-ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಡಿವೈಎಸ್‌ಪಿ ಗೋಪಿ ಮಾತನಾಡಿದರು. ರೇವಣ್ಣ, ಅಕ್ರಂ ಷರೀಫ್, ಸಿಗ್ಗಾವಿ ಇತರರಿದ್ದರು.
- ಡಿವೈಎಸ್‌ಪಿ ಗೋಪಿ ಹೇಳಿಕೆ
- ಇಲಾಖೆ ನಿಯಮ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ
ಬೇಲೂರಿನಲ್ಲಿ ಎಲ್ಲ ಧರ್ಮೀಯರು ಸೌಹಾರ್ದತೆಯಿಂದ ಹಬ್ಬ ಹರಿದಿನಗಳನ್ನು ಯಾವುದೆ ಅಹಿತಕರ ಘಟನೆಗೆ ಅವಕಾಶವಿಲ್ಲದೆ ಆಚರಿಸುತಿದ್ದು, ಈದ್ ಮಿಲಾದ್ ಹಬ್ಬವನ್ನೂ ಸಹ ಇಲಾಖೆ ನಿಯಮಗಳನ್ನು ಮೀರದೆ ಆಚರಿಸಬೇಕು. ಯಾರಾದರೂ ನಿಯಮ ಮೀರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅರಸೀಕೆರೆ ಡಿವೈಎಸ್‌ಪಿ ಗೋಪಿ ಹೇಳಿದರು.
ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ಸರ್ವ ಧರ್ಮಿಯರ ಶಾಂತಿ ಸಭೆಯಲ್ಲಿ ಮಾತನಾಡಿದರು.
ಪ್ರತಿಯೊಬ್ಬ ಧರ್ಮಿಯರೂ ಅವರವರ ಹಬ್ಬಗಳನ್ನು ಸಂತೋಷದಿಂದ ಶಾಂತಿಯುತವಾಗಿ ಆಚರಿಸಬೇಕು. ಸೌಹಾರ್ದತೆಗೆ ಹೆಸರಾಗಿರುವ ಬೇಲೂರಿನಲ್ಲಿ ಇಲ್ಲಿವರಗೆ ಯಾವುದೆ ರೀತಿಯಲ್ಲಿ ಅಹಿತಕರ ಘಟನೆಗೆ ಅವಕಾಶವಾಗಿಲ್ಲ. ಮುಂದೆಯೂ ಆಗದಂತೆ ಎಲ್ಲರೂ ಇಲಾಖೆಯೊಂದಿಗೆ ಸಹಕಾರ ನೀಡಬೇಕು. ಮೆರವಣಿಗೆ ಸಂದರ್ಭ ಆಯೋಜಕರು ಕಾನೂನಿನಡಿ ಬರುವ ಕೆಲ ನಿಯಮಗಳನ್ನು ಪಾಲಿಸಬೇಕು. ಈದ್ ಮಿಲಾದ್ ಆಚರಿಸುವ ಸಂಘಟಕರು ಪೊಲೀಸ್‌ಇಲಾಖೆಯ ಸಂಪರ್ಕದಲ್ಲಿರಬೇಕು. ಯಾರೂ ಸ್ವತಂತ್ರವಾಗಿ ನಿರ್ಧಾರ ತೆಗೆದು ಕೊಳ್ಳಬಾರದು. ಡಿಜೆ ಸೌಂಡ್ ಸಿಸ್ಟಮ್‌ಗೆ ಅವಕಾಶವಿಲ್ಲ. ಸಾಮಾಜಿಕ ಜಾಲ ತಾಣಗಳಲ್ಲಿ ಇಲ್ಲ ಸಲ್ಲದ ಸುದ್ದಿ ಬಿತ್ತರಿಸಿದರೆ ಮತ್ತು ಕೆಟ್ಟ ಘೋಷಣೆ ಕೂಗಿದರೆ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎಚ್ಚರಿಸಿದರು.
ಪೊಲೀಸ್ ಇಲಾಖೆಯಿಂದ ಕೇಳಿದ ಎಲ್ಲ ಮಾಹಿತಿ ನೀಡಬೇಕು. ಫ್ಲೆಕ್ಸ್ ಹಾಕುವಾಗ ವಿವಾಧಿತ ಹೆಸರು ಫೋಟೋಗಳನ್ನು ಹಾಕಬಾರದು. ಮೆರವಣಿಗೆ ತೆರಳುವ ರೂಟ್ ಮ್ಯಾಪ್ ಹಾಕಿಕೊಂಡು ಸರಿಯಾಗಿ ಹೋದರೆ ಪೊಲೀಸ್‌ಇಲಾಖೆ ಯಾರನ್ನೂ ಮುಟ್ಟುವುದಿಲ್ಲ. ಸೂಕ್ಷ್ಮ ಸ್ಥಳಗಳಲ್ಲಿ ಬೇಗ ಸಾಗಬೇಕು. ಯಾರಿಗೆ ಏನೇ ಆದರೂ ನಾವೇ ನೋಡಬೇಕಾಗುತ್ತದೆ. ಬೈಕ್‌ಗಳಲ್ಲಿ 3 ರಿಂದ 4 ಜನ ಕುಳಿತು ಓಡಾಡುವುದು, ವೀಲಿಂಗ್ ಮಾಡುವುದನ್ನು ಬಿಟ್ಟು ಸಂತೋಷದಿಂದ ಹಬ್ಬ ಆಚರಿಸಲು ಯುವಕರು ಮುಂದಾಗಬೇಕು ಎಂದರು.
ಮೆರವಣಿಗೆಯ ಸಂಪೂರ್ಣ ವಿಡಿಯೋ ಮಾಡುವುದರಿಂದ ಪೊಲೀಸ್ ಮಾರ್ಗದರ್ಶನದಂತೆ ನಡೆದುಕೊಳ್ಳಬೇಕು. ರಸ್ತೆ ಅಕ್ಕಪಕ್ಕದಲ್ಲಿ ಫ್ಲೆಕ್ಸ್ ಹಾಕಬಾರದು. ಹಾಕಿದರೆ ತಕ್ಷಣ ತೆಗೆಸಲು ಕ್ರಮ ಕೈಗೊಳ್ಳಲಾಗುವುದು. ಮೆರವಣಿಗೆ ವೇಳೆ ಸಂಘಟಕರು ಎಚ್ಚರಿಕೆಯಿಂದ ಇರಬೇಕು ಎಂದರು.
ಪೊಲೀಸ್ ಇನ್‌ಸ್ಪೆಕ್ಟರ್ ರೇವಣ್ಣ ಮಾತನಾಡಿ, ಎಲ್ಲರೂ ಮಹಮ್ಮದ್ ಪೈಗಂಬರ್ ಜಯಂತಿಯನ್ನು ಅದ್ದೂರಿಯಾಗಿ ಸಂತೋಷದಿಂದ ಆಚರಿಸಿ. ಶಾಂತಿ ಸುವ್ಯವಸ್ಥೆ ಕಾಪಾಡಬೇಕು. ಸಮಿತಿ ಮುಖಂಡರು ಕಾರ್ಯಕ್ರಮಗಳನ್ನು ಉತ್ತಮವಾಗಿ ಆಯೋಜಿಸಬೇಕು. ಯಾವುದೇ ಗಲಾಟೆ ಘರ್ಷಣೆ ಇಲ್ಲದೆ ಸಂತೋಷದಿಂದ ಹಬ್ಬ ಆಚರಿಸಲು ಮುಂದಾಗಬೇಕು ಎಂದರು.
ಪುರಸಭೆ ಅಧ್ಯಕ್ಷ ಅಕ್ರಂ ಷರೀಫ್ ಮಾತನಾಡಿ, ಪ್ರತಿವರ್ಷದಂತೆ ಈದ್ ಮಿಲಾದ್ ಆಚರಿಸಲಾಗುತ್ತದೆ. ಆದರೆ ಫ್ಲೆಕ್ಸ್ ಬ್ಯಾನರ್ ಹಾಕಲು ಪರ್ಮಿಷನ್ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯಿಂದ ಏನೇನು ಕ್ರಮ ಕೈಗೊಳ್ಳುತ್ತಾರೊ ಅದರಂತೆ ನಡೆದುಕೊಳ್ಳಬೇಕು. ಬೇರೆ ಜಿಲ್ಲೆಯದ್ದು ನಮಗೆ ಬೇಡ. ನಾವೆಲ್ಲ ಸಂತೋಷದಿಂದ ಒಗ್ಗಟ್ಟಾಗಿ ಹಬ್ಬ ಆಚರಿಸೋಣ ಎಂದರು.
ಪಿಎಸ್‌ಐ ಶಿವನಗೌಡ.ಜಿ.ಪಾಟೀಲ್, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಸಿಗ್ಗಾವಿ, ಆರೋಗ್ಯಾಧಿಕಾರಿ ಜ್ಯೋತಿ. ಸದಸ್ಯ ಜಮಾಲುದ್ದೀನ್, ವೀರಾಂಜನೇಯಸ್ವಾಮಿ ಟ್ರಸ್ಟ್ ಅಧ್ಯಕ್ಷ ಮೋಹನ್, ಕರವೇ ಅಧ್ಯಕ್ಷ ಚಂದ್ರಶೇಖರ್ , ಅಬ್ದುಲ್ ಖಾದರ್, ಆದಿಲ್, ಇಫಿ ಸೇರಿದಂತೆ ಇತರರಿದ್ದರು.