ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಕ್ಕಳ ಸುರಕ್ಷತೆ ಕುರಿತು ನಡೆದ ಸಭೆಯಲ್ಲಿ ಡಿಸಿ ಲತಾ ಕುಮಾರಿ ಮಾತನಾಡಿದರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಲರಾಂ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ದಿಲೀಪ್ ಇತರರಿದ್ದರು.
- ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ
- ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲತಾಕುಮಾರಿ ಸೂಚನೆ
ಹಾಸನ: ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಲತಾ ಕುಮಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಮಕ್ಕಳ ಸುರಕ್ಷತೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳ ಸುರಕ್ಷತೆಯಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿದೆ. ಈ ನಿಟ್ಟಿನಲ್ಲಿ, ಜಿಲ್ಲೆಯ ಎಲ್ಲ ಶಾಲೆಗಳಲ್ಲಿ ಪಾಲಕರು, ಶಿಕ್ಷಕರು ಹಾಗೂ ಮಕ್ಕಳಿಗೆ ಅರಿವು ಮೂಡಿಸುವ ಮೂಲಕ ಬಲಪಡಿಸಬೇಕು. ಮಕ್ಕಳ ಸುರಕ್ಷತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ತಿಳಿಸಿದರು.
ಎಲ್ಲ ಶಾಲೆಗಳಲ್ಲಿ ಆಪ್ತ ಸಮಾಲೋಚನಾ ಕೇಂದ್ರ ಕಡ್ಡಾಯವಾಗಿ ಇರಬೇಕು. ಮಕ್ಕಳು ಯಾವುದೇ ವಿಷಯವನ್ನು ಮುಚ್ಚಿಡದೆ ನಿರ್ಭಿತಿಯಿಂದ ಹೇಳಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಲು ತಿಳಿವಳಿಕೆ ನೀಡಬೇಕು ಎಂದರು.
ಹೆಣ್ಣು ಮಕ್ಕಳ ಸ್ವಯಂ ಸುರಕ್ಷತೆಗೆ ಕರಾಟೆ ತರಬೇತಿ ನೀಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸಿ ಅವರಲ್ಲಿ ಆಗಿರುವ ಬದಲಾವಣೆ ಪತ್ತೆ ಹಚ್ಚಿ ಆಪ್ತ ಸಮಾಲೋಚನೆ ನಡೆಸಿ ತಿಳಿಹೇಳಬೇಕು. ಋತುಚಕ್ರದ ಬಗ್ಗೆ ಗಂಡು, ಹೆಣ್ಣು ಮಕ್ಕಳಿಬ್ಬರಿಗೂ ತಿಳುವಳಿಕೆ ನೀಡಬೇಕು. ಋತುಚಕ್ರದ ಸಮಯದಲ್ಲಿ ಹೆಣ್ಣು ಮಕ್ಕಳು ವೈಯಕ್ತಿಕ ಸ್ವಚ್ಛತೆ ಬಗ್ಗೆ ಗಮನಹರಿಸಲು ಮನವರಿಕೆ ಮಾಡಿಕೊಡಬೇಕು ಎಂದರು.
ಯಾವುದೇ ಸಮಸ್ಯೆಗೆ ಸಿಲುಕಿದಾಗ ಮಕ್ಕಳ ಸಹಾಯವಾಣಿ ಸಂಖ್ಯೆ 1098ಗೆ ಕರೆ ಮಾಡುವಂತೆ ಮಕ್ಕಳಲ್ಲಿ ಜಾಗೃತಿ ಮೂಡಿಸಿ ಮಾನಸಿಕವಾಗಿ ಸದೃಢಗೊಳಿಸಿ. ಮಕ್ಕಳ ಸುರಕ್ಷತೆಯನ್ನು ಶಿಕ್ಷಕರು ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಎಲ್ಲ ಶಾಲೆಗಳ ವಾಹನ ಚಾಲಕರ ಪಟ್ಟಿ ತಯಾರಿಸಬೇಕು. ಅಜಾಗರೂಕತೆಯಿಂದ ವಾಹನ ಚಾಲನೆ ಮಾಡುವವರ ಬಗ್ಗೆ ನಿಗಾವಹಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ದೃಢೀಕರಿಸಬೇಕು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಇದನ್ನು ಪರಿಶೀಲಿಸಿದ ನಂತರ ಚಾಲಕರ ನೇಮಕಾತಿಗೆ ಅನುಮತಿ ನೀಡುವಂತೆ ನಿರ್ದೇಶನ ನೀಡಿದರು.
ಬಾಲ್ಯ ವಿವಾಹ, ಪೋಕ್ಸೋ, ಬಾಲ ಗರ್ಭಿಣಿ, ಮಕ್ಕಳ ಸುರಕ್ಷತೆ ಕುರಿತು ಸಂಪನ್ಮೂಲ ವ್ಯಕ್ತಿಗಳ ಮೂಲಕ ಅರಿವು ಮೂಡಿಸಲು ತಾಲೂಕುವಾರು ಕ್ರಮ ವಹಿಸಬೇಕು. ಶಾಲೆಗಳಲ್ಲಿ ಸಿ.ಸಿ.ಟಿ.ವಿ., ಶಾಲಾ ವಾಹನಗಳಿಗೆ ಜಿಪಿಎಸ್ ಕಡ್ಡಾಯವಾಗಿ ಅಳವಡಿಸಬೇಕು ಎಂದರು. ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಲರಾಂ, ಜಿಲ್ಲಾ ಮಕ್ಕಳ ಸಂರಕ್ಷಣಾಧಿಕಾರಿ ದಿಲೀಪ್ ಇತರರಿದ್ದರು.