ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿ, ಮಾವಿನಕೆರೆ ರೈಲು ನಿಲ್ದಾಣಗಳ ಅಭಿವೃದ್ಧಿ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಾಗೂ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಅವರು ರೈಲ್ವೆ ಸಚಿವ ಅಶ್ವಿನ್ ವೈಷ್ಣವ ಅವರ ಜತೆ ಚರ್ಚೆ ನಡೆಸಿದರು. 
ಹಾಸನ

ಹಾಸನ ಮೆಗಾ ಡೇರಿಗೆ 150 ಕೋಟಿ ರೂ. ಸಾಲ ನೀಡಲು ಕೇಂದ್ರ ಸರ್ಕಾರ ಸಮ್ಮತಿ

ಪ್ರಮುಖ ಮುಖ್ಯಾಂಶಗಳು

  • ಹಾಸನ ಮೆಗಾ ಡೇರಿಗೆ 150 ಕೋಟಿ ರೂ. ಸಾಲ ನೀಡಲು ಕೇಂದ್ರ ಸರ್ಕಾರ ಸಮ್ಮತಿ
  • ಕೇಂದ್ರ ಸಚಿವ ರಾಜೀವ್ ರಂಜನ್ ಸಿಂಗ್ ಅವರನ್ನು ಭೇಟಿ ಮಾಡಿದ ಎಚ್‌ಡಿಕೆ, ಎಚ್‌ಡಿಆರ್
ಹಾಸನ: ಹಾಸನ ಮೆಗಾ ಡೇರಿ ವಿಸ್ತರಣಾ ಯೋಜನೆಗೆ ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ (ಘೆಈಈಆ) ಮೂಲಕ 150 ಕೋಟಿ ರೂ.ಸಾಲ ಸೌಲಭ್ಯ ಕೊಡಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ.
ಈ ಬಗ್ಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾಜಿ ಮಂತ್ರಿ, ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಡಿ. ರೇವಣ್ಣ ಅವರೊಂದಿಗೆ ಕೇಂದ್ರದ ಮೀನುಗಾರಿಕೆ, ಹೈನುಗಾರಿಕೆ ಮತ್ತು ಪಶುಸಂಗೋಪನಾ ಖಾತೆ ಸಚಿವ ರಾಜೀವ್ ರಂಜನ್ ಸಿಂಗ್ (ಲಲನ್ ಸಿಂಗ್) ಅವರನ್ನು ಗುರುವಾರ ಭೇಟಿಯಾಗಿ ಮನವಿ ಮಾಡಿದರು.
ಸಚಿವ ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿದ ಸಚಿವರು ರಾಷ್ಟ್ರೀಯ ಡೇರಿ ಅಭಿವೃದ್ಧಿ ಮಂಡಳಿ ಮೂಲಕ 150 ಕೋಟಿ ರೂ. ಸಾಲ ಮಂಜೂರು ಮಾಡಲು ಒಪ್ಪಿಗೆ ನೀಡಿದರು. ತಮ್ಮ ಮನವಿಗೆ ಸ್ಪಂದಿಸಿದ ಹೈನುಗಾರಿಕೆ ಸಚಿವರಿಗೆ ಕುಮಾರಸ್ವಾಮಿ ಕೃತಜ್ಞತೆ ಸಲ್ಲಿಸಿದರು.
ಹಾಸನ ಹಾಲು ಒಕ್ಕೂಟವು ಲಾಭದ ದಾರಿಯಲ್ಲಿ ನಡೆಯುತ್ತಿರುವ ಅತ್ಯುತ್ತಮ ಸಹಕಾರ ಒಕ್ಕೂಟವಾಗಿದೆ. ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳ ಹಾಲು ಉತ್ಪಾದಕರಿಗೆ ಅತಿದೊಡ್ಡ ಆಸರೆಯಾಗಿದೆ. 1977ರಲ್ಲಿ ಆರಂಭವಾದ ಈ ಒಕ್ಕೂಟವು ಪ್ರತಿದಿನ 14.5ರಿಂದ 15 ಲಕ್ಷ ಲೀಟರ್ ನಷ್ಟು ಹಾಲು ಸಂಗ್ರಹ ಮಾಡುತ್ತದೆ. ಸುಮಾರು ಒಂದು ಲಕ್ಷಕ್ಕೂ ಅಧಿಕ ಹಾಲು ಉತ್ಪಾದಕರಿಗೆ ಜೀವನೋಪಾಯ ಒದಗಿಸಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಸಚಿವ ಲಲನ್ ಸಿಂಗ್ ಅವರಿಗೆ ವಿವರಿಸಿದರು.
ನಿತ್ಯವೂ ಸಂಗ್ರಹ ಆಗುತ್ತಿರುವ ಹಾಲನ್ನು ಸಂಸ್ಕರಿಸಿ ಪ್ಯಾಕೆಟ್‌ಗಳಲ್ಲಿ ತುಂಬಿ ಮಾರಾಟ ಮಾಡುತ್ತಿದೆ ಹಾಗೂ ಅನೇಕ ಉಪ ಉತ್ಪನ್ನಗಳ ತಯಾರಿಸಿ ಲಾಭದ ಹಾದಿಯಲ್ಲಿ ಮುಂದೆ ಸಾಗುತ್ತಿದೆ. ಈಗ ಹಾಲು ಸಂಗ್ರಹಣೆಯ ಪ್ರಮಾಣ ಹೆಚ್ಚಾಗುತ್ತದೆ ಹಾಗೂ ಗ್ರಾಮೀಣ ಭಾಗದಲ್ಲಿ ಜೀವನೋಪಾಯ ವೃದ್ಧಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಹಾಸನ ಮೆಗಾ ಡೇರಿಯನ್ನು ಮತ್ತಷ್ಟು ವಿಸ್ತರಿಸಿ ಸಶಕ್ತಿಗೊಳಿಸಬೇಕಿದೆ. ಹೀಗಾಗಿ ಕೇಂದ್ರ ಸರ್ಕಾರದ ನೆರವು ಅಗತ್ಯವಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಮನವಿ ಮಾಡಿದರು.
ಮೊಸಳೆ ಹೊಸಹಳ್ಳಿ, ಮಾವಿನಕೆರೆ ರೈಲು ನಿಲ್ದಾಣಗಳ ಅಭಿವೃದ್ಧಿಗೆ ಮನವಿ:
ತಮ್ಮ ತವರು ಜಿಲ್ಲೆಯ ಮೊಸಳೆ ಹೊಸಹಳ್ಳಿ, ಮಾವಿನಕೆರೆ ರೈಲು ನಿಲ್ದಾಣಗಳ ಅಭಿವೃದ್ಧಿ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಚರ್ಚೆ ನಡೆಸಿದರು.
ಸಂಸತ್ ಭವನದಲ್ಲಿರುವ ತಮ್ಮ ಕಚೇರಿಗೆ ಬಂದ ರೈಲ್ವೆ ಸಚಿವ ಅಶ್ವಿನ್ ವೈಷ್ಣವ ಅವರಿಗೆ ತಮ್ಮ ಪ್ರಸ್ತಾವನೆಗಳನ್ನು ಸಲ್ಲಿಸಿ ಚರ್ಚಿಸಿದ ಕೇಂದ್ರ ಸಚಿವರು, ತಾವು ಹುಟ್ಟಿ ಬೆಳೆದ ಹೊಳೆನರಸೀಪುರ ತಾಲೂಕಿನ ಮೊಸಳೆಹೊಸಹಳ್ಳಿ ಹಾಗೂ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯಕ್ಕೆ ನೇರ ಸಂಪರ್ಕ ಕಲ್ಪಿಸುವ ಮಾವಿನಕೆರೆ ರೈಲು ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸಿ ಅತ್ಯಾಧುನಿಕವಾಗಿ ಅಭಿವೃದ್ಧಿ ಮಾಡಬೇಕು ಎಂದು ಮಾಜಿ ಪ್ರಧಾನಿ ವಿನಂತಿ ಮಾಡಿದರು.
ಇದಕ್ಕೆ ಸ್ಪಂದಿಸಿದ ರೈಲ್ವೆ ಸಚಿವರು ಪ್ರಸಕ್ತ ಸಂಸತ್ ಅಧಿವೇಶನ ಮುಗಿಯುವುದಕ್ಕೆ ಮೊದಲೇ ಈ ಬಗ್ಗೆ ವಿಸ್ತೃತ ವರದಿ ಪಡೆದುಕೊಳ್ಳಲಾಗುವುದು. ಮೊಸಳೆ ಹೊಸಹಳ್ಳಿ ರೈಲು ನಿಲ್ದಾಣವನ್ನು ಅತ್ಯಾಧುನಿಕವಾಗಿ ಅಭಿವೃದ್ಧಿಪಡಿಸಲಾಗುವುದು. ಧಾರ್ಮಿಕ ಕೇಂದ್ರ ಬೆಟ್ಟದ ರಂಗನಾಥ ಸ್ವಾಮಿ ದೇವಾಲಯಕ್ಕೆ ನೇರ ಸಂಪರ್ಕ ಕಲ್ಪಿಸುವ ಮಾವಿನಕೆರೆ ರೈಲು ನಿಲ್ದಾಣವನ್ನು ಪಾರಂಪರಿಕ ರೈಲು ನಿಲ್ದಾಣವನ್ನಾಗಿ ಅಭಿವೃದ್ಧಿ ಮಾಡಲು ಕ್ರಮ ವಹಿಸಲಾಗುವುದು ಎಂದು ರೈಲ್ವೆ ಸಚಿವರು ಭರವಸೆ ನೀಡಿದರು.
ಸಚಿವ ಎಚ್.ಡಿ. ರೇವಣ್ಣ ಇದ್ದರು.