ಆಲೂರು ಕಸಾಪ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಚೆನ್ನಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕೆ.ಎಸ್.ಮಂಜೇಗೌಡ, ಬಿ.ಸಿ ಶಂಕರಾಚಾರ್, ಕದಾಳು ಲೋಕೇಶ್, ರಾಜಪ್ಪಗೌಡ ಇತರರು ಇದ್ದರು.  
ಹಾಸನ

ಚೆನ್ಮಮ್ಮರ ಸರಳತೆ ಅನುಕರಣೀಯ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಹೇಳಿಕೆ
  • ಶ್ರದ್ಧಾಂಜಲಿ ಸಭೆ
ಆಲೂರು: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ರಾಜಕೀಯ ಏಳುಬೀಳುಗಳ ಸುದೀರ್ಘ ಪಯಣದಲ್ಲಿ ಆದರ್ಶ ಗೃಹಿಣಿಯಾಗಿ ಸಾಥ್ ನೀಡಿದ್ದ ಚೆನ್ನಮ್ಮ ಅವರ ಸರಳತೆಯನ್ನು ಪ್ರಸ್ತುತ ದಿನಗಳಲ್ಲಿ ನಾವೆಲ್ಲ ಅನುಸರಿಸಬೇಕಾದ ಅವಶ್ಯಕತೆ ಇದೆ ಎಂದು ಮಾಜಿ ಸಚಿವ ಎಚ್.ಕೆ.ಕುಮಾರಸ್ವಾಮಿ ಸ್ಮರಿಸಿದರು.
ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡರ ನೇತೃತ್ವದಲ್ಲಿ ದಿ. ಚೆನ್ನಮ್ಮ ಅವರಿಗೆ ತಾಲೂಕಿನ ಜೆಡಿಎಸ್ ಮುಖಂಡರು, ಬೆಂಬಲಿಗರ ಮತ್ತು ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘ, ಸಂಸ್ಥೆಗಳ ಮುಖಂಡರ ಸಹಯೋಗದಲ್ಲಿ ಪಕ್ಷಾತೀತವಾಗಿ ಗುರುವಾರ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಸಂತಾಪ ಸೂಚಿಸಿ ಮಾತನಾಡಿದರು.
ಸರಳತೆ, ಸಂಸ್ಕಾರ ಮತ್ತು ಕುಟುಂಬ ಮೌಲ್ಯಗಳ ಸಾಕಾರ ಮೂರ್ತಿಗಳಾಗಿದ್ದ ಚೆನ್ನಮ್ಮ ಅವರ ಅಗಲಿಕೆಯಿಂದ ದೇವೇಗೌಡರ ದೊಡ್ಡ ಕುಟುಂಬ ಮಾತ್ರವಲ್ಲ, ಜೆಡಿಎಸ್ ಕಾರ್ಯಕರ್ತರೂ ಕೂಡ ಮಾತೃಛಾಯೆಯನ್ನು ಕಳೆದುಕೊಂಡಂತಾಗಿದೆ ಎಂದರು.
ಬೆಂಗಳೂರಿನಿಂದ ಹೊರಟ ಅವರ ಪಾರ್ಥಿವ ಶರೀರದ ಅಂತಿಮಯಾತ್ರೆಯು ಹೊಳೆನರಸೀಪುರ ತಲುಪಲು ಸುಮಾರು 17 ಗಂಟೆಗಳ ಕಾಲ ಸಮಯ ತೆಗೆದುಕೊಂಡಿತ್ತು ಎಂದರೆ ಅಂತಿಮ ದರ್ಶನ ಪಡೆಯಲು ಆ ದಾರಿಯುದಕ್ಕೂ ಕಾದು ಕುಳಿತ ಜನಸಮೂಹವನ್ನು ನೋಡಿದರೆ ಚೆನ್ನಮ್ಮ ಅವರು ಎಷ್ಟರಮಟ್ಟಿಗೆ ಜನಾನುರಾಗಿಯಾಗಿದ್ದರು ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಎಚ್.ಕೆ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ತಾಲೂಕು ಜೆಡಿಎಸ್ ಅಧ್ಯಕ್ಷ ಕೆ.ಎಸ್.ಮಂಜೇಗೌಡ ಮಾತನಾಡಿ, ಪತಿ ಹಾಗೂ ಮಕ್ಕಳ ಯಾವುದೇ ರಾಜಕೀಯ ವಿಷಯಗಳಲ್ಲಿ ಮೂಗು ತೂರಿಸದೆ ಕುಟುಂಬ ಮತ್ತು ಮಕ್ಕಳ ಏಳಿಗೆಗೆ ಶ್ರಮಿಸುತ್ತ ಇತರ ರಾಜಕಾರಣಿಗಳ ಪತ್ನಿಯರಿಗೆ ಚೆನ್ಮಮ್ಮ ಆದರ್ಶರಾಗಿದ್ದರು. ಆಲೂರು ತಾಲೂಕಿನ ಬಗ್ಗೆ ವಿಶೇಷವಾದ ಆಸಕ್ತಿ ಹೊಂದಿದ್ದ ಅವರು, ತಾಲೂಕಿನ ಅಭಿವೃದ್ಧಿಯ ವಿಚಾರವಾಗಿ ತಾಲೂಕಿನ ನಾಯಕರ ಜತೆ ಪ್ರಸ್ತಾಪ ಮಾಡುತ್ತಿದ್ದರು ಎಂದು ಸ್ಮರಿಸಿದರು.
ಜಿಲ್ಲಾ ಹಿಂದುಳಿದ ವರ್ಗಗಳ ಮುಖಂಡ ಬಿ.ಸಿ ಶಂಕರಾಚಾರ್,ಬಿಜೆಪಿ ಜಿಲ್ಲಾ ಮಾಜಿ ಉಪಾಧ್ಯಕ್ಷ ಕದಾಳು ಲೋಕೇಶ್, ಹಾಸನ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷ ರಾಜಪ್ಪಗೌಡ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಕೆ.ಎನ್. ಕಾಂತರಾಜು, ಮಾಜಿ ಸದಸ್ಯ ನಟರಾಜು ನಾಕಲಗೂಡು, ಬಿಜೆಪಿ ತಾಲೂಕು ಮಾಜಿ ಪ್ರಧಾನ ಕಾರ್ಯದರ್ಶಿ ಹೇಮಂತ್ ಕುಮಾರ್, ಹಾಸನ ಹಾಲು ಒಕ್ಕೂಟ ನಿರ್ದೇಶಕ ಪಿ.ಎಲ್ ಲಿಂಗರಾಜು, ಹಾಸನ ಸಹಕಾರ ಯೂನಿಯನ್ ಅಧ್ಯಕ್ಷ ಎನ್. ಪ್ರಕಾಶ್, ಕರವೇ ಜಿಲ್ಲಾ ಕಾರ್ಯದರ್ಶಿ ರಘು ಪಾಳ್ಯ, ರೈತ ಸಂಘಟನೆಗಳ ಒಕ್ಕೂಟದ ಹಾಸನ ಜಿಲ್ಲಾಧ್ಯಕ್ಷ ಧರ್ಮರಾಜ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿ ಚೆನ್ನಮ್ಮ ಅವರ ಆದರ್ಶಗಳನ್ನು ಸ್ಮರಿಸಿಕೊಂಡರು.
ತಾ.ಪಂ ಮಾಜಿ ಸದಸ್ಯ ಸಿ.ವಿ ಲಿಂಗರಾಜು, ಸಹಕಾರ ಸಂಘದ ಅಧ್ಯಕ್ಷ ಹೋತನಹಳ್ಳಿಪುರ ಮಂಜೇಗೌಡ, ಮುಖಂಡ ರಾಜೇಗೌಡ, ಬೈರಾಪುರ ಗ್ರಾಪಂ ಮಾಜಿ ಉಪಾಧ್ಯಕ್ಷ ದೊರೆಸ್ವಾಮಿ, ಎಚ್.ವಿ. ನಂದಿಶ್, ಮಾಜಿ ಸದಸ್ಯ ಮಲ್ಲೇಶ್, ಕೆ.ವಿ.ಮಲ್ಲಿಕಾರ್ಜುನ, ಸದಾನಂದ್, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಜಯಪಾಲ್, ನಾಗರಾಜು, ನಂದೀಶ ಸುಳಗೋಡು, ದಲಿತ ಮುಖಂಡರಆದ ಅರಸಪ್ಪ,ಬಸವರಾಜು ಗೇಕರವಳ್ಳಿ, ಚಂದ್ರು, ಅಶೋಕ್, ಕೋಮಲೇಶ್, ಸಹಕಾರ ಸಂಘದ ಮಾಜಿ ಅಧ್ಯಕ್ಷ ಯೋಗೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.