ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಬಿಎಸ್‌ಎನ್‌ಎಲ್ ನಿವೃತ್ತ ನೌಕರರು ಹಾಸನ ನಗರದ ಬಿಎಸ್‌ಎನ್‌ಎಲ್ ಭವನದ ಮುಂದೆ ಪ್ರತಿಭಟನೆ ನಡೆಸಿದರು. ಸಂಪತ್ ಕುಮಾರ್, ಶಿವಣ್ಣ, ಕಾಂತರಾಜು, ರಾಜು, ಫೈರೋಜ್ ಇತರರಿದ್ದರು.  
ಹಾಸನ

ಬಿಎಸ್‌ಎನ್‌ಎಲ್ ನಿವೃತ್ತ ನೌಕರರ ಪ್ರತಿಭಟನೆ

ಪ್ರಸಿನ್ ಕೆ.ಆರ್

ಪ್ರಮುಖ ಮುಖ್ಯಾಂಶಗಳು

  • ಬಿಎಸ್‌ಎನ್‌ಎಲ್ ನಿವೃತ್ತ ನೌಕರರ ಪ್ರತಿಭಟನೆ
  • ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯ
ಹಾಸನ: ಡಿಎ ಪಾವತಿ ಸೇರಿದಂತೆ ನಾನಾ ಬೇಡಿಕೆ ಈಡೇರಿಸಲು ಒತ್ತಾಯಿಸಿ ಬಿಎಸ್‌ಎನ್‌ಎಲ್ ನಿವೃತ್ತ ನೌಕರರ ಎಲ್ಲ ಸಂಘಟನೆಗಳ ವತಿಯಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ ಭಾಗವಾಗಿ ನಗರದ ಬಿಎಸ್‌ಎನ್‌ಎಲ್ ಭವನದ ಮುಂದೆ ಬುಧವಾರ ಅಖಿಲ ಭಾರತ ಬಿಎಸ್‌ಎನ್‌ಎಲ್ ಡಿಒಟಿ ನಿವೃತ್ತ ನೌಕರರು ಪ್ರತಿಭಟನೆ ನಡೆಸಿದರು.
ನಗರದ ಬಿ.ಎಂ. ರಸ್ತೆ ಬಳಿ ಇರುವ ಬಿಎಸ್‌ಎನ್‌ಎಲ್ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಕ್ಕೂ ಅಧಿಕ ನಿವೃತ್ತ ನೌಕರರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಬೇಡಿಕೆಗಳನ್ನೊಳಗೊಂಡ ಫಲಕಗಳನ್ನು ಹಿಡಿದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದರು. ಡಿಎ ಪಾವತಿ ತಡೆಹಿಡಿದಿರುವುದು ನಿವೃತ್ತ ನೌಕರರ ಜೀವನವನ್ನು ಸಂಕಷ್ಟಕ್ಕೆ ತಳ್ಳಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರದ ನಿರ್ಲಕ್ಷೃ ಧೋರಣೆಯಿಂದ ಪಿಂಚಣಿದಾರರು ಆರ್ಥಿಕವಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ತಮ್ಮ ಅಳಲು ತೋಡಿಕೊಂಡರು.
ಈ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ನಿವೃತ್ತ ನೌಕರ ಸಂಪತ್‌ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹೊಸ ನಿಯಮಗಳನ್ನು ಸೇರಿಸುವ ಮೂಲಕ ಪೆನ್ಷನ್ ರಿವಿಷನ್ ಹಾಗೂ ಟಿಎ ನೀಡುವ ಪ್ರಕ್ರಿಯೆಗೆ ಅಡ್ಡಿ ಉಂಟುಮಾಡಿದೆ ಎಂದು ಟೀಕಿಸಿದರು.
ಇತ್ತೀಚಿನ ನೀತಿಗಳ ಪ್ರಕಾರ ಭವಿಷ್ಯದಲ್ಲಿ ಯಾವುದೇ ಪೇ ಕಮಿಷನ್ ಅಥವಾ ರಿವಿಷನ್ ನಡೆದರೂ ಅದರ ಅನುಸಾರ ಪಿಂಚಣಿ ಪರಿಷ್ಕರಣೆ ಮಾಡುವುದಿಲ್ಲ ಹಾಗೂ ಟಿಎ ನೀಡುವುದಿಲ್ಲ ಎಂಬ ರೀತಿಯ ಅಸ್ಪಷ್ಟತೆ ಉಂಟಾಗಿದೆ ಎಂದು ಹೇಳಿದರು.
ಅದರ ಜತೆಗೆ, ಜನವರಿ 2026ರಿಂದ ನೀಡಬೇಕಾಗಿದ್ದ ಡಿಎ ಪಾವತಿಯನ್ನು ಸರ್ಕಾರ ತಡೆಹಿಡಿದಿರುವುದು ಅತ್ಯಂತ ಖಂಡನೀಯ. ಅಫಂಡಬಿಲಿಟಿ ಎಂಬ ಶರತ್ತು ವಿಧಿಸುವ ಮೂಲಕ ಸರ್ಕಾರ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. ಇದು ನಿವೃತ್ತ ನೌಕರರ ಮೇಲಿನ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲಾ ಪೆನ್ಷನ್ ಸಂಘಟನೆಗಳು ಒಗ್ಗಟ್ಟಿನಿಂದ ಈ ಹೋರಾಟ ನಡೆಸುತ್ತಿದ್ದು, ಸರ್ಕಾರ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಪ್ರತಿಭಟನಾಕಾರರು ತಿಳಿಸಿದರು. ನಿವೃತ್ತ ನೌಕರರಾದ ಶಿವಣ್ಣ, ಕಾಂತರಾಜು, ರಾಜು, ಫೈರೋಜ್, ಸಿದ್ದೇಗೌಡ, ದೇವರಾಜು, ನಾಗರಾಜ್, ರಾಮಚಂದ್ರ, ನಿರ್ವಾಹಣೆಗೌಡ ಇತರರಿದ್ದರು.