ಬೇಲೂರಿನಲ್ಲಿ ಆಯೋಜಿಸಿದ್ದ ಪೂರ್ವ ಸಿದ್ಧತಾ ಯೋಗ ಜಾಥಾಗೆ ಶಾಸಕ ಎಚ್.ಕೆ.ಸುರೇಶ್ ಚಾಲನೆ ನೀಡಿದರು. ಶ್ರೀಧರ್ ಕಂಕನವಾಡಿ, ಭಾಗ್ಯಮ್ಮ, ಅನ್ವರ್ ಭಾಷಾ,ಯತೀಶ್, ಬಸವರಾಜ್ ಸಿಗ್ಗಾವಿ, ಶೇಖರಪ್ಪ ಇತರರಿದ್ದರು.
ಬೇಲೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಆರೋಗ್ಯಕರ ವೃದ್ಧಾಪ್ಯಕ್ಕಾಗಿ ಯೋಗ ಎಂಬ ಘೋಷವಾಕ್ಯದೊಂದಿಗೆ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಆಯುಷ್ ಇಲಾಖೆ, ತಾಲೂಕು ಆಡಳಿತ, ಯೋಗ ಸಂಘಟನೆಗಳ ಸಹಯೋಗದಲ್ಲಿ ಇಲ್ಲಿನ ಶ್ರೀ ಚನ್ನಕೇಶವಸ್ವಾಮಿ ದೇಗುಲ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಪೂರ್ವ ಸಿದ್ಧತಾ ಯೋಗ ಜಾಥಾಗೆ ಶಾಸಕ ಎಚ್.ಕೆ.ಸುರೇಶ್ ಚಾಲನೆ ನೀಡಿದರು.
ಶಾಸಕ ಎಚ್.ಕೆ.ಸುರೇಶ್ ಮಾತನಾಡಿ, ಬೇಲೂರು-ಹಳೇಬೀಡು ದೇಗುಲಗಳು ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಸಿದ್ಧತೆ ನಡೆಯುತ್ತಿವೆ. ಜೂ.21ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಯೋಗ ಪಟುಗಳು, ವಿದ್ಯಾರ್ಥಿಗಳು ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸುವಂತೆ ಜಾಗೃತಿ ಮೂಡಿಸಲು ಜಾಥಾ ಹಮ್ಮಿಕೊಳ್ಳಲಾಗಿದೆ ಎಂದರು.
ಹಳೇಬೀಡಿನಲ್ಲಿ ಎರಡು ಬಾರಿ ಕೇಂದ್ರ ಸಚಿವರ ನೇತೃತ್ವದಲ್ಲಿ ಯೋಗ ದಿನಾಚರಣೆ ನಡೆದಿದ್ದು, 12ನೇ ಯೋಗ ದಿನಾಚರಣೆ ಬೇಲೂರಿನಲ್ಲಿ ಆಯೋಜಿಸುವಂತೆ ಕೇಂದ್ರ ಸರ್ಕಾರಕ್ಕೆ ವಿಶೇಷ ಮನವಿ ಸಲ್ಲಿಸಲಾಗಿದೆ. ಈ ಬಾರಿಯೂ ದೇವಾಲಯ ಆವರಣದಲ್ಲಿ ಯೋಗ ದಿನ ಆಚರಿಸಲಾಗುವುದು. ಯೋಗವು ಕೇವಲ ಒಂದು ದಿನದ ಕಾರ್ಯಕ್ರಮವಾಗಿರದೆ ಪ್ರತಿಯೊಬ್ಬರ ದೈನಂದಿನ ಭಾಗವಾಗಬೇಕು. ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಯೋಗದ ಮಹತ್ವ ಅಪಾರವಾಗಿದ್ದು, ಸಾರ್ವಜನಿಕರು ನಿರಂತರವಾಗಿ ಯೋಗಾಭ್ಯಾಸ ಅಳವಡಿಸಿಕೊಳ್ಳಬೇಕು ಎಂದರು.
ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಮಾತನಾಡಿ, ಜಾಗೃತಿ ಜಾಥಾ ಚನ್ನಕೇಶವಸ್ವಾಮಿ ದೇವಾಲಯದಿಂದ ಜೂನಿಯರ್ ಕಾಲೇಜು ಮೈದಾನದವರೆಗೆ ಸಾಗಲಿದೆ. ಈ ವೇಳೆ ಸಾರ್ವಜನಿಕರಿಗೆ ಯೋಗದ ಮಹತ್ವ, ಆರೋಗ್ಯಕರ ಜೀವನಶೈಲಿ ಹಾಗೂ ದೈಹಿಕ-ಮಾನಸಿಕ ಕ್ಷೇಮದ ಬಗ್ಗೆ ಅರಿವು ಮೂಡಿಸಲಾಗುವುದು. ಜೂ.21ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಯೋಗದ ಸಂದೇಶವನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವಂತೆ ಸಲಹೆ ನೀಡಿದರು.
ಬಿಇಒ ಭಾಗ್ಯಮ್ಮ, ಜಿಪಂ ಕುಡಿಯುವ ನೀರು ಸರಬರಾಜು ವಿಭಾಗದ ಎಇಇ ಅನ್ವರ್ ಭಾಷಾ, ವಲಯ ಅರಣ್ಯಧಿಕಾರಿ ಯತೀಶ್, ಪುರಸಭೆ ಮುಖ್ಯಾಧಿಕಾರಿ ಬಸವರಾಜ್ ಸಿಗ್ಗಾವಿ, ಪಿಎಸ್‌ಐ ಶೇಖರಪ್ಪ ಇತರರಿದ್ದರು.