ಶ್ರೀ ದೇವಿರಮ್ಮ ದೇವಿಗೆ ಜಾತ್ರಾ ಮಹೋತ್ಸವ ಅಂಗವಾಗಿ ವಿಶೇಷ ಅಲಂಕಾರ ಮಾಡಲಾಗಿತ್ತು.
ಆಲೂರು: ಚಿ.ಹೊಸಹಳ್ಳಿ ಗ್ರಾಮದೇವತೆ ಶ್ರೀದೇವಿರಮ್ಮನವರ ಜಾತ್ರೆ, ಕೊಂಡೋತ್ಸವ, ಸಿಡಿ ಮಹೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
ತಾಲೂಕಿನ ಪಾಳ್ಯ ಹೋಬಳಿಯ ಚಿ.ಹೊಸಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ದೇವಿರಮ್ಮನವರ ಮಹೋತ್ಸವದ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಶುಕ್ರವಾರ ದೇವಿರಮ್ಮನ ಸಹೋದರಿಯರಾದ ಚಿಕ್ಕಮ್ಮ ಹಾಗೂ ಹರಿಕತಮ್ಮ ಹಾಗೂ ಶ್ರೀ ದೇವಿರಮ್ಮನ ದೇವಿಯ ಅಡ್ಡೆಯನ್ನು ಯಗಚಿ ನದಿ ದಡಕ್ಕೆ ಕರೆದೊಯ್ದು ದೇವಿರಮ್ಮ ಹಾಗೂ ಚೋಮ ದೇವರಿಗೆ ಗಂಗಾಭಿಷೇಕ ಮಾಡಿ ಪೂಜೆ ಸಲ್ಲಿಸಿದ ನಂತರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಯಿತು.
ರುದ್ರಾಭಿಷೇಕ, ಲಲಿತಾ ಸಹಸ್ರನಾಮ ಅರ್ಚನೆ, ಮಹಾ ನೈವೇದ್ಯ, ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಂತರ ರಾತ್ರಿ ಉತ್ಸವ ದೇವರಿಗೆ ಗಂಗಾಸ್ನಾನದಲ್ಲಿ ಅಭಿಷೇಕ ಮತ್ತು ಪೂಜೆ, ವೀರಗಾಸೆ ನೃತ್ಯ, ಭಕ್ತರಿಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಶನಿವಾರ ಸೊರ್ಯೋದಯಕ್ಕೆ ಸರಿಯಾಗಿ ಕೊಂಡೋತ್ಸವ ನಂತರ ಪ್ರಸಾದ ವಿನಿಯೋಗ ನೆರವೇರಿಸಿ, ಮಧ್ಯಾಹ್ನ 2 ಗಂಟೆ ಮಹಾಮಂಗಳಾರತಿ ನಂತರ ಸಿಡಿ ಮಹೋತ್ಸವ ಯಶಸ್ವಿಯಾಗಿ ನೆರವೇರಿತು. ಯಾವುದೇ ಹಿತಕರ ಘಟನೆ ನಡೆಯದಂತೆ ಆಲೂರು ಪೊಲೀಸ್ ಠಾಣೆ ವತಿಯಿಂದ ಬಿಗಿ ಬಂದೊಬಸ್ತ್ ಏರ್ಪಡಿಸಲಾಗಿತ್ತು.