ನಂ.1 ಕನ್ನಡ ದಿನ ಪತ್ರಿಕೆ ವಿಜಯವಾಣಿಯಿಂದ ಪರಿಸರ ದಿನಾಚರಣೆ ಪ್ರಯುಕ್ತ ಹಾಸನ ನಗರದ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು.
- ಪರಿಸರ ಜಾಗೃತಿಗೆ ಚಿಣ್ಣರ ಚಿತ್ತಾರ
- ಉತ್ಸಾಹದಿಂದ ಪಾಲ್ಗೊಂಡ ವಿವಿಧ ಶಾಲೆಯ ಮಕ್ಕಳು
- ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಹಾಸನ: ವಿಶ್ವ ಪರಿಸರ ದಿನದ ಅಂಗವಾಗಿ ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಯ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.
ರೋಟರಿ ಕ್ಲಬ್ ಆಫ್ ಹಾಸನ್ ರಾಯಲ್ಸ್ ಮತ್ತು ಮನುರ್ಭವ ಪ್ರತಿಷ್ಠಾನ ಚಾರಿಟಬಲ್ ಟ್ರಸ್ಟ್ ಹಾಗೂ ಚನ್ನರಾಯಪಟ್ಟಣ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಸಹಯೋಗದಲ್ಲಿ ನಗರದ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ‘ಪ್ರಕೃತಿಯಿಂದ ಸ್ಫೂರ್ತಿ ಪಡೆಯೋಣ, ಹವಾಮಾನ ಸಂರಕ್ಷಣೆಗಾಗಿ, ನಮ್ಮೆಲ್ಲರ ಭವಿಷ್ಯಕ್ಕಾಗಿ’ ಶೀರ್ಷಿಕೆಯಡಿ ವಿದ್ಯಾರ್ಥಿಗಳು ಚಿತ್ರ ಬಿಡಿಸಿ ಗಮನ ಸೆಳೆದರು.
5ರಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಜೂನಿಯರ್ ವಿಭಾಗ ಹಾಗೂ 8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸೀನಿಯರ್ ವಿಭಾಗ ಎಂದು ವಿಂಗಡಿಸಲಾಗಿತ್ತು. ಸ್ಪರ್ಧೆಯಲ್ಲಿ ನೂರಾರು ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಪರಿಸರ ಕಾಳಜಿ ಸಾರುವ ಅರ್ಥಪೂರ್ಣ ಚಿತ್ರಗಳನ್ನು ರಚಿಸಿದರು. ಎರಡು ವಿಭಾಗದ ವಿಜೇತರಿಗೆ ನಗದು ಬಹುಮಾನ ಹಾಗೂ ಪಾಲ್ಗೊಂಡ ಎಲ್ಲ ಮಕ್ಕಳಿಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ವಿದ್ಯಾಸೌಧ ಶಾಲೆಯ ಚಿತ್ರಕಲಾ ಶಿಕ್ಷಕ ಶಿವಕುಮಾರ್ ಹಾಗೂ ಚಿತ್ರಕಲಾ ಶಿಕ್ಷಕಿ ಲತಾ ತೀರ್ಪು ನೀಡಿದರು.
ಪ್ರತಿಭೆ ಹೊರ ಹೊಮ್ಮಲು ಪ್ರೋತ್ಸಾಹಿಸಲಿ
ಮಕ್ಕಳು ವಿದ್ಯಾಭ್ಯಾಸದ ಜತೆಗೆ ಸಾಕಷ್ಟು ವಿಷಯಗಳ ಬಗ್ಗೆ ಕಲಿಯಬೇಕು. ಕೇವಲ ಅಂಕಗಳನ್ನು ಪಡೆಯಲು ಪಾಲಕರು ಪ್ರೋತ್ಸಾಹಿಸದೆ, ಬಹುಮುಖ ಪ್ರತಿಭೆಯಾಗಿ ಹೊರಹೊಮ್ಮಲು ಬೆಂಬಲ ನೀಡಬೇಕು ಎಂದು ಚನ್ನರಾಯಪಟ್ಟಣ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಹೇಳಿದರು.
ಮಕ್ಕಳ ಪ್ರತಿಭೆ ಹೊರ ಹೊಮ್ಮಲು ಇಂತಹ ಕಾರ್ಯಕ್ರಮ ಸಹಕಾರಿ. ಈ ನಿಟ್ಟಿನಲ್ಲಿ ವಿಜಯವಾಣಿ ದಿನಪತ್ರಿಕೆ ಮಕ್ಕಳಿಗೆ ಅವಕಾಶ ಕಲ್ಪಿಸಿದೆ. ಪಾಲಕರಿಂದ ಮಕ್ಕಳಿಗೆ ಅವರ ಆಸಕ್ತಿ ವಿಷಯದಲ್ಲಿ ಅವಕಾಶ ಕಲ್ಪಿಸುವ ಕೆಲಸ ಆಗಬೇಕು ಎಂದರು.
ಹುಟ್ಟು- ಸಾವಿನ ನಡುವೆ ಮನುಷ್ಯ ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು. ಪಾಲಕರು ಮಕ್ಕಳಿಗೆ ಕೇವಲ ಅಂಕ ಗಳಿಕೆಗೆ ಒತ್ತು ನೀಡದೆ ಸಮಾಜಮುಖಿ ಕೆಲಸಕ್ಕೂ ಒತ್ತು ನೀಡಬೇಕು ಎಂದರು.
ಇಂದಿನ ಮಕ್ಕಳು ನೂರಕ್ಕೆ ನೂರು ಅಂಕ ಗಳಿಸುತ್ತಾರೆ. ಆದರೆ ಸಂಸ್ಕಾರದಿಂದ ದೂರ ಉಳಿದಿದ್ದಾರೆ. ಯುವ ಪೀಳಿಗೆ ದಿಕ್ಕು ತಪ್ಪುತ್ತಿದೆ. ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಎಲ್ಲರೂ ಎಚ್ಚರ ವಹಿಸಬೇಕು ಎಂದರು.
ಮನುಷ್ಯನ ದುರಾಸೆಯೇ ಪ್ರಕೃತಿಯ ನಾಶಕ್ಕೆ ಕಾರಣವಾಗಿದೆ. ಸಮಾಜಕ್ಕೆ ಉಪಯೋಗವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಮಕ್ಕಳಿಗೆ ಸಂಸ್ಕಾರ ನೀಡುವ ನಿಟ್ಟಿನಲ್ಲಿ ಪಾಲಕರು ಕೆಲಸ ನಿರ್ವಹಿಸಬೇಕು ಎಂದರು.
ಯುವ ಪೀಳಿಗೆ ಸಾಮಾಜಿಕ ಜಾಲತಾಣ ಇನ್ನಿತರ ಕಾರಣಗಳಿಂದ ದಿಕ್ಕು ತಪ್ಪುತ್ತಿದೆ. ಮಾದಕ ವಸ್ತುಗಳಿಂದ ದೂರ ಉಳಿದು ಸಮಾಜಕ್ಕೆ ಒಳ್ಳೆಯ ವ್ಯಕ್ತಿತ್ವವಾಗಿ ರೂಪುಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಮನುರ್ಭವ ಪ್ರತಿಷ್ಠಾನ ಟ್ರಸ್ಟ್‌ನ ರಾಘವೇಂದ್ರ ಮಾತನಾಡಿ, ಮಕ್ಕಳಿಗೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲು ಇದು ಸ್ಫೂರ್ತಿಯಾಗಿದೆ. ಮಕ್ಕಳು ಹಂತ-ಹಂತವಾಗಿ ಬೆಳೆಯಲು ಇಂತಹ ಕಾರ್ಯಕ್ರಮಗಳು ವೇದಿಕೆಯಾಗಿವೆ. ಪರಿಸರ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.
ವಿದ್ಯಾಸೌಧ ಶಾಲೆಯ ಚಿತ್ರಕಲಾ ಶಿಕ್ಷಕ ಶಿವಕುಮಾರ್ ಮಾತನಾಡಿ, ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಆಯೋಜನೆಗೊಂಡಿದೆ. ಸೋಲು, ಗೆಲುವಿನ ಬಗ್ಗೆ ಯೋಚಿಸಿದೆ ಮಕ್ಕಳು ಭಾಗವಹಿಸುವುದು ಮುಖ್ಯ ಎಂದರು.
ಜೂನಿಯರ್ ವಿಭಾಗದಲ್ಲಿ ವಿದ್ಯಾಸೌಧ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಎಚ್.ಎಸ್.ಲೀಮಾ ಗೌಡ ಪ್ರಥಮ, ವಿದ್ಯಾಸೌಧ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಮನ್ವಿತಾ ಬಿ.ಜೆ.ಗೌಡ ದ್ವಿತೀಯ ಹಾಗೂ ಕ್ರೈಸ್ಟ್ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಭವೀಶ್ ತೃತೀಯ ಬಹುಮಾತ ನಡೆದರು.
ಸೀನಿಯರ್ ವಿಭಾಗದಲ್ಲಿ ಕ್ರೈಸ್ಟ್ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಪ್ರಥಮ, ರಾಯಲ್ ಅಪೋಲಾ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಪುನರ್ವಾ ಕಾರ್ಲೆ ದ್ವಿತೀಯ ಹಾಗೂ ಆಲೂರು ಜಿಜೆಸಿ ಶಾಲೆಯ 10 ನೇ ತರಗತಿ ವಿದ್ಯಾರ್ಥಿ ಮೋಹಿತ್‌ಗೌಡ ತೃತೀಯ ಬಹುಮಾನ ಪಡೆದುಕೊಂಡರು. ವಿಜೇತರಿಗೆ ಆಕರ್ಷಕ ನಗದು ಬಹುಮಾನ ಹಾಗೂ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.
ಮಕ್ಕಳಲ್ಲಿ ಚಿಕ್ಕದರಿಂದಲೇ ಪರಿಷರ ರಕ್ಷಣೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇಂತಹ ಸ್ಪರ್ಧೆ, ಕಾರ್ಯಕ್ರಮಗಳು ಮಕ್ಕಳ ಪ್ರತಿಭೆ ಅನಾವರಣಕ್ಕೆ ವೇದಿಕೆಯಾಗುತ್ತದೆ. ಮಕ್ಕಳ ಭವಿಷ್ಯ ರೂಪುಗೊಳ್ಳಲು ಕಲಿಕೆಯ ಜತೆಗೆ ಇಂತಹ ಕಾರ್ಯಕ್ರಮಗಳು ಕೂಡ ಸಹಕಾರಿಯಾಗುತ್ತದೆ. ಮುಂದಿನ ದಿನಗಳಲ್ಲಿ ವಿಜಯವಾಣಿಯಿಂದ ಇಂತಹ ಹೆಚ್ಚಿನ ಕಾರ್ಯಕ್ರಮಗಳು ಮೂಡಿ ಬರಲಿ.
ಅಧ್ಯಕ್ಷ ರೋಟರಿ ಕ್ಲಬ್ ಆಫ್ ಹಾಸನ್