ಹಾಸನ ನಗರದ ಸಂತ ಅಂಥೋನಿಯವರ ದೇವಾಲಯದಲ್ಲಿ ಧಾರ್ಮಿಕ ಆಚರಣೆ ನಡೆಸಲಾಯಿತು.
- ಎಲ್ಲೆಡೆ ಕ್ರಿಸ್‌ಮಸ್ ಹಬ್ಬದ ಸಡಗರ
- ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ
- ವಿಶೇಷ ದೀಪಾಲಂಕಾರ, ಭಕ್ತಸಾಗರ
ಹಾಸನ: ಪ್ರತಿವರ್ಷದಂತೆ ಈ ವರ್ಷವೂ ಕ್ರಿಸ್‌ಮಸ್ ಹಬ್ಬವನ್ನು ನಗರದ ವಿವಿಧ ಚರ್ಚ್‌ಗಳಲ್ಲಿ ಭಕ್ತಿ, ಸಂಭ್ರಮದಿಂದ ಆಚರಿಸಲಾಯಿತು.
ಬುಧವಾರ ಮಧ್ಯರಾತ್ರಿಯಿಂದಲೇ ನಗರದ ವಿವಿಧ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಬಲಿಪೂಜೆ ಇತರ ಕಾರ್ಯಕ್ರಮಗಳು ಆರಂಭಗೊಂಡಿದ್ದು, ನೂರಾರು ಭಕ್ತರು ಭಾಗವಹಿಸಿ ಯೇಸು ಕ್ರಿಸ್ತನಿಗೆ ಪ್ರಾರ್ಥನೆ ಸಲ್ಲಿಸಿದರು.
ಸಂಸದ ಶ್ರೇಯಸ್ ಎಂ.ಪಟೇಲ್ ನಗರದ ವಿವಿಧ ಚರ್ಚ್‌ಗಳಿಗೆ ಭೇಟಿ ನೀಡಿ ಕ್ರಿಸ್‌ಮಸ್ ಆಚರಣೆಯಲ್ಲಿ ಪಾಲ್ಗೊಂಡು ಕ್ರೈಸ್ತ ಸಮುದಾಯದವರಿಗೆ ಹಬ್ಬದ ಶುಭಾಶಯ ತಿಳಿಸಿದರು.
ನಂತರ ಮಾತನಾಡಿದ ಅವರು, ಹಾಸನ ಜಿಲ್ಲೆಯ ಸಮಸ್ತ ಜನತೆಗೆ ಕ್ರಿಸ್‌ಮಸ್ ಹಾಗೂ ಹೊಸ ವರ್ಷದ ಶುಭಾಶಯ. ಯೇಸು ಭಗವಂತನು ಎಲ್ಲರಿಗೂ ಒಳಿತನ್ನು ಮಾಡಲಿ, ಉತ್ತಮ ಮಳೆ ಮತ್ತು ಉತ್ತಮ ಬೆಳೆ ದೊರಕಲಿ ಎಂದು ಹಾರೈಸಿದರು.
ನಗರದ ಸಂತ ಅಂಥೋನಿಯವರ ದೇವಾಲಯದ ಧರ್ಮಗುರು ಪ್ರಾಟ್ರಿಕ್ ಜಯರಾವ್ ಮಾತನಾಡಿ, ಕ್ರಿಸ್‌ಮಸ್ ಎಂದರೆ ಯೇಸು ಕ್ರಿಸ್ತನ ಜನನದ ಹಬ್ಬ. ಪ್ರತಿ ವರ್ಷ ಡಿಸೆಂಬರ್ 24ರ ಮಧ್ಯರಾತ್ರಿಯಿಂದಲೇ ಯಾವುದೇ ಮತಭೇದವಿಲ್ಲದೆ ಎಲ್ಲರೂ ಪ್ರೀತಿ ಮತ್ತು ಹರ್ಷದಿಂದ ಆಚರಿಸುವ ಹಬ್ಬವಾಗಿದೆ. ಹಲವು ದೇಶಗಳಲ್ಲಿ ಇದು ಸಾಂಸ್ಕೃತಿಕ ಹಬ್ಬವಾಗಿಯೂ ರೂಪುಗೊಂಡಿದೆ ಎಂದರು.
ಹಾಸನದ ಸಂತ ಅಂಥೋನಿಯವರ ದೇವಾಲಯದಲ್ಲಿ ರಾತ್ರಿಯಿಂದಲೇ ಭಜನೆ ಗೀತೆಗಳು ಹಾಗೂ ಆರಾಧನಾ ಕಾರ್ಯಕ್ರಮಗಳು ನಡೆದವು. ಸಾವಿರಾರು ಭಕ್ತರು ಭಾಗವಹಿಸಿದ್ದರು.
ರಾತ್ರಿ ವೇಳೆ ಪ್ರಭು ಯೇಸು ಅವರ ಆರಾಧನೆ, ಬಲಿಪೂಜೆಗಳು ಇರುತ್ತದೆ. ಹಾಸನದ ಸಂತ ಅಂಥೋನಿಯವರ ದೇವಾಲಯದಲ್ಲಿ ರಾತ್ರಿಯಿಂದಲೇ ಭಜನೆ ಗೀತೆಗಳ ಮೂಲಕ ಕಾರ್ಯಕ್ರಮ ಪ್ರಾರಂಭವಾಗಿ ಸಾವಿರಾರು ಜನರು ಇದರಲ್ಲಿ ಭಾಗವಹಿಸುತ್ತಾರೆ. ರೈತಾಪಿ ಬಂಧುಗಳಿಗೆ, ಕಾರ್ಮಿಕ ವರ್ಗದವರಿಗೆ ಹಾಗೂ ವಿಶೇಷವಾಗಿ ಸಮಸ್ತ ಜನತೆಗೆ ಸುಖ, ಶಾಂತಿ, ಸಮೃದ್ಧಿ, ನೆಮ್ಮದಿ, ಒಳ್ಳೆಯ ಮಳೆ, ಬೆಳೆ ನೀಡಲಿ. ಎಲ್ಲ ರೋಗ, ರುಜಿನದ ಸೋಂಕು ಬಾರದಂತೆ ಎಲ್ಲ ಸಂಕಷ್ಟದಿಂದ ನಮಗೆ ಸಂಪೂರ್ಣ ಬಿಡುಗಡೆಯನ್ನು ಕೊಡಲಿ. ಆ ಭಗವಂತನ ದೈವ ಪ್ರೀತಿ ಸಮಾಧಾನದ ಸಂತೃಪ್ತಿ ಬದುಕು ಪ್ರೀತಿಯ ಸಹಬಾಳ್ವೆ ಜೀವನ ಸಿಗಲಿ ಎಂದು ಪ್ರಾರ್ಥಿಸಲಾಗಿದೆ ಎಂದು ಧರ್ಮಗುರುಗಳು ಹಬ್ಬದ ಸಂದೇಶ ನೀಡಿದರು.
ಹಬ್ಬದ ಹಿನ್ನೆಲೆಯಲ್ಲಿ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಚರ್ಚ್ ಆವರಣದಲ್ಲಿ ಯೇಸು ಕ್ರಿಸ್ತನ ಜನನದ ಕಥೆಯನ್ನು ಬಿಂಬಿಸುವ ಚಿತ್ರಣ, ಗೊಂಬೆಗಳ ಮೂಲಕ ಯೇಸುವಿನ ಬಾಲ್ಯ ಜೀವನ ಹಾಗೂ ಉದ್ದೇಶಗಳನ್ನು ಪ್ರದರ್ಶಿಸಲಾಗಿತ್ತು.