ಹಿರೀಸಾವೆ ಜ್ಞಾನಪ್ರಭ ಇಂಟರ್ ನ್ಯಾಷನಲ್ ಸ್ಕೂಲ್‌ನಿಂದ ಶನಿವಾರ ಮಕ್ಕಳ ಸಂತೆ ಆಯೋಜಿಸಲಾಗಿತ್ತು.
- ಜ್ಞ್ಞಾನಪ್ರಭ ಇಂಟರ್‌ನ್ಯಾಷನಲ್ ಶಾಲೆ ಅಧ್ಯಕ್ಷ ಎ.ಜಿ.ಪ್ರಭಾಕರ್ ಅಭಿಮತ
ಹಿರೀಸಾವೆ: ಮಕ್ಕಳಲ್ಲಿ ವ್ಯವಹಾರಿಕ ಜ್ಞಾನ ಬೆಳೆಯಲು ಮಕ್ಕಳ ಸಂತೆಯಂತಹ ಕಾರ್ಯಕ್ರಮಗಳು ಹೆಚ್ಚು ಸಹಕಾರಿಯಾಗಲಿವೆ ಎಂದು ಜ್ಞಾನಪ್ರಭ ಇಂಟರ್‌ನ್ಯಾಷನಲ್ ಶಾಲೆ ಅಧ್ಯಕ್ಷ ಎ.ಜಿ.ಪ್ರಭಾಕರ್ ಹೇಳಿದರು.
ಇಲ್ಲಿನ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಭವಿಷ್ಯದಲ್ಲಿ ಬದುಕನ್ನು ಸುಂದರ ಹಾಗೂ ಸುಭದ್ರವಾಗಿ ಕಟ್ಟಿಕೊಳ್ಳಲು ಶಿಕ್ಷಣದ ಜೊತೆಗೆ ವ್ಯವಹಾರಿಕ ಜ್ಞಾನ ಅಗತ್ಯ ಎಂದರು.
ಸರ್ಕಾರಿ ಹಾಗೂ ಖಾಸಗಿಯಾಗಿ ಉನ್ನತ ಹುದ್ದೆಗಳನ್ನು ಅರಸಿ ಶಿಕ್ಷಣ ಪಡೆಯಬಾರದು. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಸಲುವಾಗಿ ವಿದ್ಯೆಯನ್ನು ದೀಕ್ಷೆಯಾಗಿ ಸ್ವೀಕರಿಸಬೇಕು. ನಂತರದಲ್ಲಿ ಎಲ್ಲವೂ ತಾನಾಗಿಯೇ ಸಿಗಲಿದೆ ಎಂದು ತಿಳಿಸಿದರು.
ಮಕ್ಕಳ ಸಂತೆಯಲ್ಲಿ ಹಣ್ಣು-ತರಕಾರಿಗಳು, ಸೊಪ್ಪು, ಜ್ಯೂಸ್, ಐಸ್‌ಕ್ರೀಮ್, ಪಾನಿಪುರಿ, ಗೋಬಿ, ಕಾಫಿ, ಟೀ ಮತ್ತು ಬಾದಾಮಿ ಹಾಲು, ಸ್ಲಿಪ್ಪರ್, ಮನೆ ಬಳಕೆ ವಸ್ತುಗಳು ಹಾಗೂ ಉತ್ತರ ಕರ್ನಾಟಕ ಶೈಲಿಯ ಉಪಾಹಾರ ಹಾಗೂ ಊಟ ಸೇರಿದಂತೆ ವಿವಿಧ ವ್ಯಾಪಾರಗಳಲ್ಲಿ ವಿದ್ಯಾರ್ಥಿಗಳು ಉತ್ಸುಕರಾಗಿ ಪಾಲ್ಗೊಂಡಿದ್ದರು. ಗ್ರಾಹಕರು ವ್ಯಾಪಾರ ಮಾಡುವ ಮೂಲಕ ಮಕ್ಕಳಿಗೆ ಪ್ರೋತ್ಸಾಹ ನೀಡಿದರು.
ಸಂಸ್ಥೆ ಅಧ್ಯಕ್ಷ ಎ.ಜಿ.ಪ್ರಭಾಕರ್, ಕಾರ್ಯದರ್ಶಿ ಎಂ.ಕೆ.ಹರೀಶ್, ಪ್ರಾಂಶುಪಾಲ ಬಿ.ಸಂಜಯ್ ಕ್ರಿಸ್ಟೋಫರ್, ಪ್ರಮುಖರಾದ ಜೆಸಿಬಿ ರಾಮು ಇತರರು ಇದ್ದರು.