ಹಾಸನಾಂಬ ಕಲಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮವನು ಗಣ್ಯರು ಉದ್ಘಾಟಿಸಿದರು. ಡಾ.ಎಚ್.ಎಲ್.ಮಲ್ಲೇಶ್‌ಗೌಡ, ಎನ್.ಬಿ.ವೀರಭದ್ರಯ್ಯ, ಹೇಮಂತ್, ಎಚ್.ಪಿ.ತಾರಾನಾಥ, ಎಚ್.ಟಿ.ಬಸವರಾಜು, ಮಲ್ಲಯ್ಯ, ಉಪ ತಹಸೀಲ್ದಾರ್ ಸೋಮಣ್ಣ ಇತರರಿದ್ದರು. 
ಹಾಸನ

ಬುದ್ಧ ಮಾನವ ಕುಲಕ್ಕೆ ಶಾಂತಿ ಮಾರ್ಗ ತೋರಿದ ಮಹಾತ್ಮ

ಪ್ರಮುಖ ಮುಖ್ಯಾಂಶಗಳು

  • ಬುದ್ಧ ಮಾನವ ಕುಲಕ್ಕೆ ಶಾಂತಿ ಮಾರ್ಗ ತೋರಿದ ಮಹಾತ್ಮ
  • ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ ಬಣ್ಣನೆ
ಹಾಸನ: ಬುದ್ಧ ಕೇವಲ ಒಂದು ಧರ್ಮದ ಸ್ಥಾಪಕರಲ್ಲ, ಅವರು ಮಾನವಕುಲಕ್ಕೆ ಶಾಂತಿ ಮಾರ್ಗವನ್ನು ತೋರಿದ ಮಹಾತ್ಮ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಎಚ್.ಎಲ್.ಮಲ್ಲೇಶ್‌ಗೌಡ ಬಣ್ಣಿಸಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಾಸನಾಂಬ ಕಲಾ ಕ್ಷೇತ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಶ್ರೀ ಭಗವಾನ್ ಬುದ್ಧ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮನುಷ್ಯ ಅಸೆಪಡುವುದು ಸಹಜವಾದ ಗುಣ, ಅತಿ ಆಸೆಪಡುವುದು ಮನುಷ್ಯನ ವೈಯಕ್ತಿಕ ನೆಮ್ಮದಿಯನ್ನು ಹಾಳು ಮಾಡುತ್ತದೆ. ಬುದ್ಧನ ತತ್ವಗಳಲ್ಲಿ ಅತಿ ಶ್ರೇಷ್ಠವಾದ ತತ್ವವೆಂದರೆ ಆಸೆಯೇ ದುಃಖಕ್ಕೆ ಮೂಲ ಎಂಬುದು, ಬುದ್ಧನು ಜಗತ್ತಿಗೆ ಶಾಂತಿ, ಅಹಿಂಸೆ, ಪ್ರೀತಿ ಮತ್ತು ಸಹಾನುಭೂತಿಯ ಮಾರ್ಗವನ್ನು ಬೋಧಿಸುವ ಮೂಲಕ ಆಸೆಯೇ ದುಃಖಕ್ಕೆ ಮೂಲ ಎಂದು ಸಾರಿದನು.
ಪ್ರತಿಯೊಬ್ಬ ಮನುಷ್ಯನು ಬುದ್ಧನ ತತ್ವವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡರೆ ಜೀವನ ಶಾಂತಿಯುತವಾಗಿರುತ್ತದೆ. ಇಂದಿನ ಸಂಘರ್ಷಮಯ ಜಗತ್ತಿನಲ್ಲಿ ಬುದ್ಧನ ತತ್ವಗಳು ಅತ್ಯಂತ ಪ್ರಸ್ತುತವಾಗಿವೆ, ಅಹಿಂಸೆ, ಶಾಂತಿ ಮತ್ತು ಪ್ರೀತಿಯಿಂದ ಮಾತ್ರ ಜಗತ್ತಿನ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಬುದ್ಧ ಜಗತ್ತಿಗೆ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಧರ್ಮಚಾರಿ ಬೌದ್ಧ ಮಹಾಸಭಾ ಉಪನ್ಯಾಸಕ ಎನ್.ಬಿ.ವೀರಭದ್ರಯ್ಯ ಕಾರ್ಯಕ್ರಮ ಕುರಿತು ಮಾತನಾಡಿ, ಭಗವಾನ್ ಬುದ್ಧ ಜಯಂತಿಯನ್ನು ಧರ್ಮದ ಅನುಯಾಯಿಗಳು ಮತ್ತು ಶಾಂತಿಪ್ರಿಯರು ಜಗತ್ತಿನಾದ್ಯಂತ ಅತ್ಯಂತ ಭಕ್ತಿ-ಭಾವದಿಂದ ಆಚರಿಸುವ ಪ್ರಮುಖ ಹಬ್ಬವಾಗಿದೆ, ಭಗವಾನ್ ಬುದ್ಧ ಜಯಂತಿ ನಮ್ಮ ಜೀವನದಲ್ಲಿ ಸತ್ಯ, ಅಹಿಂಸೆ ಮತ್ತು ಪ್ರೀತಿ ಎಂಬ ಮೌಲ್ಯಗಳನ್ನು ಬೆಳೆಸಲು ಪ್ರೇರಣೆ ನೀಡುತ್ತದೆ ಎಂದರು.
ಜಿಲ್ಲಾ ನೌಕರರ ಸಂಘದ ಕೋಶ್ಯಾಧ್ಯಕ್ಷ ಕೆ.ಆರ್.ಹೇಮಂತ್, ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಾಯಕ ನಿರ್ದೇಶಕ ಎಚ್.ಪಿ.ತಾರಾನಾಥ, ಬಸವರಾಜು ಎಚ್.ಟಿ.ಮಲ್ಲಯ್ಯ, ಉಪ ತಹಸೀಲ್ದಾರ್ ಸೋಮಣ್ಣ ಇತರರಿದ್ದರು.