲವತ್ತುಕೊಂಡರು.
ಗ್ರಾಮದಲ್ಲಿ ಯಾರಾದರೂ ಮೃತಪಟ್ಟರೆ ಅಂತ್ಯಸಂಸ್ಕಾರ ನಡೆಸಲು ಸ್ಮಶಾನ ಇಲ್ಲದ ಕಾರಣ 25 ಕಿಲೋಮೀಟರ್ ದೂರದ ಬೆಟ್ಟಗೌಡನಹಳ್ಳಿ ಗ್ರಾಮದ ಸ್ಮಶಾನಕ್ಕೆ ಮೃತದೇಹವನ್ನು ಕೊಂಡೊಯ್ಯಬೇಕಾದ ಅನಿವಾರ್ಯ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಈ ವಿಚಾರವಾಗಿ ತಾಲೂಕು ಆಡಳಿತ, ಜಿಲ್ಲಾಡಳಿತ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಸೇರಿದಂತೆ ಸಂಬಂಧಪಟ್ಟ ಹಲವು ಅಧಿಕಾರಿಗಳಿಗೆ ಅನೇಕ ಬಾರಿ ದೂರು ಸಲ್ಲಿಸಿದ್ದರೂ ಕ್ರಮ ಕೈಗೊಂಡಿಲ್ಲ. ಕೆಲ ಅಧಿಕಾರಿಗಳು ಗಣಿ ಮಾಲೀಕರೊಂದಿಗೆ ಶಾಮೀಲಾಗಿ ಸ್ಮಶಾನ ಭೂಮಿಯಲ್ಲೇ ಗಣಿಗಾರಿಕೆಗೆ ಅವಕಾಶ ಕಲ್ಪಿಸಿದ್ದಾರೆ ಎಂದು ಆರೋಪಿಸಿದರು.
ಗ್ರಾಮಸ್ಥರಾದ ಶ್ರೀನಿವಾಸ್, ಮುರುಗೇಶ್, ಚಂದ್ರಗೌಡ, ತಿಮ್ಮಯ್ಯ, ಶಿವಕುಮಾರ್, ಜ್ಯೋತಿ, ಯಶೋದಮ್ಮ, ರಾಜೇಶ್ವರಿ, ಮಂಜುಳಮ್ಮ, ಭಾಗ್ಯಮ್ಮ, ನಾಗಮ್ಮ, ಗೌರಮ್ಮ, ದೀಪಕ್, ಸಾಕಿಬಾಯಿ, ಮಳಲಿಗೌಡ, ಅನಿತಾ, ಐಶ್ವರ್ಯ ಇತರರಿದ್ದರು.