ಹಿರಿಸಾವೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠಶಾಲೆ ಆವರಣದಲ್ಲಿ ಮಕ್ಕಳ ಸಂತೆ ಕಾರ್ಯಕ್ರಮ ಆಯೋಜಿಸಲಾಗಿತ್ತು. 
ಹಾಸನ

ಜ್ಞಾನ ವೃದ್ಧಿಗೆ ಮಕ್ಕಳ ಸಂತೆ ಸಹಕಾರಿ

ನಾಗೇಶ ಎಸ್
ಹಿರೀಸಾವೆ: ವ್ಯವಹಾರಿಕ ಜ್ಞಾನ ಬೆಳೆಯಲು ಮಕ್ಕಳ ಸಂತೆಯಂತಹ ಕಾರ್ಯಕ್ರಮಗಳು ಹೆಚ್ಚು ಸಹಕಾರಿ ಎಂದು ಹಿರೀಸಾವೆ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಮೋದ್ ಹೇಳಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಪಾಠ ಶಾಲೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲಾ ಶಿಕ್ಷಣವು ಪಠ್ಯಪುಸ್ತಕಗಳಿಗೆ ಸೀಮತವಾಗದೆ ಜೀವನದ ಕೌಶಲಗಳನ್ನು ಕಲಿಸುವಂತಾಗಬೇಕು. ಕೇವಲ ಉನ್ನತ ಹುದ್ದೆಗಳಿಗಾಗಿ ಶಿಕ್ಷಣ ಪಡೆಯಬಾರದು. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಸಲುವಾಗಿ ವಿದ್ಯೆಯನ್ನು ದೀಕ್ಷೆಯಾಗಿ ಸ್ವೀಕರಿಸಬೇಕು. ನಂತರದಲ್ಲಿ ಎಲ್ಲವೂ ತಾನಾಗಿಯೇ ಸಿಗಲಿದೆ. ಮೊದಲು ಸಂತೆಗೆ ಹೋಗುವಾಗ ಕೈಚೀಲವನ್ನು ತೆಗೆದುಕೊಂಡು ಹೋಗುತ್ತಿದ್ದೆವು. ಆದರೆ ಈಗ ಪ್ಲಾಸ್ಟಿಕ್ ಕವರ್ ಬಳಕೆಯಾಗಿದೆ. ಇದಕ್ಕೆ ಕಡಿವಾಣ ಹಾಕಿ, ಕೈಚೀಲ ಬಳಕೆ ಮಾಡಿ ಎಂದು ಹೇಳಿದರು.
ಸಹ ಶಿಕ್ಷಕ ಹಿರಿಯಣ್ಣ ಮಾತನಾಡಿ, ಶೈಕ್ಷಣಿಕವಾಗಿ ಮೌಲ್ಯಯುತ ಶಿಕ್ಷಣದ ಜತೆಗೆ ಜೀವನವನ್ನು ಕಟ್ಟಿಕೊಳ್ಳಲು ತೂಕ ಮತ್ತು ಅಳತೆಯ ಜ್ಞಾನದಿಂದ ಮಕ್ಕಳಲ್ಲಿ ಅರಿವು ಮೂಡುತ್ತದೆ ಎಂದರು.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹೇಶ್ ಅವರು ಹುಟ್ಟುಹಬ್ಬದ ಪ್ರಯುಕ್ತ 5 ಗ್ರೀನ್ ಬೋರ್ಡ್‌ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಗ್ರಾಪಂ ಅಧ್ಯಕ್ಷ ಪರಮೇಶ್ ಕಸ್ತೂರಪ್ಪ, ಪ್ರಮುಖರಾದ ವೆಂಕಟೇಶ್, ರವಿಕುಮಾರ್ ಹಿರಿಯಣ್ಣ ಇತರರು ಇದ್ದರು.