ಬೂಕರ್ ಪ್ರಶಸ್ತಿ ಪುರಸ್ಕೃತ ಲೇಖಕಿ ಬಾನು ಮುಷ್ತಾಕ್ ಆನ್‌ಲೈನ್‌ನಲ್ಲಿ ಜನಗಣತಿ ಪ್ರಕ್ರಿಯೆಯಲ್ಲಿ ಭಾಗಿಯಾದರು. 
ಹಾಸನ

ದೇಶದ ಸಮಗ್ರ ಅಭಿವೃದ್ಧಿಗೆ ಜನಗಣತಿ ಅಡಿಪಾಯ

ಪ್ರಮುಖ ಮುಖ್ಯಾಂಶಗಳು

  • ದೇಶದ ಸಮಗ್ರ ಅಭಿವೃದ್ಧಿಗೆ ಜನಗಣತಿ ಅಡಿಪಾಯ
  • ಲೇಖಕಿ ಬಾನು ಮುಷ್ತಾಕ್ ಅಭಿಪ್ರಾಯ
ಹಾಸನ: ದೇಶದ ಸಮಗ್ರ ಅಭಿವೃದ್ಧಿಗೆ ಜನಗಣತಿ ಅತ್ಯಂತ ಮುಖ್ಯವಾದ ಅಡಿಪಾಯವಾಗಿದ್ದು, ಪ್ರತಿಯೊಬ್ಬ ನಾಗರಿಕನೂ ಜವಾಬ್ದಾರಿಯುತವಾಗಿ ಈ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದು ಲೇಖಕಿ ಬಾನು ಮುಷ್ತಾಕ್ ಹೇಳಿದರು.
ಸಾರ್ವಜನಿಕರಿಗೆ ಡಿಜಿಟಲ್ ಮೂಲಕ ಸ್ವಯಂ ಮಾಹಿತಿ ದಾಖಲಿಸುವ ಸೌಲಭ್ಯ ಒದಗಿಸಿರುವ ಹಿನ್ನೆಲೆಯಲ್ಲಿ ಆನ್‌ಲೈನ್ ಜನಗಣತಿ ಭಾಗಿಯಾಗಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಒಂದು ದೇಶದ ಸರ್ವತೋಮುಖ ಅಭಿವೃದ್ಧಿಗೆ ಸ್ಪಷ್ಟ ಮತ್ತು ನಿಖರ ಮಾಹಿತಿಯ ಅಗತ್ಯವಿದೆ. ಸರ್ಕಾರದ ಯೋಜನೆಗಳು, ಕಲ್ಯಾಣ ಕಾರ್ಯಕ್ರಮಗಳು ಹಾಗೂ ಅಭಿವೃದ್ಧಿ ರೂಪುರೇಷೆಗಳು ಜನರ ನಿಜವಾದ ಸ್ಥಿತಿಗತಿಗಳ ಆಧಾರದ ಮೇಲೆ ರೂಪುಗೊಳ್ಳಬೇಕು. ಈ ನಿಟ್ಟಿನಲ್ಲಿ ಜನಗಣತಿ ಮಹತ್ವದ ಮೂಲಾಧಾರವಾಗಿದ್ದು, ದೇಶದ ಭವಿಷ್ಯ ನಿರ್ಧಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಯಾವುದೇ ವದಂತಿಗಳು, ತಪ್ಪು ಮಾಹಿತಿಗಳು ಅಥವಾ ಪ್ರಚೋದನೆಗಳಿಗೆ ಒಳಗಾಗದೆ, ಧೈರ್ಯದಿಂದ ನಿಜವಾದ ಮಾಹಿತಿಯನ್ನು ನೀಡಬೇಕು. ಜನಗಣತಿ ಸಿಬ್ಬಂದಿಗೆ ಸಹಕಾರ ನೀಡಿ, ಸರಿಯಾದ ವಿವರಗಳನ್ನು ನೀಡುವುದು ನಾಗರಿಕರ ಕರ್ತವ್ಯವಾಗಿದೆ. ಇದರಿಂದ ದೇಶದ ಅಭಿವೃದ್ಧಿ ಯೋಜನೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ಜಾರಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ಜನಗಣತಿ ದೇಶದ ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ದಿಕ್ಕು ತೋರಿಸುವ ಮಹತ್ವದ ಸಾಧನವಾಗಿದ್ದು, ರಾಷ್ಟ್ರ ನಿರ್ಮಾಣದಲ್ಲಿ ಪ್ರತಿಯೊಬ್ಬ ನಾಗರಿಕನ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಜನಗಣತಿ ಯಶಸ್ವಿಯಾಗಲು ಸಾರ್ವಜನಿಕರು ಸಹಕರಿಸಬೇಕು ಎಂದರು.
ಈ ವೇಳೆ ಮಹಾನಗರ ಪಾಲಿಕೆ ಆಯುಕ್ತ ಕೃಷ್ಣಮರ್ತಿ, ಇಂಜಿನಿಯರ್ ಸತ್ಯನಾರಾಯಣ್ ಇತರರು ಉಪಸ್ಥಿತರಿದ್ದರು.