ಹೊಳೆನರಸೀಪುರ ತಾಲೂಕು ಎಸ್.ಅಂಕನಹಳ್ಳಿಯಲ್ಲಿ ರಸ್ತೆ ಡಾಂಬರೀಕರಣಕ್ಕೆ ಶಾಸಕ ಎಚ್.ಡಿ.ರೇವಣ್ಣ ಭೂಮಿಪೂಜೆ ನೆರವೇರಿಸಿದರು. ಪುಟ್ಟೇಗೌಡ, ಗ್ರಾಮಸ್ಥರು ಇದ್ದರು.
ಹೊಳೆನರಸೀಪುರ: ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿಯನ್ನು ಗ್ರಾಮಸ್ಥರು ಮಾಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ರೇವಣ್ಣ ಹೇಳಿದರು.
ತಾಲೂಕಿನ ಎಸ್.ಅಂಕನಹಳ್ಳಿ ಗ್ರಾಮದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹಲವು ವರ್ಷಗಳಿಂದ ಗ್ರಾಮದ ಮುಖ್ಯರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದರು. ಈ ಹಿಂದೆ ಈ ಗ್ರಾಮದ ಬೀದಿಯನ್ನು ಕಾಂಕ್ರೀಟ್ ರಸ್ತೆ ಮಾಡಲಾಗಿದೆ. ಗ್ರಾಮದ ಬಸವೇಶ್ವರ ದೇವಾಲಯ ನಿರ್ಮಾಣ ಮಾಡಿಕೊಡಲಾಗಿದೆ. ಗ್ರಾಮಸ್ಥರ ಮನವಿ ಮೇರೆಗೆ ಗ್ರಾಮದ ಅಭಿವೃದ್ಧಿಯನ್ನು ಮಾಡಲಾಗುವುದು ಎಂದು ಹೇಳಿದರು.
ರಸ್ತೆ ಡಾಂಬರೀಕರಣಕ್ಕೆ 3 ವರ್ಷದ ಹಿಂದೆ 1 ಕೋಟಿ ರೂ.ಗೆ ಟೆಂಡರ್ ಕರೆಯಲಾಗಿತ್ತು. ಕಾಂಗ್ರೆಸ್ ಸರ್ಕಾರ ಯಾವುದೇ ರಸ್ತೆ ಕಾಮಗಾರಿಗೆ ಹಣ ನೀಡುತ್ತಿಲ್ಲ. ಗುತ್ತಿಗೆದಾರರಿಗೆ 34 ಸಾವಿರ ಕೋಟಿ ರೂ.ಬಿಲ್ ಬಾಕಿ ಉಳಿಸಿಕೊಂಡಿದೆ. ಮೈಸೂರು ರಸ್ತೆಯಿಂದ ಎಸ್.ಅಂಕನಹಳ್ಳಿಗೆ ಬರಲು ಸಾಧ್ಯವೇ ಇಲ್ಲದಂತೆ ರಸ್ತೆ ಸಂಪೂರ್ಣ ಹಾಳಾಗಿದೆ. ಆದ್ದರಿಂದ ಗುತ್ತಿಗೆದಾರನ ಮನವೊಲಿಸಿ ಈ ರಸ್ತೆ ಕೆಲಸ ಮಾಡಿಸುತ್ತಿದ್ದೇನೆ ಎಂದರು.
ಕಾಂಗ್ರೆಸ್ ಸರ್ಕಾರ ರಸ್ತೆಗಳನ್ನು ಅಭಿವೃದ್ಧಿಪಡಿಸುತ್ತಿಲ್ಲ. ಕನಿಷ್ಠ ಗುಂಡಿ ಮುಚ್ಚಲೂ ಹಣ ನೀಡುತ್ತಿಲ್ಲ. ಚನ್ನರಾಯಪಟ್ಟಣ ರಸ್ತೆ ಗುಂಡಿ ಮುಚ್ಚಲು 75 ಲಕ್ಷ ರೂ.ಗೆ ಟೆಂಡರ್ ಆಗಿ ಕೆಲಸವನ್ನು ಪ್ರಾರಂಭಿಸಿದ್ದ ಗುತ್ತಿಗೆದಾರ ಪಟ್ಟಣದಿಂದ ಮಂಗಳಾಪುರದವರೆಗೆ ಗುಂಡಿಯನ್ನೂ ಮುಚ್ಚದೆ ಹೋಗಿದ್ದಾನೆ. ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಈ ಬಗ್ಗೆ ಕ್ರಮ ತೆಗೆದುಕೊಂಡು ಗುಂಡಿ ಮುಚ್ಚಿಸಿಲ್ಲ. ಇದಕ್ಕೂ ನನಗೂ ಸಂಬಂಧವೇ ಇಲ್ಲ ಎನ್ನುವಂತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪುಟ್ಟೇಗೌಡ, ಮುಖಂಡರು ಭಾಗವಹಿಸಿದ್ದರು.